ವಿಜ್ಞಾನಗುಡ್ಡ: ಭೂಮಿ ಸಾಫ್ಟ್ವೇರ್ ದುರುಪಯೋಗ
- ಅದಲಗೆರೆ ನಾಗೇಂದ್ರಕುಮಾರ್
ಕ.ಪ್ರ.ವಾರ್ತೆ ತುಮಕೂರು ಆ. 3
ಮಹತ್ವಾಕಾಂಕ್ಷಿ ವಿಜ್ಞಾನ ಗುಡ್ಡ ಯೋಜನೆಗೆ ಮೇಲಿಂದ ಮೇಲೆ ಕಂಟಕಗಳು ಎದುರಾಗುತ್ತಲೇ ಇವೆ. ಇದಕ್ಕೆ ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ತಹಸೀಲ್ದಾರ್ ಅವರ ಕಚೇರಿ ನೇರ ಹೊಣೆಯಾಗಿದೆ ಎಂಬ ಆರೋಪಗಳು ಬಲವಾಗುತ್ತಿದೆ.
ಸಾರ್ವಜನಿಕರ ಸಾವಿರಾರು ಕೋಟಿ ರು.ಗಳನ್ನು ವ್ಯಯ ಮಾಡಿ, ಸಾರ್ವಜನಿಕರ ಭೂ ದಾಖಲೆಗಳನ್ನು ಮತ್ತು ಸರ್ಕಾರದ ಸ್ವತ್ತುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಿದ ಭೂಮಿ ಸಾಪ್ಟ್ವೇರನ್ನು ಅಧಿಕಾರಿಗಳು ಮತ್ತು ಭೂ ಮಾಫಿಯಾ ದುರುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಜಾಗೃತರಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. 1991-92-93 ರ ಸಾಲಿನಲ್ಲಿ ಜಿಲ್ಲಾಡಳಿತದಲ್ಲಿ ಕಾರ್ಯನಿರ್ವಹಿಸಿದ ತಹಸೀಲ್ದಾರ್, ಜಿಲ್ಲಾಧಿಕಾರಿ, ಹಾಗೂ ಉಪವಿಭಾಗಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ನಿವೃತ್ತಿ ಹೊಂದಿದ್ದರೆ ಅವರ ಸೌಲಭ್ಯಗಳನ್ನು ಮೊಟಕುಗೊಳಿಸುವ ಮೂಲಕ ರಾಜ್ಯ ಸರ್ಕಾರ ದಿಟ್ಟತನ ಪ್ರದರ್ಶಿಸಬೇಕು.
ಸಾರ್ವಜನಿಕರೇ ಮಾಲೀಕರು, ಸರ್ಕಾರವಲ್ಲ: ರಾಜ್ಯದ ಉಚ್ಚ ನ್ಯಾಯಾಲಯ ಹಾಗೂ ದೇಶದ ಸರ್ವೋಚ್ಚ ನ್ಯಾಯಾಲಯಗಳು ಅನೇಕ ಪ್ರಕರಣಗಳಲ್ಲಿ ಅನೇಕ ಬಾರಿ ಸರ್ಕಾರವನ್ನು ಎಚ್ಚರಿಸುತ್ತಾ, ಸಾರ್ವಜನಿಕ ಉದ್ಯಾನವನಗಳು, ಕೆರೆ - ಬೆಟ್ಟ ಗುಡ್ಡ, ಕಟ್ಟೆಗಳು, ರಾಯಗಾಲುವೆಗಳು, ಆಟದ ಮೈದಾನಗಳು, ಗೋಮಾಳ ಪ್ರದೇಶಗಳು ಇವುಗಳಿಗೆ ಸರ್ಕಾರ ಟ್ರಸ್ಟಿ ಅಥವಾ ಮೇಲ್ವೀಚಾರಕ, ಹೊರತು ಮಾಲೀಕನಲ್ಲ. ಹೀಗಾಗಿ ಸಾರ್ವಜನಿಕ ಸ್ವತ್ತುಗಳನ್ನು ಪರಭಾರೆ ಮಾಡುವುದು, ಭೂ ಸ್ವರೂಪವನ್ನು ಬದಲಾಯಿಸುವುದು, ದತ್ತು ನೀಡುವುದು, ಭೋಗ್ಯ ಮಾಡುವುದು ಕಾನೂನಿಗೆ ವಿರುದ್ಧ. ಸರ್ಕಾರದ ಪಾತ್ರವೇನಿದ್ದರೂ, ಸಾರ್ವಜನಿಕ ಸ್ವತ್ತುಗಳನ್ನು ಸಂರಕ್ಷಿಸುವುದು. ನಿರ್ವಹಿಸುವುದು ಮತ್ತು ಈ ಪ್ರದೇಶಗಳ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಸಾರ್ವಜನಿಕ ಸ್ವತ್ತುಗಳು ಲೂಟಿಯಾಗುತಿದ್ದರೂ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಮೌನ ವಹಿಸಿದೆ.
2006 ರಲ್ಲಿ ಶಿರಸ್ತೇದಾರ್ ಆದೇಶ: 21-3-2006 ರಂದು ಆದೇಶ ಸಂಖ್ಯೆ ಭೂಮಿ 4 ಸಿಆರ್ 6878 ಬಾರ್ 2005 -06 ಟಿ. ನಂ. 9 ವಹಿವಾಟು ಸಂಖ್ಯೆ 8 ಬಾರ್ 2005-06 ರಲ್ಲಿ ಶಿರಸ್ತೇದಾರರು ಸರ್ವೆ ನಂ. 12 ಹಾಗೂ 33 ಹಕ್ಕು ದಾಖಲೆಯಂತೆ ಸರ್ಕಾರಿ ಕೆರೆ ಪ್ರದೇಶವಾಗಿದ್ದು, ಅನಧಿಕೃತವಾಗಿ ಎಚ್. ಎಂ. ದಿವ್ಯಾನಂದಮೂರ್ತಿ ಬಿನ್ ಎಚ್ ಕೆ. ಮಹಾಲಿಂಗಪ್ಪ ಮತ್ತು ಎಚ್. ಎಂ. ಮಂಜನಾಥ್ ಬಿನ್ ಎಚ್. ಕೆ. ಮಹಾಲಿಂಗಪ್ಪ ಅವರ ಹೆಸರು ಅನಧಿಕೃತವಾಗಿ ಸೇರ್ಪಡೆಯಾಗಿದ್ದು ಇವರುಗಳ ಹೆಸರನ್ನು ಪಹಣಿಯಿಂದ ತೆಗೆದು ಹಾಕಲು ಆದೇಶ ನೀಡಿದ್ದರೂ ಸಹ ಇವರ ಹೆಸರು ಪಹಣಿಯಲ್ಲಿ ಮುಂದುವರೆಯುತ್ತಿರುವುದು ಅತ್ಯಂತ ಸೋಜಿಗದ ಸಂಗತಿಯಾಗಿದೆ.
ಸೊಲ್ಲೆತ್ತದವರು: ತುಮಕೂರು ನಗರದಲ್ಲಿ ತುಮಕೂರು ವಿವಿಗೆ ಜಾಗ ನೀಡುವಲ್ಲಿ ಪರಿಸರವಾದಿಗಳು ತಗಾದೆ ತೆಗೆದು, ಬೊಬ್ಬೆ ಹೊಡೆದರು. ಮತ್ತು ತುಮಕೂರು ಅಮಾನಿಕೆರೆ ಸಂರಕ್ಷಿಸಲು ಹೋರಾಟ ಮಾಡಿದ ತುಮಕೂರು ವಿಜ್ಞಾನ ಪರಿಷತ್, ಕೆಲ ಪರಿಸರವಾದಿಗಳು, ಭ್ರಷ್ಟಾಚಾರ ವಿರೋಧಿಸಿದವರು, ವಿಜ್ಞಾನ ಗುಡ್ಡಕ್ಕೆ ವಿಶೇಷ ಆಸಕ್ತಿ ವಹಿಸಿರುವ ಸಂಸದ ಬಸವರಾಜು ಸೇರಿದಂತೆ, ತುಮಕೂರು ನಗರದ ಅತಿ ವಿದ್ಯಾವಂತ ಶಾಸಕರೂ, ವಿರೋಧ ಪಕ್ಷಗಳೂ ಮತ್ತು, ಕರ್ನಾಟಕದ ನೆಲ -ಜಲ, ನುಡಿ ರಕ್ಷಣೆಗಾಗಿ ಸ್ವಯಂ ಘೋಷಿತ ಕನ್ನಡಪರ ಸಂಘಟನೆಗಳು ಸೇರಿದಂತೆ ಯಾರೊಬ್ಬರೂ ಸಹ ಈ ವಿಷಯಕ್ಕೆ ಸೊಲ್ಲೆತ್ತದಿರುವುದು ಜಿಲ್ಲೆಯ ದುರಂತವೇ ಸರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

