ಸಂಭ್ರಮದ ಬನ್ನಿ ಮಹಾಕಾಳಿ ಅಮ್ಮನ ಜಾತ್ರೆ
ಸೊರಬ: ತಾಲೂಕಿನ ಪ್ರಾಚೀನ ಐತಿಹಾಸಿಕ ಕ್ಷೇತ್ರ ಹೆಚ್ಚೆ ಗ್ರಾಮದಲ್ಲಿ ಬನ್ನಿ ಮಹಾಕಾಳಿ ಅಮ್ಮನ ಜಾತ್ರೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಕಾಳಿಕಾಂಬೆಗೆ ಹೆಚ್ಚೆ ಗ್ರಾಮವೂ ಸೇರಿದಂತೆ ಒಕ್ಕಲಕೊಪ್ಪ, ಹೊಸಕೊಪ್ಪ, ಕಾರೆಹೊಂಡ, ಕೋಣನಮನೆ ಸುತ್ತಮುತ್ತಲ ಗ್ರಾಮಸ್ಥರಲ್ಲದೆ, ನೆರೆಯ ತಾಲೂಕಿನ ಅಪಾರ ಭಕ್ತಾದಿಗಳು ಪಾಲ್ಗೊಂಡು ತೇರೆಳೆದರು.
ಭಾನುವಾರ ರಾತ್ರಿಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಅಂಕುರಾರೋಪಣ, ಧ್ವಜಾರೋಹಣ, ಭೇರಿ ಘೋಷಣಾ, ಕೌತುಕ ಬಂಧನ ಯಾಗಶಾಲಾ ಪ್ರವೇಶ, ಮಹಾಬಲಿ ಪ್ರಾರಂಭ, ಸಿಂಹ ಯಂತ್ರೋತ್ಸವ, ಪುಷ್ಪ ಮಂಜರಿ ಯಂತ್ರೋತ್ಸವ, ಸೊಮವಾರ ಮಹಾ ರಥೋತ್ಸವ ವೇದ ವಿದ್ವಾನ್ ನಾಗರಾಜ ಶಾಸ್ತ್ರಿ ನೇತೃತ್ವದಲ್ಲಿ ನಡೆಯಿತು. ಋತ್ವಿಜರಾಗಿ ಶ್ರೀಕಾಂತ ದೀಕ್ಷಿತ್, ಕಿರಗುಣಿಸೆ ನಾಗರಾಜ್, ಗಿರಿಧರ ಪಾಲ್ಗೊಂಡಿದ್ದರು. ಮಂಗಳವಾರ ರಾತ್ರಿ ಹೆಮ್ಮನಬೈಲು ಯಕ್ಷಗಾನ ಕಲಾತಂಡದಿಂದ ಲವಕುಶ ಯಕ್ಷಗಾನ ನಡೆಯಲಿದೆ, ಸೋಮವಾರ ಇಲ್ಲಿನ ಶಾಲಾ ಮಕ್ಕಳು ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಜಾತ್ರಾ ಸಮಿತಿಯ ಸಂಪತ್‌ಕುಮಾರ್ ಜೋಯ್ಸ್, ರೇವಣಪ್ಪ, ರಂಗನಾಥ, ಸುರೇಶ್, ಧರ್ಮಪ್ಪ, ಗದ್ದೆಮನೆ ದುರ್ಗಪ್ಪ, ಬೀರಪ್ಪ, ದುರ್ಗಪ್ಪ, ಜಯಪ್ಪ, ಮರಿಯಪ್ಪ, ರಾಮಕೃಷ್ಣಪ್ಪ, ರಾಮಚಂದ್ರ, ಗುಂಡಪ್ಪ, ಭೂತಪ್ಪ, ಗ್ರಾಪಂ ಆಡಳಿತದವರು ಇದ್ದರು.
ಪುತ್ರನ ಕಣ್ಣು ದಾನ ಮಾಡಿದ ಪೋಷಕರು
ಶಿವಮೊಗ್ಗ: ಅಕಾಲಿಕ ಮರಣಕ್ಕೆ ತುತ್ತಾದ ತಮ್ಮ ಪುತ್ರದ ಕಣ್ಣುಗಳನ್ನು ಪೋಷಕರು ದಾನ ಮಾಡಿದ ಪ್ರಸಂಗ ನಗರದಲ್ಲಿ ನಡೆದಿದೆ. ಎಚ್.ಎಸ್. ದಿನೇಶ್‌ಕುಮಾರ್ ಮತ್ತು ಸುರೇಖಾ ಅವರ ಪುತ್ರ ಎಚ್.ಡಿ. ಸುನಾದ್(17) ಮಾ.21ರಂದು ಅಕಾಲಿಕ ಮರಣ ಹೊಂದಿದರು. ದುಃಖ ಸಂದರ್ಭದಲ್ಲಿಯೂ ತಮ್ಮ ಮಗ ಎರಡೂ ಕಣ್ಣುಗಳನ್ನು ಪೋಷಕರು ಶಂಕರ ಕಣ್ಣಿನ ಆಸ್ಪತ್ರೆಗೆ ದಾನ ಮಾಡಿ ಮಹಾನ್ ಕಾರ್ಯ ಮಾಡಿದ್ದಾರೆ ಎಂದು ಆಸ್ಪತ್ರೆಯ ವೈದ್ಯ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಇಂತಹ ಒಂದು ಮಹಾನ್ ದಾನದಿಂದ ಇಬ್ಬರು ಅಂಧರಿಗೆ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಕರಿಗುಡ್ಡೆ ಶಸ್ತ್ರಚಿಕಿತ್ಸೆಯಿಂದ ಮರು ದೃಷ್ಟಿ ಬಂದಂತಾಗಿದೆ. ಈ ಕಾರ್ಯದಿಂದ ಲಕ್ಷಾಂತರ ಜನರಿಗೆ ಕಣ್ಣು ದಾನ ಮಾಡಲು ಪ್ರೇರಣೆಯಾಗಿದೆ. ಈ ಕಾರ್ಯಕ್ಕೆ ದಿನೇಶ್‌ಕುಮಾರ್ ಮತ್ತು ಸುರೇಖಾ ಅವರಿಗೆ ಯಾವ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದರೂ ಸಾಲದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಗುರುತಿನ ಚೀಟಿ ವಿತರಣೆ ನಾಳೆ
ಶಿವಮೊಗ್ಗ: ಜಿಲ್ಲಾ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆಯನ್ನು ಏ.26ರಂದು ಏರ್ಪಡಿಸಲಾಗಿದೆ. ಸಂಘದ ಅಜೀವ ಸದಸ್ಯರು ತಮ್ಮ ವಿಳಾಸ ಬದಲಾಗಿದ್ದರೆ ಅಥವಾ ಸದಸ್ಯತ್ವದ ಕಾರ್ಡ್ ಕಳೆದಿದ್ದರೆ ಏ.3 ರೊಳಗೆ ಸಂಘದ ಕಚೇರಿಗೆ ಆಗಮಿಸಿ ಸರಿಪಡಿಸಿಕೊಳ್ಳುವಂತೆ ಕೋರಲಾಗಿದೆ. ಸಂಘದ ಮಹಾಸಭೆಗೆ ಬರುವಾಗ ಕಡ್ಡಾಯವಾಗಿ ಗುರುತಿನ ಕಾರ್ಡ್ ತರಬೇಕೆಂದು ಅಧ್ಯಕ್ಷ ಎಸ್.ಎಂ.ಜಯದೇವಪ್ಪ ಕೋರಿದ್ದಾರೆ. ಹಾಗೆಯೇ ಸಂಘದ ವಾರ್ಷಿಕ ಮಹಾಸಭೆಯಲ್ಲಿ 89 ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮನೆಗೆ ಬೆಂಕಿ: ಲಕ್ಷಾಂತರ ಹಾನಿ
ಸಾಗರ: ಪಟ್ಟಣದ ಕೆಳದಿ ರಸ್ತೆಯ ಶಾಂತಿನಗರದ ವಿಮಲಮ್ಮ ಎಂಬವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು ಎರಡೂವರೆ ಲಕ್ಷ ರು. ನಷ್ಟ ಸಂಭವಿಸಿದೆ. ಮನೆಯಲ್ಲಿ ವಿಮಲಮ್ಮ ಅವರು ಒಬ್ಬರೆ ಇದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಮನೆಯಲ್ಲಿದ್ದ ಪಾತ್ರೆ, ಬಟ್ಟೆ, ದಾಖಲೆ, ಬೆಳ್ಳಿ ಹಾಗೂ ಬಂಗಾರದ ಒಡವೆಗಳು ಪೂರ್ಣ ನಾಶವಾಗಿದೆ. ಬೆಂಕಿಗೆ ಮನೆಯ ಬೀರುವಿನಲ್ಲಿಟ್ಟಿದ್ದ ಸುಮಾರು 20 ಸಾವಿರ ಸಹ ನಾಶವಾಗಿದೆ. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

