ಶಿವಮೊಗ್ಗ

ಅಸಂಘಟಿತ ಚಾಲಕರು ಡಿಎಲ್ ಪಡೆವಾಗಲೇ ವಿಮೆ

Published On :

-ವಿಶೇಷ ವರದಿ
ಶಿವಮೊಗ್ಗ: ಚಾಲನೆಯನ್ನೇ ವೃತ್ತಿಯಾಗಿ ಆರಿಸಿಕೊಳ್ಳುವವರಿಗೆ ಇನ್ನು ಮುಂದೆ ಡಿಎಲ್ ಪಡೆದುಕೊಳ್ಳುವಾಗಲೇ ಅಪಘಾತ ಪರಿಹಾರ ಯೋಜನೆ ಅನ್ವಯವಾಗುವಂತೆ ಮಾಡುವ ಪ್ರಯತ್ನವೊಂದು ಶಿವಮೊಗ್ಗದಿಂದ ಆರಂಭವಾಗಿದೆ.
ಈ ರೀತಿಯ ಚಿಂತನೆ ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ್ದು. ಈ ಚಿಂತನೆಯನ್ನು ಅನುಷ್ಠಾನಕ್ಕೆ ತರುವ ಮೂಲಕ ಅಸಂಘಟಿತ ಕಾರ್ಮಿಕರ ನೆರವಿಗೆ ಬರುವಂತೆ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶರಶ್ಚಂದ್ರ ಬ. ಅಂಗಡಿ ಕಾನೂನು ಇಲಾಖೆಗೆ ಸೂಚನೆ ನೀಡಿದ್ದಾರೆ.
2 ಲಕ್ಷ ಪರಿಹಾರ: ಯೋಜನೆಯ ಪಾಲಿಸಿ ಪಡೆದುಕೊಂಡ ಫಲಾನುಭವಿ ಚಾಲಕ ಕರ್ತವ್ಯ ನಿರತನಾಗಿದ್ದಾಗ ಮೃತಪಟ್ಟರೆ 2 ಲಕ್ಷ ಪರಿಹಾರ ಆತನ ಕುಟುಂಬಕ್ಕೆ ಸಲ್ಲಿಕೆಯಾಗುತ್ತದೆ. ಅಪಘಾತ- ಆರೋಗ್ಯ ಕಾರಣದಿಂದ 15 ದಿನಕ್ಕಿಂತ ಹೆಚ್ಚು ಆಸ್ಪತ್ರೆಗೆ ದಾಖಲಾದರೆ ಚಿಕಿತ್ಸಾ ವೆಚ್ಚ 1 ಲಕ್ಷವರೆಗೆ ಪರಿಹಾರ ದೊರೆಯುತ್ತದೆ. 15 ದಿನಕ್ಕಿಂತ ಕಡಿಮೆ ಅವಧಿಯಲ್ಲಿ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದುಕೊಂಡ ಸಂದರ್ಭವಿದ್ದರೆ 50 ಸಾವಿರವರೆಗೆ ಅಥವಾ ಚಿಕಿತ್ಸಾ ವೆಚ್ಚ ದೊರೆಯುತ್ತದೆ. ಹಾಗೆಯೇ ಕರ್ತವ್ಯ ನಿರತರಾಗಿದ್ದಾಗ ಅವಘಡದಲ್ಲಿ ಮುಂದೆ ಕೆಲಸ ಮಾಡಲು ಆಗದಂತೆ ಶಾಶ್ವತ ಹಾನಿಯಾದರೂ ಅದಕ್ಕೂ ಹಾನಿಯ ಪ್ರಮಾಣ ನೋಡಿ ಪರಿಹಾರ ಕೊಡುವ ವ್ಯವಸ್ಥೆ ಇದೆ.
ಇಂತಹ ಯೋಜನೆಗೆ ವಾಣಿಜ್ಯ ವಾಹನ ಚಾಲಕರು ನೇರವಾಗಿ ಹೋಗಿ ಸಂಪರ್ಕಿಸಿ ಅರ್ಜಿ ತುಂಬಿ ಬರಬೇಕಾಗಿತ್ತು. ಆದರೆ, ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಚಿಂತನೆಯಂತೆ ಹೊಸದಾಗಿ ಡಿಎಲ್ ಮಾಡಿಸಿಕೊಳ್ಳುವಾಗ ಅಥವಾ ಡಿಎಲ್ ನವೀಕರಣ ವೇಳೆಯೇ ಯೋಜನೆಗೆ ನೋಂದಾಯಿಸುವ ವ್ಯವಸ್ಥೆ ಮಾಡಲಾಗುತ್ತದೆ.
7 ಸಾವಿರ ಚಾಲಕರು: ಸದ್ಯ ಜಿಲ್ಲೆಯಲ್ಲಿ 7 ಸಾವಿರ ಚಾಲಕರು ಈ ಯೋಜನೆ ವ್ಯಾಪ್ತಿಗೊಳಪಟ್ಟಿದ್ದಾರೆ. ಇನ್ನು ಸಾವಿರಾರು ಜನ ಯೋಜನೆಯ ಬಗ್ಗೆ ಮಾಹಿತಿ ತಿಳಿದಿಲ್ಲ. ಈ ನಿಟ್ಟಿನಲ್ಲಿ ಚಾಲನಾ ಪರವಾನಗಿ ಪಡೆಯುವಾಗಲೇ ಯೋಜನೆ ವ್ಯಾಪ್ತಿಗೆ ತರಬೇಕೆಂಬ ಸಲಹೆ ಕಾನೂನು ಸೇವಾ ಪ್ರಾಧಿಕಾರದಿಂದ ಬಂದಿದೆ. ಸಾರಿಗೆ ಇಲಾಖೆಯೊಂದಿಗೆ ಮಾತನಾಡಿ ಯೋಜನೆ ಜಾರಿಗೆ ತರುತ್ತೇವೆ ಎಂದು ಕಾನೂನು ಇಲಾಖೆ ಹಿರಿಯ ಅಧಿಕಾರಿ ಎಂ.ಪಿ. ವಿಶ್ವನಾಥ್ ಕನ್ನಡಪ್ರಭಕ್ಕೆ ತಿಳಿಸಿದರು.
ಶೀಘ್ರವೇ ಜಾರಿ: ಡಿಎಲ್ ವಿತರಿಸುವ ವೇಳೆಯೆ ನಮ್ಮ ಮಂಡಳಿಯ ಅರ್ಜಿಯನ್ನು ಅಭ್ಯರ್ಥಿಯ ಫೋಟೊದೊಂದಿಗೆ ತುಂಬಿಸಿ, 25 ಶುಲ್ಕವನ್ನು ಸಾರಿಗೆ ಇಲಾಖೆಯಲ್ಲಿ ಪಡೆದುಕೊಂಡರೆ ಮಂಡಳಿಯಿಂದ ಫಲಾನುಭವಿಗೆ ಪಾಲಿಸಿ ಕಳುಹಿಸಲಾಗುತ್ತದೆ, ಈ ಬಗ್ಗೆ ಶೀಘ್ರವೇ ಮಾತುಕತೆ ನಡೆಸಿ ಯೋಜನೆ ಜಾರಿಗೆ ತರಲಾಗುತ್ತದೆ ಎಂದರು.
ಸಾರಿಗೆ ಇಲಾಖೆಯಲ್ಲಿ ಯೋಜನೆ ಬಗ್ಗೆ ಹೆಚ್ಚಿನ ಪ್ರಚಾರ ನೀಡುವ ಬಗ್ಗೆಯೂ ಚಿಂತನೆ ಇದೆ. ಸರ್ಕಾರ ಜಾರಿಗೆ ತಂದಿರುವ ಯೋಜನೆ ಅಸಂಘಟಿತ ಚಾಲನಾ ಕ್ಷೇತ್ರದಲ್ಲಿರುವ ಚಾಲಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಮಂಡಳಿಯನ್ನು ಸಂಪರ್ಕಿಸಿ 25 ಕೊಟ್ಟು ನೋಂದಣಿಯಾದರೆ ಸಾಕಷ್ಟು ಅನುಕೂಲವಿದೆ ಎಂದು ವಿವರಿಸಿದರು.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜಾರಿಗೆ ಬರುತ್ತಿರುವ ಈ ಎರಡು ಇಲಾಖೆಯನ್ನು ಒಂದು ಯೋಜನೆಗೆ ಜೋಡಿಸುವ ಚಿಂತನೆಗೆ ಹಚ್ಚಿದವರು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶರಶ್ಚಂದ್ರ ಬ. ಅಂಗಡಿ ಮತ್ತು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಚ್.ಎಂ. ನಂಜುಂಡಸ್ವಾಮಿ. ಯಾವುದೇ ಸೌಲಭ್ಯ ಇರದ ಅಸಂಘಟಿತ ಚಾಲಕರಿಗೆ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಹೀಗಾಗಿ ಚಾಲನಾ ಪರವಾನಗಿ ಪಡೆದುಕೊಳ್ಳುವಾಗಲೇ ಯೋಜನೆ ವ್ಯಾಪ್ತಿಗೆ ತಂದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಏನಿದು ಯೋಜನೆ?
ಖಾಸಗಿ ವಾಣಿಜ್ಯ ವಾಹನ ಚಾಲಕ ಅಪಘಾತ ಪರಿಹಾರ ಯೋಜನೆಯನ್ನು 2012ರಲ್ಲಿ ಸರ್ಕಾರವು ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿಯ ಅಡಿಯಲ್ಲಿ ಜಾರಿಗೆ ತಂದಿತು. ಯೋಜನೆಯಂತೆ ಖಾಸಗಿ ವಾಣಿಜ್ಯ ವಾಹನ ಚಾಲಕರು 25 ಯನ್ನು ಮಂಡಳಿಗೆ ಸಲ್ಲಿಸಿ ಆಜೀವ ಸದಸ್ಯತ್ವ ಪಡೆದುಕೊಳ್ಳಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.