ಶಿವಮೊಗ್ಗ

ಕಾರು ಕಳ್ಳತನ; ಆರೋಪಿ ಬಂಧನ

Published On :

ಸಾಗರ: ಫೆಬ್ರವರಿ ತಿಂಗಳಿನಲ್ಲಿ ಪಟ್ಟಣದ ಆರ್.ಪಿ. ರಸ್ತೆಯಲ್ಲಿ ನಡೆದ ಕಾರು ಕಳ್ಳತನಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
2014ರ ಫೆಬ್ರವರಿ 10ರಂದು ಆರ್.ಪಿ. ರಸ್ತೆಯ ರಾಘಣ್ಣ ಎಂಬುವವರಿಗೆ ಸೇರಿದ ಮಾರುತಿ ಓಮಿನಿ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ರಾಘಣ್ಣ ಅವರು ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದರಿ ಕಾರು ಫೆ.11ರಂದು ಮಾಸ್ತಿಕಟ್ಟೆ ಸಮೀಪ ಅಪಘಾತಕ್ಕೆ ತುತ್ತಾಗಿ ನಿಂತಿರುವ ಬಗ್ಗೆ ಹೊಸಂಗಡಿ ಪೊಲೀಸರು ನೀಡಿದ ಮಾಹಿತಿಯನ್ನು ಆಧರಿಸಿ ತನಿಖೆಯನ್ನು ಚುರುಕುಗೊಳಿಸಿದರು.
ನೆಹರೂ ನಗರದ ನಿವಾಸಿ ನಾಗರಾಜ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾರುತಿ ಓಮಿನಿ ಕಳ್ಳತನ ಮಾಡಿರುವುದು ಒಪ್ಪಿಕೊಂಡಿದ್ದಾನೆ. ನಾಗರಾಜನಿಗೆ ಮೊದಲೇ ಒಂದು ಮದುವೆಯಾಗಿ ಎರಡು ಮಕ್ಕಳಿದ್ದರು. ಈತ ತಾನು ಮೊದಲು ಮದುವೆಯಾಗಿರುವ ಸತ್ಯವನ್ನು ಮುಚ್ಚಿಟ್ಟು ನವೆಂಬರ್ 2013ರಲ್ಲಿ ಮಂಗಳೂರಿನ ವಿಟ್ಲದ ಯುವತಿಯೊಬ್ಬಳನ್ನು ಮದುವೆಯಾಗಿ ಆಕೆಯನ್ನು ತವರುಮನೆಯಲ್ಲಿಯೇ ಬಿಟ್ಟು ಬಂದಿದ್ದನು ಎನ್ನಲಾಗಿದೆ.
ಎರಡನೇ ಹೆಂಡತಿಗೆ ಹೊಸ ಮನೆ ಮಾಡಿ, ಮನೆಗೆ ಬೇಕಾದ ಟಿ.ವಿ., ಪಾತ್ರೆ ಇನ್ನಿತರ ವಸ್ತುಗಳನ್ನು ಫೆ.10ರಂದು ರಾತ್ರಿ ಓಮಿನಿ ಕಳ್ಳತನ ಮಾಡಿ, ಫೆ.11ರಂದು ಬೆಳಗ್ಗೆ ಕಾರಿನಲ್ಲಿ ಸಾಮಗ್ರಿಗಳನ್ನು ತುಂಬಿಕೊಂಡು ಹೋಗುತ್ತಿದ್ದಾಗ ಓಮಿನಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ನಾಗರಾಜಗೆ ಸಣ್ಣಪುಟ್ಟ ಗಾಯವಾಗಿದೆ. ನಾಗರಾಜ್ ಓಮಿನಿಯನ್ನು ಅಲ್ಲಿಯೆ ಬಿಟ್ಟು, ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು, ವಾಹನವೊಂದರಲ್ಲಿ ಮನೆ ಸಾಮಗ್ರಿಗಳನ್ನು ತುಂಬಿಕೊಂಡು, ಕದ್ದ ಓಮಿನಿಯನ್ನು ಅಲ್ಲಿಯೆ ಬಿಟ್ಟು ಹೋಗಿದ್ದನು.
ಪ್ರಕರಣದ ಬೆನ್ನುಹತ್ತಿದ ಪೊಲೀಸರು ವಿಟ್ಲದಲ್ಲಿದ್ದ ಆರೋಪಿ ನಾಗರಾಜನನ್ನು ಬಂಧಿಸಿ ಜೈಲಿಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಪೇಟೆ ಠಾಣೆ ವೃತ್ತ ನಿರೀಕ್ಷಕ ಕೃಷ್ಣಮೂರ್ತಿ, ಸಿಬ್ಬಂದಿಗಳಾದ ಕುಮಾರ್, ಮಂಜಪ್ಪ, ಶ್ರೀಧರ್ ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.