ಶಿವಮೊಗ್ಗ

ಹೊಸ ವಿದ್ಯುತ್ ಚಿತಾಗಾರ ಪ್ರಮುಖ ರಸ್ತೆ ಅಗಲೀಕರಣ

Published On :

ಶಿವಮೊಗ್ಗ: ಮಂಡ್ಲಿಯಲ್ಲಿ ವಿದ್ಯುತ್ ಚಿತಾಗಾರ, ಮೂರು ಪ್ರಮುಖ ರಸ್ತೆಗಳ ಅಗಲೀಕರಣ, ಎರಡು ಪಾರ್ಕ್‌ಗಳ ಅಭಿವೃದ್ಧಿ ಸೇರಿದಂತೆ ನಗರದಲ್ಲಿ ಮುಂದೆ ಕಾರ್ಯಗತಗೊಳ್ಳುವ ಯೋಜನೆಗಳನ್ನು ಶಾಸಕ ಕೆ.ಬಿ.ಪ್ರಸನ್ನಕುಮಾರ್ ಪ್ರಕಟಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಮುಖ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ರು. 250 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಇದರಲ್ಲಿ ವಿವಿಧ ಕಾಮಗಾರಿ ನಡೆಸಲಾಗುತ್ತಿದೆ ಎಂದು ಹೇಳಿದರು.
ವಿದ್ಯುತ್ ಚಿತಾಗಾರ: ನಗರ ವ್ಯಾಪ್ತಿಯ ಮಂಡ್ಲಿಯಲ್ಲಿರುವ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರ  ನಿರ್ಮಾಣ ಮಾಡಲು ಯೋಜನೆ ರೂಪುಗೊಂಡಿದ್ದು ಟೆಂಡರ್ ಕರೆಯಲು ಪ್ರಕ್ರಿಯೆ ನಡೆದಿದೆ. ರು. 140 ಲಕ್ಷ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲಾಗುತ್ತಿದೆ. ಅದೇ ರೀತಿ ಮಂಡ್ಲಿಯಲ್ಲಿ ತುಂಗಾ ನದಿಗೆ ತಡೆಗೋಡೆ ನಿರ್ಮಿಸಲೂ ಯೋಜನೆ ರೂಪಿಸಲಾಗುತ್ತಿದೆ.
ಎರಡು ಪಾರ್ಕ್ ಅಭಿವೃದ್ಧಿ: ನಗರದ ಆರ್‌ಎಂಎಲ್ ನಗರದ ಪಾರ್ಕ್‌ನ್ನು ಆಧುನೀಕರಣ ರೀತಿಯಲ್ಲಿ ಅಭಿವೃದ್ಧಿಪಡಿಸಲು ರು. 60 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಹಾಗೆಯೇ ಗೋಪಾಲಗೌಡ ಬಡಾವಣೆ ಸಿ ಬ್ಲಾಕ್‌ನಲ್ಲಿರುವ ಪಾರ್ಕನ್ನು ರು. 50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಭಾಗದ ಜನರ ಬಹುದಿನಗಳ ಬೇಡಿಕೆ ಈ ಮೂಲಕ ಈಡೇರಿಸಿದಂತಾಗುತ್ತದೆ ಎಂದು ಶಾಸಕರು ತಿಳಿಸಿದರು.
ಪಾಲಿಕೆಗೆ ಹೆಚ್ಚುವರಿ ಅಧಿಕಾರಿ- ಸಿಬ್ಬಂದಿ:  ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿರುವುದರಿಂದ 600ಕ್ಕೂ ಹೆಚ್ಚು ಅಧಿಕಾರಿ- ಸಿಬ್ಬಂದಿಯನ್ನು ನಿಯೋಜಿಸುವ ಕಾರ್ಯ ನಡೆದಿದೆ. ಒಬ್ಬರು ಆಯುಕ್ತರು ಸೇರಿದಂತೆ 3 ಉಪ ಆಯುಕ್ತರು, ಇಬ್ಬರು ಮುಖ್ಯ ಅಕೌಂಟ್ಸ್ ಆಫೀಸರ್ಸ್, ಆಡಿಟರ್, ಒಬ್ಬರು ಟೌನ್ ಪ್ಲಾನಿಂಗ್ ಆಫೀಸರ್, ಮೂವರು ಕಾರ್ಯಪಾಲಕ ಅಭಿಯಂತರು, ಒಬ್ಬರು ಹೆಲ್ತ್ ಆಫೀಸರು, ಒಬ್ಬರು ಕೌನ್ಸಿಲ್ ಸೆಕ್ರೆಟರಿ, ಒಬ್ಬರು ಪಿಆರ್‌ಓ, ಮೂವರು ಪ್ರಾದೇಶಿಕ ಕಮೀಷನರ್, ನಾಲ್ವರು ಎನ್ವಾರ್ನ್‌ಮೆಂಟ ಎಂಜಿನಿಯರ್ ಸೇರಿದಂತೆ ವಿವಿಧ ಹಂತದ ಅಧಿಕಾರಿ, ಸಿಬ್ಬಂದಿ ನಿಯೋಜನೆ ಕಾರ್ಯ ನಡೆಯುತ್ತದೆ ಎಂದು ಶಾಸಕರು ತಿಳಿಸಿದರು.
 ನಗರಪಾಲಿಕೆ ಮೇಯರ್ ಖುರ್ಷಿದಾ ಬಾನು, ಸದಸ್ಯ ಕಾಶಿ ವಿಶ್ವನಾಥ್ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.