ಶಿವಮೊಗ್ಗ

'ಅಂಗವಿಕಲರ ಬಸ್ ಪಾಸ್ ಗೊಂದಲ ನಿವಾರಿಸಿ'

Published On :

ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅಂಗವಿಕಲರಿಗೆ ನೀಡುತ್ತಿರುವ ಬಸ್ ಪಾಸ್ ಸೌಲಭ್ಯದಲ್ಲಿನ ಗೊಂದಲ ನಿವಾರಿಸುವಂತೆ ಬೀಯಿಂಗ್ ಸೋಷಿಯಲ್ ಟ್ರಸ್ಟ್ ಸಂಸ್ಥೆಯ ಕೊಡಕ್ಕಲ್ ಶಿವಪ್ರಸಾದ್ ಒತ್ತಾಯಿಸಿದ್ದಾರೆ. ಕಳೆದ ಹಲವು ದಶಕಗಳಿಂದ ಅಂಗವಿಕಲರಿಗೆ ಬಸ್ ಪಾಸು ವಿತರಿಸುತ್ತಿದ್ದು, ರಿಯಾಯತಿ ನಿಯಮವು ವರ್ಷದಿಂದ ವರ್ಷಕ್ಕೆ ವಿವಿಧ ರೀತಿಯಲ್ಲಿ ಬದಲಾಗುತ್ತಿರುವುದರಿಂದ ಹಲವಾರು ಅಂಗವಿಕಲರು ಪಡೆಯಬೇಕಾದ ಅನುಕೂಲತೆಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಅಂಗವಿಕಲರ ಬಸ್ ಪಾಸ್ ಉಚಿತ ಮತ್ತು ರಾಜ್ಯಾದ್ಯಂತ ಪ್ರಯಾಣ ಮಾಡುವ ಅವಕಾಶವಿತ್ತು. ಸರ್ಕಾರಗಳು ಬದಲಾದಾಗ ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾಡುತ್ತಿರುವುದರಿಂದ ಅಂಗವಿಕಲರಿಗಿದ್ದ ಉಚಿತ ಬಸ್ ಪಾಸ್ ಅನ್ನು ಪೇಯ್ಡ್ ಪಾಸ್ ಆಗಿ ಪರಿವರ್ತಿಸಲಾಗಿದೆ. ಅಲ್ಲದೆ ಈಗಿರುವ ಬಸ್ ಪಾಸುಗಳಲ್ಲಿ 100 ಕಿ.ಮೀ. ವ್ಯಾಪ್ತಿಯೊಳಗೆ ಮಾತ್ರ ಪ್ರಯಾಣಿಸಬಹುದು ಎಂಬ ನಿಬಂಧನೆಯಿದೆ. ಇಂತಹ ನಿಬಂಧನೆಗಳಿಂದ ಅಂಗವಿಕಲರಿಗೆ ಅನುಕೂಲಗಳಿಗಿಂತ ಅನಾನುಕೂಲಗಳೇ ಜಾಸ್ತಿ ಆಗುವುದಲ್ಲದೆ ಉಚಿತ ಪಾಸು ರದ್ದತಿಯಿಂದಾಗಿ ಸಾವಿರಾರು ಅಂಗವಿಕಲರು ಪ್ರಯಾಣ ವಂಚಿತರಾಗುವಂತಾಗಿದೆ ಎಂದಿದ್ದಾರೆ.
ಒತ್ತಾಯ:  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಇತ್ತೀಚೆಗೆ ಅಂತರ್ಜಾಲ ತಾಣವೊಂದನ್ನು ಲೋಕಾರ್ಪಣೆಗೊಳಿಸಿದ್ದು, ಅದರಲ್ಲಿ ಅಂಗವಿಕಲರ ಬಸ್ ಪಾಸ್ ಅನಿಯಮಿತವಾಗಿದೆ ಎಂದು ನಮೂದಿಸಲಾಗಿದೆ. ಆದರೆ, ಅಂಗವಿಕಲರಿಗೆ ನೀಡುತ್ತಿರುವ ಬಸ್ ಪಾಸಿನಲ್ಲಿ 100 ಕಿ.ಮೀ. ವ್ಯಾಪ್ತಿಯನ್ನು ನಮೂದಿಸಲಾಗಿದೆ. ಹೀಗಾಗಿ, ಯಾವುದನ್ನು ಅನುಸರಿಸಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲ ನಿವಾರಣೆಗಾಗಿ ಸರ್ಕಾರ ರಸ್ತೆ ಸಾರಿಗೆ ಸಂಸ್ಥೆಗೆ ಸರ್ಕಾರ ಸರಿಯಾದ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರ 100 ಕಿ.ಮೀ. ವ್ಯಾಪ್ತಿಯ ಮಿತಿ ರದ್ದುಪಡಿಸಿ ಅನಿಯಮಿತ ಪ್ರಯಾಣ ವ್ಯವಸ್ಥೆಗೆ ಅವಕಾಶ ಕಲ್ಪಿಸಿ ಕೊಟ್ಟರೆ ಸಹಸ್ರಾರು ಅಂಗವಿಕಲರಿಗೆ ಧನ್ಯತಾ ಭಾವನೆ ಜೊತೆಗೆ ಪ್ರಯಾಣಿಸುವ ಹುಮ್ಮಸ್ಸು ಬೆಳೆಯತ್ತದೆ. ಸಾರಿಗೆ ಸಂಸ್ಥೆ ಅಧಿಕಾರಿಗಳು ದಯವಿಟ್ಟು ಇತ್ತ ಗಮನಿಸಿ ಅಂಗವಿಕಲರ ಬಸ್ ಪಾಸನ್ನು ಕನಿಷ್ಠ ಅನಿಯಮಿತ ಪ್ರಯಾಣದ ಅವಕಾಶಕ್ಕೆ ಅನುಮತಿ ನೀಡಬೇಕು ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.