ದಲ್ಲಾಳಿ ಚೆಕ್ ಮಾನ್ಯ ಮಾಡದಂತೆ ಡೀಸಿ ಆದೇಶ
ತುರುವೇಕೆರೆ: ರೈತರ ಹೆಸರಿನಲ್ಲಿ ಬಂದಿದ್ದ ಚೆಕ್‌ನಲ್ಲಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದ ಮಧ್ಯವರ್ತಿಗಳಿಗೆ ಜಿಲ್ಲಾಧಿಕಾರಿ ಯವರು ಹೊರಡಿಸಿದ ಖಡಕ್ ಆದೇಶದಿಂದ ತಾವು ಹಾಕಿದ್ದ ಇಡಿಗಂಟಿಗೇ ಕೊಕ್ಕೆ ಬೀಳುವ ಸ್ಥಿತಿ ಎದುರಾಗಿದೆ.
'ಕನ್ನಡಪ್ರಭ'ದಲ್ಲಿ ಪ್ರಕಟವಾದ 'ದುಂಡಗಾದ ಮಧ್ಯವರ್ತಿ; ಅನ್ನದಾತಗೆ ಯಥಾಸ್ಥಿತಿ' ವರದಿಯನ್ನಾದರಿಸಿ ಜಿಲ್ಲಾಧಿಕಾರಿ ಸತ್ಯಮೂರ್ತಿ ಅವರು, ಅತ್ಯಂತ ತ್ವರಿತಗಾಗಿ ತಿಪಟೂರು ಅಕ್ಸೆಸ್ ಬ್ಯಾಂಕ್ ಹಾಗೂ ಇತರೆ ಶಾಖೆಗಳಿಗೆ ರೈತರ ಹೆಸರಿನಲ್ಲಿ ಕೆಲವು ಖಾಸಗಿ ಬ್ಯಾಂಕ್ ಗಳ ಮೂಲಕ ಬರುವ ಚೆಕ್‌ಗಳನ್ನು ಮಾನ್ಯ ಮಾಡದಿರುವಂತೆ ಆದೇಶ ಹೊರಡಿಸಿದ್ದಾರೆ. ಪ್ರತಿಯೊಬ್ಬ ಪ್ರಜೆಗೂ ಆಧಾರ್ ಕಾರ್ಡ್ ಅಗತ್ಯವಾಗಿದೆ.
ಅದರಂತೆ ಪ್ರತಿಯೊಂದು ಸರ್ಕಾರದ ಸವಲತ್ತು ಬ್ಯಾಂಕ್‌ಗಳ ಮೂಲಕವೇ ಜಮಾ ಮಾಡಬೇಕು ಎಂಬುದು ಸರ್ಕಾರಗಳ ಸದುದ್ದೇಶವಾಗಿದೆ. ಆದರೆ ಹಲವಾರು ಮಂದಿ ರೈತರು ಇನ್ನೂ ಆಧಾರ್‌ಕಾರ್ಡ್ ಮಾಡಿಸದೆ ಇರಬಹುದು, ಅಥವಾ ಬ್ಯಾಂಕ್ ನಲ್ಲಿ ತಮ್ಮ ಹೆಸರಿನಲ್ಲಿ ಖಾತೆ ತೆರೆಯದೇ ಇರಬಹುದು. ಇಂತಹ ಸಂಧರ್ಭದಲ್ಲಾದರೂ ಪ್ರತಿಯೊಬ್ಬರೂ ತಮ್ಮ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾತೆ ಮಾಡಿಸಲು ಮುಂದಾಗಲಿ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿ ಬರ ಪರಿಹಾರ ಅಥವಾ ಇನ್ನಿತರ ಕಾರಣಕ್ಕೆ ರೈತರಿಗೆ ನೀಡಲಾಗಿರುವ ಪರಿಹಾರ ಹಣವನ್ನು ಬ್ಯಾಂಕ್ ಮೂಲಕ ಹಣ ಪಡೆಯಲಿ ಎಂಬುದು ಆದೇಶವಾಗಿದೆ.
ಆದರೆ, ಮಧ್ಯವರ್ತಿಗಳು ಶೇ.10 ರಷ್ಟು ಕಮಿಷನ್ ಹಿಡಿದುಕೊಂಡು ಉಳಿದ ಹಣವನ್ನು ರೈತರಿಗೆ ನೀಡುತ್ತಿರುವುದು ವಂಚನೆ ಎಂದು ಭಾವಿಸಿರುವ ಜಿಲ್ಲಾಧಿಕಾರಿ ಸತ್ಯಮೂರ್ತಿಯವರು ವ್ಯಕ್ತಿಗಳ ಖಾತೆ ಇಲ್ಲದೇ ಇದ್ದರೂ ಹಣ ಬಿಡುಗಡೆ ಮಾಡಿಸಲು ಮುಂದಾಗಿರುವ ಬ್ಯಾಂಕ್‌ಗಳ ಹಾಗೂ ಮಧ್ಯವರ್ತಿಗಳ ಹೆಸರನ್ನು ಪಡೆಯಲು ಪೊಲೀಸರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದರಿಂದಾಗಿ ಲಕ್ಷಾಂತರ ರುಪಾಯಿಯನ್ನು ರೈತರಿಗೆ ನೀಡಿ ಕಮಿಷನ್ ಪಡೆದಿರುವ ಹಲವಾರು ಮಧ್ಯವರ್ತಿಗಳಿಗೆ ತಾವು ಹಾಕಿದ್ದ ಬಂಡವಾಳಕ್ಕೆ ಎಲ್ಲಿ ಕುತ್ತು ಬೀಳುವುದೋ ಎಂದು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
ತಮ್ಮ ಸಹಕಾರಿ ಸಂಘದ ಮೂಲಕ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡಿಸಿಕೊಡುವುದಾಗಿ ಮಧ್ಯವರ್ತಿಗಳಿಗೆ ಭರವಸೆ ನೀಡಿದ್ದ ಬ್ಯಾಂಕ್ ಸಿಬ್ಬಂದಿ ಈಗ ಏನೂ ಮಾಡಲಾರದ ಸ್ಥಿತಿಯಲ್ಲಿದ್ದಾರೆ. ರೈತರ ಹೆಸರಿನಲ್ಲಿ ಯಾವುದೇ ಖಾತೆ ಇಲ್ಲದಿದ್ದರೂ ಸಹ ನಕಲಿಯಾಗಿ ದಾಖಲೆ ಸೃಷ್ಠಿ ಮಾಡಿಕೊಂಡು ಹಣವನ್ನು ಡ್ರಾ ಮಾಡಿಕೊಳ್ಳಬಹುದು ಎಂದುಕೊಂಡಿದ್ದ ಮಂದಿಗೆ ಈಗ ಜಿಲ್ಲಾಧಿಕಾರಿಗಳ ಖಡಕ್ ಕ್ರಮ ನುಂಗಲಾರದ ಬಿಸಿತುಪ್ಪದಂತಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ರೈತರ ಪರಿಹಾರ ಮೊತ್ತವು ಯಾವ ಹಣಕಾಸು ಸಂಸ್ಥೆಯಿಂದ ಅಕ್ಸೆಸ್ ಬ್ಯಾಂಕ್‌ಗೆ ಬಂದಿದೆ. ಯಾವ ನಂಬರಿನಲ್ಲಿ ಖಾತೆದಾರರಿದ್ದಾರೆ ಎಂಬ ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಹಾಗೂ ಬ್ಯಾಂಕ್‌ಗೆ ಸೂಚನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

