ಎಂಪಿಎಂ ದುಸ್ಥಿತಿ: ಬಿಎಸ್ವೈ ಸಭೆ
ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆಯ ಹಾಲಿ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಸೋಮವಾರ ಸಂಜೆ ಎಂಪಿಎಂ ನಿರ್ದೇಶಕರ ಮಂಡಳಿಯ ಸಭಾಂಗಣದಲ್ಲಿ ಎಂಪಿಎಂ ಅಧಿಕಾರಿಗಳು ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರುಗಳೊಂದಿಗೆ ಸಭೆ ನಡೆಸಿದರು.
ಕಾರ್ಖಾನೆಯು ತಿಂಗಳಿಗೆ ಸರಾಸರಿ ರು. 80 ಕೋಟಿಗಳಷ್ಟು ನಷ್ಟ ಅನುಭವಿಸುತ್ತಿದೆ. 1979ರಲ್ಲಿ ನ್ಯೂಸ್ಪ್ರಿಂಟ್ ತಯಾರಿಸುವ ಘಟಕ ಸ್ಥಾಪಿಸಲಾಯಿತು. 2010ರಿಂದ ನ್ಯೂಸ್ಪ್ರಿಂಟ್ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದರಿಂದ ಬೇಡಿಕೆ ಕಡಮೆಯಾಯಿತು. ಅದನ್ನು ಅವಶ್ಯಕತೆಗನುಗುಣವಾಗಿ ನ್ಯೂಸ್ಪ್ರಿಂಟ್ ಅಥವಾ ಸಾಂಸ್ಕೃತಿಕ ಕಾಗದ ತಯಾರಿಕಾ ಘಟಕವನ್ನಾಗಿ ಮಾರ್ಪಾಡು ಮಾಡಲಾಯಿತು. ಕಾರ್ಖಾನೆಯ ಯಂತ್ರಗಳು ಆಧುನೀಕರಣ ಕಾಣದೆ ಮಾರುಕಟ್ಟೆಯಲ್ಲಿ ಇತರ ಉತ್ಪಾದಕರೊಂದಿಗೆ ಸ್ಪರ್ಧಿಸಲು ಕಷ್ಟವಾಗಿ ಕಾರ್ಖಾನೆ ನಷ್ಟದ ಹಾದಿ ಹಿಡಿಯುವಂತಾಯಿತು.
ಉತ್ಕೃಷ್ಟ ದರ್ಜೆಯ ಪಲ್ಪ್ ಅನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಡಾಲರ್ ವಿನಿಮಯ ದರ ಹೆಚ್ಚಾಗಿ ಆಮದು ವೆಚ್ಚ ಹೆಚ್ಚಾಗುತ್ತಿದೆ. ಕಾಗದ ಉತ್ಪಾದನೆ ಮತ್ತು ಸಕ್ಕರೆ ಉತ್ಪಾದನೆ ಎರಡಕ್ಕೂ ಹೆಚ್ಚು ವಿದ್ಯುತ್ ಅವಶ್ಯಕತೆ ಇದೆ. ರಾಜ್ಯದಲ್ಲಿ ಕಲ್ಲಿದ್ದಲು (ಕೋಲ್) ಕೊರತೆ ಇರುವುದರಿಂದ ನೆರೆರಾಜ್ಯಗಳಿಂದ ಇದನ್ನು ಹೆಚ್ಚಿನ ದರದಲ್ಲಿ ತರಿಸಿಕೊಳ್ಳಲಾಗುತ್ತಿದೆ. ಕಾರ್ಖಾನೆಯಲ್ಲಿ 41 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಿದ್ದರೂ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಪ್ರಮಾಣ ಕೇವಲ 2ರಿಂದ 2.5 ಲಕ್ಷ ಟನ್ಗಳಷ್ಟು ಇರುವುದರಿಂದ ವಿದ್ಯುತ್ ಉತ್ಪಾದನೆ ಸಮರ್ಪಕವಾಗಿ ಆಗುತ್ತಿಲ್ಲ. ಇದು ಸಹ ಕಾರ್ಖಾನೆಯ ಆರ್ಥಿಕತೆಯ ಮೇಲೆ ಹೊರೆಯಾಗಿದೆ. ಯಂತ್ರಗಳು ಹಳೆಯದಾಗಿರುವುದರಿಂದ ಅವುಗಳ ಮೇಲೆ ತಗಲುವ ಸವಕಳಿ ಸಹ ನಷ್ಟದ ಹೊರೆಯನ್ನು ಹೆಚ್ಚಾಗಿಸಿದೆ ಎಂದು ಕಾರ್ಖಾನೆಯ ಉನ್ನತ ಅಧಿಕಾರಿಗಳು ಸಂಸದರಿಗೆ ಕಾರ್ಖಾನೆಯ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಟ್ಟರು.
ರಾಜ್ಯ ಸರ್ಕಾರ ಈಗ ಈ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿಕೊಳ್ಳುವತ್ತ ಗಮನ ಹರಿಸಬೇಕಾಗಿದೆ ಎಂದು ಸಭೆಯಲ್ಲಿ ಕಾರ್ಮಿಕ ಮುಖಂಡರುಗಳು ಒತ್ತಾಯಿಸಿದರು. ಎಂಪಿಎಂ ಕಾರ್ಖಾನೆ ಸಂಪದ್ಭರಿತವಾಗಿದೆ. ಉತ್ತಮ ಕಾರ್ಮಿಕ ಸಂಸ್ಕೃತಿ ಇದೆ. ಇದನ್ನು ಕೇಂದ್ರ ಸರ್ಕಾರದ ಸ್ವಾಮ್ಯದ ಹಿಂದೂಸ್ತಾನ್ ಪೇಪರ್ ನಿಗಮದೊಂದಿಗೆ ವಿಲೀನ ಮಾಡುವುದು ಒಳಿತು ಎಂದು ಸಹ ಅವರು ಸಂಸದರಿಗೆ ಸಲಹೆ ನೀಡಿದರು.
ಅಧಿಕಾರಿಗಳು ಮತ್ತು ಕಾರ್ಮಿಕ ಮುಖಂಡರುಗಳ ಪ್ರಸ್ತಾವನೆಗೆ ಸಂಸದ ಯಡಿಯೂರಪ್ಪ, ಈ ಕಾರ್ಖಾನೆಯ ಉಳಿವು ರಾಜ್ಯ ಸರ್ಕಾರದ ಕೈಯಲ್ಲಿದೆ ಎಂದರು. ಇಲ್ಲಿ ಚರ್ಚೆ ಮಾಡುವುದರ ಬದಲು ಸ್ಥಳೀಯ ಶಾಸಕರು, ಜಿಲ್ಲೆಯ ಇನ್ನಿತರ ಶಾಸಕರು, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕ ಮುಖಂಡರು, ರೈತ ಮುಖಂಡರುಗಳೊಂದಿಗೆ ಬೆಂಗಳೂರಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಶೀಘ್ರದಲ್ಲಿ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾ ಬಿಜೆಪಿ ಮುಖಂಡ ಜ್ಯೋತಿಪ್ರಕಾಶ್, ಎಂಪಿಎಂ ಮುಖ್ಯ ಆಡಳಿತಾಧಿಕಾರಿ ಬಿ.ಎನ್.ಶ್ರೀನಿವಾಸ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

