ಶಿವಮೊಗ್ಗ

ಗುಣಮಟ್ಟದ ರಸ್ತೆಗಾಗಿ ಗ್ರಾಮಸ್ಥರ ಪರದಾಟ

Published On :

ಆಯನೂರು: ಆಯನೂರಿನ ಹಾರನಹಳ್ಳಿ ರಸ್ತೆಯ ಜನತೆಯ ಗೋಳು ಕೇಳುವವರೆ ಇಲ್ಲದಂತಾಗಿದೆ. ಗ್ರಾಮದ ಈ ಪ್ರಮುಖ ರಸ್ತೆಯ ಮೂಲಕ ಪ್ರತಿದಿನ ನೂರಾರು ನಾಗರಿಕರು ಓಡಾಡುತ್ತಾರೆ. ಆದರೆ, ದುರವಸ್ಥೆಯಿಂದಾಗಿ ಓಡಾಟ ಕಷ್ಟವಾಗಿದೆ.
ಈ ರಸ್ತೆಯ ಪಕ್ಕದ ಮನೆಗಳಿಂದ ನೀರು ಹೋಗಲು ಚರಂಡಿಯೇ ಇಲ್ಲವಾಗಿದೆ. ಮಳೆಗಾಲ ಶುರುವಾಯಿತೆಂದರೆ ಓಡಾಡುವುದೇ ಕಷ್ಟ. ರಸ್ತೆಯಲ್ಲಿ ಬಿದ್ದ ನೀರು ಸರಾಗವಾಗಿ ಹೋಗಲು ಚರಂಡಿಗಳ ಆವಶ್ಯಕತೆ ಇದ್ದು, ಎಷ್ಟೋ ವರುಷಗಳಿಂದ ಇದರ ಬಗ್ಗೆ ಶಾಸಕರೂ ಸೇರಿದಂತೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಮನವಿ ಮಾಡಿದರಾದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.
ಬೇಸಿಗೆ ಸಮಯದಲ್ಲಿ ಕಷ್ಟ ಹೇಳತೀರದು. ಮನೆಗಳಿಂದ ಹೊರಬರುವ ನೀರು ಮನೆಗಳ ಮುಂದೆ ನಿಂತು ದುರ್ವಾಸನೆ ಬರುತ್ತಿದೆ. ನೀರು ನಿಂತು ಸೊಳ್ಳೆಗಳ ತಾಣವಾಗಿದೆ. ರೋಗ- ರುಜಿನ ಹರಡುವ ಸಂಭವ ಹೆಚ್ಚಾಗಿದೆ. ಈ ಭಾಗವು ಗ್ರಾಮ ಪಂಚಾಯಿತಿಯ 1 ಮತ್ತು 3ನೇ ವಾರ್ಡಿಗೆ ಸಂಬಂಧಪಟ್ಟಿದ್ದು, 9 ಗ್ರಾಪಂ ಸದಸ್ಯರಿದ್ದಾರೆ. ಅವರೆಲ್ಲಾ ಕಣ್ಣಿದ್ದು ಕುರುಡರ ಹಾಗೆ, ನೋಡಿಯು ನೋಡದಂತೆ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ.
ಬೇಜವಾಬ್ದಾರಿ: ರಸ್ತೆ ದುರಸ್ತಿಗೆ ಜನತೆ ಗ್ರಾಮ ಪಂಚಾಯಿತಿಗೆ ದೂರಿದರೆ, ಈ ಕೆಲಸ ನಮ್ಮ ವ್ಯಾಪ್ತಿಗೆ ಬರೋಲ್ಲ. ನೀವೇನಿದ್ದರೂ ಲೋಕೋಪಯೋಗಿ ಇಲಾಖೆ ಕೇಳಿ ಅವರ ಹತ್ತಿರ ಹೋಗಿ ಕೆಲಸ ಮಾಡಿಸಿಕೊಳ್ಳಿ ಎಂದು ಹೇಳಿ ಕೈ ತೊಳೆದುಕೊಂಡು ಬಿಡುತ್ತಾರೆ. ಹಠ ಬಿಡದ ನಾಗರಿಕರು ಶಿವಮೊಗ್ಗಕ್ಕೆ ತೆರಳಿ ಎಂಜನಿಯರ್‌ಗಳ ಜತೆ ಮಾತುಕತೆ ನಡೆಸಿದಾಗ, ರಸ್ತೆ ದುರಸ್ತಿಗೆ 36 ಲಕ್ಷಕ್ಕೆ ಮಂಜೂರಾತಿ ಸಿಕ್ಕಿದೆ. ಅನುದಾನ ಸಿಕ್ಕಿಲ್ಲ. ಶಾಸಕರ ನಿಧಿ ಸೇರಿದಂತೆ ಯಾವುದಾದರೂ ಅನುದಾನ ಸಿಕ್ಕರೆ ಕೆಲಸ ಮಾಡುತ್ತೇವೆ ಎನ್ನುತ್ತಾರೆ.
ಇತ್ತೀಚೆಗೆ ಗ್ರಾಮಕ್ಕೆ ವಿವಿಧ ಕಾಮಗಾರಿಗಳ ಪರಿಶೀಲನೆಗೆಂದು ಶಾಸಕರು ಹೋಗುತ್ತಿದ್ದಾಗ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರ ಬಳಿ ಈ ಬಗ್ಗೆ ಗಮನ ಸೆಳೆದಿದ್ದರು. ಆಗ ಶಾಸಕರು ಯಾವುದಾದರೂ ಅನುದಾನ ಹಾಕಿಸಿ ಚರಂಡಿ ಮಾಡಿಸುವ ಭರವಸೆ ನೀಡಿದ್ದರು. ಅದಿನ್ನೂ ಅನುಷ್ಠಾನವಾಗಿಲ್ಲ.
ಕೆಲ ದಿನಗಳ ಹಿಂದೆ ಸುರಿದ ಮಳೆಯ ನೀರು ಹರಿದು ಹೋಗಲು ಸ್ಥಳವಿಲ್ಲದೆ ಹಲವಾರು ಮನೆಗಳಿಗೆ ನೀರು ನುಗ್ಗಿ ರಸ್ತೆಯ ಕಸ- ಕಡ್ಡಿ ಮನೆಗಳ ಪಾಲಾಗಿದ್ದವು. ಚುನಾವಣೆ ಮುಗಿಯುತ್ತಿದ್ದಂತೆ ಮಳೆಗಾಲ ಆರಂಭವಾಗಲಿದ್ದು, ತುರ್ತು ಕ್ರಮ ಕೈಗೊಳ್ಳದಿದ್ದರೆ ಸಂಕಷ್ಟದ ದಿನಗಳು ಕಾದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.