ಶಿವಮೊಗ್ಗ

ಬಿರುಗಾಳಿ, ಮಳೆಗೆ 4 ಮನೆ ಜಖಂ

Published On :

ಕ.ಪ್ರ.ವಾರ್ತೆ    ಭದ್ರಾವತಿ    ಮೇ 4
ಮಳೆ ಹಾಗೂ ವಿಪರೀತ ಗಾಳಿಯಿಂದಾಗಿ ಪಟ್ಟಣದ ಹೊರವಲಯದಲ್ಲಿರುವ ಮಸರಳ್ಳಿ ಗ್ರಾಮದಲ್ಲಿನ ನಾಲ್ಕು ಮನೆಗಳ ಸೂರು ಹಾರಿಹೋಗಿವೆ, ಅಲ್ಲದೆ ಬಾರಿ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.
ಮಸರಳ್ಳಿಗೆ ಸಮೀಪದ ಬೈಪಾಸ್ ರಸ್ತೆಯಲ್ಲಿರುವ ಬಾರಂದೂರು ಬಳಿ ರಸ್ತೆಯಲ್ಲಿ ಮರಗಳು ಉರುಳಿಬಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಗ್ರಾಮಸ್ಥರು ಮರಗಳನ್ನು ಪಕ್ಕಕ್ಕೆ ಸರಿಸಲು ಸಹಾಯ ಮಾಡಿ ವಾಹನ ಸಂಚಾರಕ್ಕೆ ಸುಗಮವಾಗಿಸಿದರು.
ಮಸರಳ್ಳಿ ಗ್ರಾಮದಲ್ಲಿ ಪಾರ್ವತಿ ಸುರೇಶ್ ಅವರ ಮನೆಗೆ ಹೊಸದಾಗಿ ಹಾಕಿಸಿದ್ದ ಶೀಟ್‌ಗಳು ಹಾರಿಹೋಗಿವೆ. ಮನೆಯ ಪರಿಕರವನ್ನೆಲ್ಲಾ ಹೊರಕ್ಕೆ ಹಾಕಿ ಅದು ನೆನೆಯದಂತೆ ಟಾರ್‌ಪಲ್ ಹೊದಿಸಲಾಗಿದೆ.
ರಾಣಿಯಮ್ಮ ಮುರುಗೇಶ್ ಎಂಬವರ ಮನೆಯ ಸೂರಿನ ಹೆಂಚುಗಳು ಸಂಪೂರ್ಣ ಹಾರಿಹೋಗಿವೆ. ಅವರೂ ಸಹ ಮನೆಯ ಸಾಮಾನುಗಳನ್ನು ನೆನೆಯದಂತೆ ಕಾಪಾಡಲು ಸಾಹಸ ಪಡುತ್ತಿದ್ದರು. ವೆಂಕಟೇಶ್ ಕೆಂಪಯ್ಯ ಮತ್ತು ಆನಂದ್ ಅವರ ಮನೆಗಳೂ ಜಖಂಗೊಂಡಿವೆ.
ನೀರಗಂಟಿ ಸುರೇಶ್ ಅವರ ತೋಟದಲ್ಲಿ ಒಂದು ತೆಂಗಿನಮರ ಹಾಗೂ ಒಂದು ಅಡಕೆ ಮರ ಉರುಳಿಬಿದ್ದಿವೆ. ಇಮ್ರಾನ್ ಅವರ ತೋಟದ 40 ಅಡಕೆ ಮರ ಹಾಗೂ 20 ತೆಂಗಿನಮರಕ್ಕೆ ಹಾನಿಯಾಗಿದೆ. ನೀಲಕಂಠಪ್ಪ ಅವರ ತೋಟದ 30 ತೆಂಗಿನಮರಗಳು ಹಾಗೂ 150 ಅಡಕೆ ಮರಗಳು ನೆಲಕ್ಕುರುಳಿವೆ.
ಹೊಂಬೇಗೌಡ ಅವರಿಗೆ ಸೇರಿದ 30 ಅಡಕೆ ಮರಗಳು ನಾಶವಾಗಿವೆ. ಜಿತೇಂದ್ರಕುಮಾರ್ ಅವರ 20 ಅಡಕೆಮರಗಳು ಹಾನಿಯಾಗಿವೆ. ಚಾಮಮ್ಮ ರಾಮೇಗೌಡ ಅವರ 50-60 ಬಾಳೇಗಿಡಗಳು ಮತ್ತು 5 ಅಡಕೆ ಮರಗಳು ನೆಲಕಚ್ಚಿವೆ. ವರದಿ ಚಂದ್ರಶೇಖರ್ ಅವರಿಗೆ ಸೇರಿದ 7 ಅಡಕೆ ಮರಗಳು ನೆಲ ಕಚ್ಚಿದ್ದರೆ ಅವರ ಗದ್ದೆಯ 7 ಎಕರೆ ಕಬ್ಬು ಮತ್ತು 1 ಎಕರೆ ಬತ್ತ ನಾಶವಾಗಿವೆ.
ಕೇಶವಮೂರ್ತಿ ಅವರಿಗೆ ಸೇರಿದ 2 ಎಕರೆ ಕಬ್ಬು ಸಹ ನಾಶವಾಗಿದೆ. ಇವಿಷ್ಟು ಮೇಲ್ನೋಟಕ್ಕೆ ಕಂಡುಬಂದ ಹಾನಿಯ ವಿವರಗಳಾಗಿದ್ದು ಹಾನಿಯ ವಿವರಗಳು ಇನ್ನೂ ಸ್ಪಷ್ಟವಾಗಿ ತಿಳಿದುಬರಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.