ಸನ್ಮಾರ್ಗದತ್ತ ಸಾಗುವ ಮಾರ್ಗದ ಚಿಂತನೆ ನಡೆಯಲಿ
ಸಾಗರ: ವ್ಯಕ್ತಿಯೊಬ್ಬನ ಬೆಳವಣಿಗೆಯಲ್ಲಿ ಸಮಾಜದ ಪಾತ್ರ ಪ್ರಮುಖವಾಗಿರುತ್ತದೆ. ಬದುಕು ಕಟ್ಟಿಕೊಳ್ಳಲು ನೆರವು ನೀಡಿದ ಸಮಾಜದ ಋಣ ತೀರಿಸುವ ಕೆಲಸ ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಸನ್ಮಾನ, ಪ್ರತಿಫಲಾಪೇಕ್ಷೆ ಇರಿಸಿಕೊಂಡು ಸಮಾಜಮುಖಿ ಬದುಕು ಕಟ್ಟಿಕೊಂಡವನು ನಾನಲ್ಲ ಎಂದು ಹಿರಿಯ ಸಹಕಾರಿ ಈಳಿ ನಾರಾಯಣಪ್ಪ ಹೇಳಿದರು.
ಇಲ್ಲಿನ ಭಾರತೀತೀರ್ಥ ಸಭಾಭವನದಲ್ಲಿ ಶೃಂಗೇರಿ ಶಂಕರಮಠದ 4ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮದಲ್ಲಿ ಮಠದ ವತಿಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬಾಲ್ಯದಿಂದಲೇ ಕಷ್ಟದ ಬದುಕು ಕಂಡವನು ನಾನು. ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಎದುರಿಸುವ ಸಮಯದಲ್ಲಿ ನಾನು ಬದುಕಿನ ಪಾಠವನ್ನು ಕಲಿತಿದ್ದೇನೆ. ನನ್ನ ಸಾಧನೆ ಹಿಂದೆ ಸಮಾಜದ ಅನೇಕ ಗಣ್ಯರ ಮಾರ್ಗದರ್ಶನವಿದೆ. ನಾವು ಉತ್ತಮ ಕೆಲಸ ಮಾಡುತ್ತಿದ್ದೇವೆ ಎಂದಾಗ ಸಹಜವಾಗಿ ಸಮಾಜದ ಪ್ರೋತ್ಸಾಹ ಸಿಗುತ್ತದೆ ಎಂದರು.
ಚಿಂತನೆ ನಡೆಯಲಿ: ಹಣವೇ ವಿಜೃಂಭಿಸುತ್ತಿರುವ ಇಂದಿನ ಸಂದರ್ಭದಲ್ಲಿ ಮನುಷ್ಯ ಸಮಾಜಮುಖಿಯಾಗದೆ ಹೋದರೆ ಆತ ಸಾರ್ಥಕ ಬದುಕು ನಡೆಸಲು ಸಾಧ್ಯವಿಲ್ಲ. ಮೌಲ್ಯಗಳು ನೇಪಥ್ಯಕ್ಕೆ ಸರಿಯುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ನಮ್ಮ ಭವಿಷ್ಯ ಎನಿಸಿಕೊಂಡ ಯುವಜನರು ಪ್ರಲೋಭನೆಗಳಿಗೆ ಒಳಗಾಗಿ ತಮ್ಮತನ ಕಳೆದುಕೊಳ್ಳುತ್ತಿದ್ದಾರೆ. ಸಮಾಜದ ವಿವಿಧ ಸ್ತರಗಳಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳು, ಯುವಜನರು ಸನ್ಮಾರ್ಗದತ್ತ ಸಾಗುವ ಮಾರ್ಗ ಕುರಿತು ಚಿಂತನೆ ನಡೆಸಬೇಕು ಎಂದು ಹೇಳಿದರು.
ಸೇವೆ ಸ್ಮರಿಸಿ: ಅಧ್ಯಕ್ಷತೆ ವಹಿಸಿದ್ದ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಎಸ್.ಆರ್. ತಿಮ್ಮಪ್ಪ, ಈಳಿ ನಾರಾಯಣಪ್ಪನವರು ಅತ್ಯಂತ ಸರಳ ಹಾಗೂ ಸಜ್ಜನಿಕೆಯನ್ನು ಮೈಗೂಡಿಸಿಕೊಂಡವರು. ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಹಕಾರಿ ರಂಗಗಳಲ್ಲಿ ಶುದ್ಧಹಸ್ತರು ಎಂದೇ ಹೆಸರು ಪಡೆದಿದ್ದಾರೆ. ಇಂಥವರ ಆದರ್ಶಮಯ ಸೇವೆಯನ್ನು ಸ್ಮರಿಸಿಕೊಳ್ಳುವಂತಾಗಬೇಕು ಎಂದರು.
ಸನ್ಮಾನಿತರ ಕುರಿತು ಬಿ.ಕೆ.ಸೂರ್ಯನಾರಾಯಣ ಮಾತನಾಡಿದರು. ಮಲೆನಾಡು ಗಮಕ ಕಲಾ ಸಂಘದ ಗೌರವಾಧ್ಯಕ್ಷ ಹೊಸಬಾಳೆ ಸೀತಾರಾಮರಾವ್, ಕಾರ್ಯಾಧ್ಯಕ್ಷ ಪ್ರೊ. ಕೆ.ಆರ್. ಕೃಷ್ಣಯ್ಯ, ಚಿಪ್ಪಳಿ ಗೋಪಾಲಕೃಷ್ಣರಾವ್, ಎ.ಎನ್. ವೆಂಕಟಕೃಷ್ಣ, ಅಶ್ವಿನಿಕುಮಾರ್ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಬಿ.ಟಿ. ಅರುಣ ಸ್ವಾಗತಿಸಿದರು. ಕೆ.ಎಂ. ರವೀಂದ್ರ ಸನ್ಮಾನಪತ್ರ ವಾಚಿಸಿದರು. ಶ್ರೀಧರ ಹೆಗಡೆ ನಿರೂಪಿಸಿ, ಬಿ.ಜಿ.ಮಂಜಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

