ಬೀದಿ ವ್ಯಾಪಾರಿಗಳಲ್ಲಿ ಒಗ್ಗಟ್ಟು ಅವಶ್ಯ: ಸುರೇಶ್
ಸೊರಬ: ಬೀದಿಬದಿ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುವಾಗ ಸಾರ್ವಜನಿಕರಿಂದ ತೊಂದರೆ ಹಾಗೂ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಹಾಗೂ ವ್ಯಾಪಾರದಲ್ಲಿ ಒಗ್ಗಟ್ಟನ್ನು ಕಾಪಾಡಿಕೊಳ್ಳಲು ಸಂಘಟನೆ ಬಹುಮುಖ್ಯ ಎಂದು ಮುಖ್ಯಾಧಿಕಾರಿ ಎಂ.ಕೆ. ಸುರೇಶ್ ತಿಳಿಸಿದರು. ಪಟ್ಟಣ ಪಂಚಾಯಿತಿ ಆವರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶಾನುಸಾರ ಕೇಂದ್ರ ಸರ್ಕಾರ ರಾಷ್ಟ್ರೀಯ ನಗರ ಬೀದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ, ನಿಯಂತ್ರಣ ಕುರಿತ ಪ್ರಕ್ರಿಯೆ ಜಾರಿಗೊಳಿಸುವ ಸಲುವಾಗಿ ಕರೆದಿದ್ದ ಪಪಂ ವ್ಯಾಪ್ತಿಯ ಬೀದಿ ವ್ಯಾಪಾರಿಗಳ ಸಮಿತಿ ರಚಿಸಿ ಮಾತನಾಡಿದರು. ಸಮಿತಿ ಪ್ರತಿನಿಧಿಗಳನ್ನಾಗಿ ದುರ್ಗಪ್ಪ, ವೀರೇಶ್, ಅಧ್ಯಕ್ಷರಾಗಿ ಪಪಂ ಮುಖ್ಯಾಧಿಕಾರಿ, ಸಮಿತಿಯಲ್ಲಿ ಸಿಪಿಐ, ಪಪಂ ಅಧ್ಯಕ್ಷ, ಉಪಾಧ್ಯಕ್ಷ, ಟಿಎಚ್ಒ, ಸರ್ವೋದಯ ಗ್ರಾಮೀಣಾಧಿಭಿವೃದ್ಧಿ ಸಂಸ್ಥೆ ಅಧ್ಯಕ್ಷರು, ಕಿರಿಯ ಸಹಾಯಕ ಅಭಿಯಂತರರು, ವರ್ತಕ ಸಂಘದ ಅಧ್ಯಕ್ಷರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಸಭೆ ಕರೆದು ಸಮಿತಿಯ ರೂಪು ರೇಷಗಳ ಬಗ್ಗೆ ಚರ್ಚಿಸಲಾಯಿತು. ಸಭೆ ಅಧ್ಯಕ್ಷತೆ ಪಪಂ ಅಧ್ಯಕ್ಷ ಪ್ರಶಾಂತ ಮೇಸ್ತ್ರಿ ವಹಿಸಿದ್ದರು. ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಎಂ.ಡಿ. ಉಮೇಶ್, ಮಹೇಶ್ಗೌಳಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ದೇವದಾಸ್, ವರ್ತಕರ ಸಂಘದ ಅಧ್ಯಕ್ಷ ಚೆನ್ನಬಸಪ್ಪ, ದುರ್ಗಪ್ಪ, ವೀರೇಶ್, ರಾಮು, ರತ್ನಮ್ಮ, ಸೆಲ್ಜಾ ಇತರರಿದ್ದರು.
ಸಾಗರಕ್ಕೆ ಹೆರಿಟೇಜ್ ಮನ್ನಣೆಗೆ ಪ್ರಸ್ತಾವ: ಕಾಗೋಡು ತಿಮ್ಮಪ್ಪ
ಸಾಗರ: ಸಾಗರ ನಗರ ಅತ್ಯಂತ ವ್ಯವಸ್ಥಿತವಾಗಿ ರೂಪುಗೊಂಡಿದ್ದು, ಈಗಾಗಲೆ ಹೆರಿಟೇಜ್ ಕ್ಷೇತ್ರವೆಂಬ ಪಟ್ಟಿಯಡಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವೆ ಸಲ್ಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು. ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ದಿ ಯೋಜನೆಯಡಿ 15 ಕೋಟಿ ವೆಚ್ಚದ ರಸ್ತೆ, ಚರಂಡಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ನಗರವ್ಯಾಪ್ತಿಯಲ್ಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಿರುವವರಿಗೆ ಆಶ್ರಯ ನಿವೇಶನ ನೀಡುವ ಸಂಬಂಧ ಆಶ್ರಯ ಸಮಿತಿ ಪರಿಶೀಲನೆ ನಡೆಸುತ್ತಿದೆ. ಹಿಂದೆ ಆಶ್ರಯ ನಿವೇಶನ ಪಡೆದು ಮನೆ ಕಟ್ಟಿಕೊಳ್ಳದೆ ಇರುವವರಿಗೆ ನೋಟಿಸ್ ಜಾರಿ ಮಾಡಿ. ಅದಕ್ಕೂ ಉತ್ತರ ನೀಡದೆ ಹೋದರೆ ಆ ನಿವೇಶನ ಮುಟ್ಟುಗೋಲು ಹಾಕಿ ನಿವೇಶನ ಇಲ್ಲದವರಿಗೆ ವಿತರಿಸಿ. ಪ್ರಥಮ ಹಂತದಲ್ಲಿ ಕನಿಷ್ಠ 500 ಜನರಿಗಾದರೂ ಆಶ್ರಯ ಹಕ್ಕುಪತ್ರ ನೀಡುವ ಉದ್ದೇಶ ಹೊಂದಲಾಗಿದೆ ಎಂದರು. ನಗರಸಭೆ ಅಧ್ಯಕ್ಷೆ ಎನ್. ಲಲಿತಮ್ಮ ಅಧ್ಯಕ್ಷತೆ ವಹಿಸಿದ್ದರು. ಅಂಜಲಿ ಮತ್ತು ಸಂಗಡಿಗರು ಪ್ರಾರ್ಥಿಸಿ, ಪೌರಾಯುಕ್ತ ಚಂದ್ರಶೇಖರ್ ಸ್ವಾಗತಿಸಿ, ರವಿ ಜಂಬಗಾರು ನಿರೂಪಿಸಿದರು.
ನ್ಯಾಯಾಲಯ ತಡೆಯಾಜ್ಞೆ
ಭದ್ರಾವತಿ: ತಾಲೂಕಿನ ಅಂತರಗಂಗೆ ಗ್ರಾಮದ ಶ್ರೀರಾಘವೇಂದ್ರ ಶಾಲೆಯ ಮಾನ್ಯತೆ ಬಿಇಒ ಹಿಂಪಡೆದಿರುವಂತೆ ನೀಡಿದ ಪ್ರಕಟಣೆಗೆ ಪ್ರತಿಕ್ರಿಯಿಸಿರುವ ಶ್ರೀರಾಘವೇಂದ್ರ ಎಜುಕೇಶನ್ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿಯು ಮೇ 22 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಜೂ.17ರಂದು ನ್ಯಾಯಾಲಯ ಮಾನ್ಯತೆ ಹಿಂಪಡಿತ ಸೂಚನೆಗೆ ತಡೆಯಾಜ್ಞೆಯನ್ನು ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಆಡಳಿತ ಮಂಡಳಿ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಿಕೊಳ್ಳಲು ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದಕ್ಕೆ ಚಾಲನೆ ಸಹ ನೀಡಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

