ತುಮಕೂರು

ಮಲ್ಲೀಗೆರೆ ರಾಜಗೋಪುರ ನಿರ್ಮಾಣಕ್ಕೆ ಭೂಮಿಪೂಜೆ

Published On :

ಕ.ಪ್ರ.ವಾರ್ತೆ ,  ಚಿಕ್ಕನಾಯಕನಹಳ್ಳಿ ,  ಆ. 25
ತಾಲೂಕಿನಲ್ಲಿ ಅತಿ ಹೆಚ್ಚು ಭಕ್ತವೃಂದವನ್ನು ಹೊಂದಿರುವ ಆದಿಶಕ್ತಿ ಸ್ವರೂಪಿಣಿಯಾದ ಮಲ್ಲೀಗೆರೆ ಶ್ರೀಕರಿಯಮ್ಮದೇವಿ ದೇವಾಲಯದ ಮುಂಭಾಗದಲ್ಲಿ 65 ಲಕ್ಷ ರು.ಗಳ ವೆಚ್ಚದಲ್ಲಿ  65 ಅಡಿ ಎತ್ತರ ನಿರ್ಮಾಣ ಮಾಡಲಿರುವ ರಾಜಗೋಪುರಕ್ಕಿಂದು ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
ಭಾನುವಾರ ಬೆಳಿಗ್ಗೆ 7.00 ಗಂಟೆಗೆ ಶ್ರೀಕರಿಯಮ್ಮದೇವಿಯ ನಿರೂಪದಂತೆ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ ಯಾವುದೇ ರೀತಿಯ, ಯಾರದೇ  ದೊಡ್ಡಸ್ತಿಕೆಯಿಲ್ಲ. ಸಂಪೂರ್ಣ ಭಕ್ತರ ಕಾಣಿಕೆಯಿಂದ ಅಂದರೆ ಕೇವಲ ಒಂದು ರು.ಕಾಣಿಕೆ ನೀಡುವ ಭಕ್ತನ ಸಹಾಯವನ್ನು ಸಹ ಕಡೆಗಣಿಸುವುದಿಲ್ಲ. ಈಗಾಗಲೇ  ಕೋಟ್ಯಂತರ ರು.ಗಳ ವೆಚ್ಚದಲ್ಲಿ ದೇವಾಲಯವನ್ನು ಸಂಪೂರ್ಣ ಶಿಲೆಯಲ್ಲಿ ನಿರ್ಮಿಸಿದ್ದು, ಅದಕ್ಕೂ ಸರ್ಕಾರದ ಯಾವುದೇ ರೀತಿಯ ನೆರವಿಲ್ಲದೆ ಭಕ್ತರ ಸಹಕಾರದಿಂದಲೇ ಪೂರ್ಣಗೊಳಿಸಿದ್ದಾಗಿದೆ. ಈಗಲೂ ದೇವಿಯ ಕೃಪೆಯಿಂದ ಧನಸಹಾಯ ಬರುತ್ತದೆಂಬ ನಂಬಿಕೆಯಿಂದ. ಆಕೆಯ ಮೇಲೆ ಭಾರಹಾಕಿ ಕಾರ್ಯವನ್ನು ಪ್ರಾರಂಭಿಸಿದ್ದೇವೆ ಎಂದು ಗೋಪುರ ನಿರ್ಮಾಣ ಸಮಿತಿಯ ಸದಸ್ಯರಾದ ಜಯಪ್ರಕಾಶ್, ಮೈಸೂರಪ್ಪ, ಗುತ್ತಿಗೆದಾರ ವೈದ್ಯನಾಥ್, ಗ್ರಾಮದ ಮಹದೇವಯ್ಯ, ಲೋಕೇಶ, ಭೈರಪ್ಪ ಮುಂತಾದವರು ತಿಳಿಸಿದರು.
ಸೆ.2 ರಿಂದ 2ನೇ ಹಂತದ ಕೊಬ್ಬರಿ ಖರೀದಿ ಪ್ರಾರಂಭ
ಹುಳಿಯಾರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ಕೊಬ್ಬರಿಯನ್ನು ಖರೀದಿಸಲು ನಫೆಡ್ ಕೇಂದ್ರಗಳನ್ನು ತೆರೆದು ಖರೀದಿಗೆ ಮುಂದಾಗಿರುವ ಸರ್ಕಾರ ಇದೀಗ ಎರಡನೇ ಹಂತದಲ್ಲಿ  ಕೊಬ್ಬರಿ ಖರೀದಿಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಹುಳಿಯಾರಿನ ಮಾರುಕಟ್ಟೆಯಲ್ಲಿ ಸೆ. 2 ರಿಂದ ಕೊಬ್ಬರಿ ಖರೀದಿ ನಡೆಯಲಿದೆ. ಎರಡನೇ ಹಂತದಲ್ಲಿ ನಫೆಡ್ ಕೇಂದ್ರಕ್ಕೆ ಕೊಬ್ಬರಿ ತರುವ ರೈತರು ಆ.28 ರಿಂದ ದಿನಾಂಕ ನೋಂದಾವಣೆ ಪ್ರಾರಂಭಗೊಳ್ಳಲಿದ್ದು, ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹುಳಿಯಾರು ಹೋಬಳಿ, ಹಂದನಕೆರೆ ಹೋಬಳಿ ಹಾಗೂ ಕಂದಿಕೆರೆ ಹೋಬಳಿಯ ತಿಮ್ಮನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೆಂಗು ಬೆಳೆಗಾರು ಈ ನಾಫೆಡ್ ಕೇಂದ್ರ ಕೊಬ್ಬರಿ ಮಾರಬಹುದಾಗಿದೆ. ಈ ಹಿಂದೆ ದಿನಾಂಕ ಪಡೆಯದ ರೈತರು ಖುದ್ದಾಗಿ ತಮ್ಮ ಹೆಸರಿನಲ್ಲಿರುವ ಪಹಣಿಯೊಂದಿಗೆ ಕಚೇರಿ ಸಮಯದಲ್ಲಿ ಬಂದು ತೆಂಗು ಬೆಳೆದಿರುವ ಪಹಣಿ, ಆಧಾರ್ ಕಾರ್ಡನ್ನು ನಿಗದಿಪಡಿಸಿದ ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ  ಅಧಿಕಾರಿಗಳಲ್ಲಿ ಹೆಸರು ನೋಂದಾಯಿಸುವಂತೆ ಎಂ.ಆರ್.ಜಯರಾಂ ಹಾಗೂ ನಾಫೆಡ್ ವ್ಯವಸ್ಥಾಪಕ ಚನ್ನಕೇಶವರೆಡ್ಡಿ ಪ್ರಕಟಣೆಯಲ್ಲಿ ಕೋರಿದ್ದಾರೆ. 08133-256042 ಸಂಪರ್ಕಿಸಬಹುದಾಗಿದೆ.
ವಿದ್ಯಾರ್ಥಿಗಳಿಗೆ ಹಾಸಿಗೆ, ಹೊದಿಕೆ
ತುರುವೇಕೆರೆ: ಪಟ್ಟಣ ಪಂಚಾಯ್ತಿ ವತಿಯಿಂದ ಪಟ್ಟಣದಲ್ಲಿರುವ ಬಿಸಿಎಂ ಹಾಸ್ಟೆಲ್‌ನ ವಿದ್ಯಾರ್ಥಿಗಳಿಗೆ ಸುಮಾರು 2 ಲಕ್ಷ ರು.ಗಳ ವೆಚ್ಚದಲ್ಲಿ ಹಾಸಿಗೆ ಹಾಗೂ ಹೊದಿಕೆಯನ್ನು ವಿತರಣೆ ಮಾಡಲಾಯಿತು.  
ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಕುಮಾರ್, ಅವರು ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಬರುವ ಶೇ. 7.25 ರ ಅನುದಾನದಲ್ಲಿ ಎಸ್‌ಎಫ್‌ಸಿ ಮುಕ್ತ ನಿಧಿ ಯೋಜನೆಯಡಿ ಎರಡು ಅಂತಸ್ಥಿನ 10 ಕಬ್ಬಿಣದ ಮಂಚಗಳು, 20 ಹಾಸಿಗೆಗಳು, 20 ಉಲ್ಲನ್ ರಗ್ಗುಗಳು, 20 ದಿಂಬುಗಳನ್ನು ಬಿಸಿಎಂನ ಅಧಿಕಾರಿ ಸುಶೀಲಮ್ಮ ಅವರಿಗೆ ವಿತರಣೆ ಮಾಡಿದರು.  ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಮುರುಳೀಧರ್, ಪಟ್ಟಣ ಪಂಚಾಯ್ತಿಯ ದೇವರಾಜು ಉಪಸ್ಥಿತರಿದ್ದರು.
28 ರಂದು ಕೃಷ್ಣ     ಜಯಂತಿ
ಶಿರಾ: ತಾಲೂಕಿನ ದ್ವಾರನಕುಂಟೆ ಗ್ರಾಮದಲ್ಲಿ ಆ. 28 ಬುಧವಾರ ಕೃಷ್ಣ ಜಯಂತಿ ಮತ್ತು ಯಾದವ ಜನಾಂಗದ ಮಹಾಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಾದ ಡಿ.ರಾಜು ತಿಳಿಸಿದ್ದಾರೆ. ಜಗದ್ಗುರು ಕೃಷ್ಣಯಾದವಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು ಮಡಕೆ ಒಡೆಯುವ ಕಾರ್ಯಕ್ರಮ, ಶ್ರೀ ಕೃಷ್ಣನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನೇತ್ರ ತಪಾಸಣಾ ಉಚಿತ ಶಿಬಿರ
ಶಿರಾ: ತಾಲೂಕಿನ ಕಳ್ಳಂಬೆಳ್ಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ.30 ರಂದು ಉಚಿತ ನೇತ್ರ  ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಡಾ.ಎಂ.ಸಿ.ಮೋದಿ ಚಾರಿಟಬಲ್ ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಡೆಯುವ ಈ ಶಿಬಿರದಲ್ಲಿ ನುರಿತ ವೈದ್ಯರು ಪಾಲ್ಗೊಳ್ಳಲಿದ್ದು, ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಆಯೋಜಕರು ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಶಿರಾ: ತಾಲೂಕಿನ ಗೌಡಗೆರೆ ಹೋಬಳಿಯ ಕಗ್ಗಲಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಸ್.ಡಿ.ಎಂ.ಸಿ. ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಕೆ.ಟಿ.ಲಿಂಗರಾಜು, ಉಪಾಧ್ಯಕ್ಷರಾಗಿ ಮೀನಾಕ್ಷಿ,  ಸದಸ್ಯರಾಗಿ ಮಹಲಿಂಗಪ್ಪ, ರಂಗಮ್ಮ, ಕರಿಯಮ್ಮ, ರಂಗನಾಥಪ್ಪ, ಪಾತಲಿಂಗಪ್ಪ, ತಿಪ್ಪಣ್ಣ, ಈರಮ್ಮ, ತಿಪ್ಪೇಸ್ವಾಮಿ, ರಾಮಲಿಂಗಪ್ಪ, ಗೌರಮ್ಮ, ಹಾಗೂ ಲಿಂಗೇಗೌಡ ಆಯ್ಕೆಯಾಗಿದ್ದಾರೆ.
ಟೆನ್ನಿಸ್‌ಬಾಲ್ ಕ್ರಿಕೆಟ್ ಟೂರ್ನಿ
ಹುಳಿಯಾರು: ಗೌರಿ ಗಣೇಶದ ಹಬ್ಬದ ಅಂಗವಾಗಿ ಹುಳಿಯಾರಿನ ಶ್ರೀಗೆಳೆಯರ ಬಳಗದ ಕ್ರಿಕೆಟ್  ಕ್ಲಬ್‌ನವರು ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಸೆ. 1 ರ ಭಾನುವಾರದಂದು ಎಂಪಿಎಸ್ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದಾರೆ. ಟೂರ್ನಿಯಲ್ಲಿ ಪ್ರಥಮ ಬಹುಮಾನವಾಗಿ 3001 ರು. ಹಾಗೂ ಪಾರಿತೋಷಕ, ದ್ವಿತೀಯ ಬಹುಮಾನವಾಗಿ 1501 ರು. ಹಾಗೂ ಪಾರಿತೋಷಕ, ತೃತೀಯ ಬಹುಮಾನವಾಗಿ ಪಾರಿತೋಷಕ ನೀಡಲಾಗುವುದು. ಪ್ರವೇಶ ಶುಲ್ಕ 250 ರು.  ಹೆಚ್ಚಿನ ಮಾಹಿತಿಗಾಗಿ ಸಂತು (9590868742), ಕೆ.ಎನ್.ಕಲ್ಲೇಶ್ (8453 056859) ಸಂಪರ್ಕಿಸಬಹುದು.
ನೂತನ ಅಧ್ಯಕ್ಷರ ಆಯ್ಕೆ
ಶಿರಾ: ನಗರದ ಮೋತಿ ಮೊಹಲ್ಲ ಬಳಕೆದಾರರ ಸಂಘದ ನೂತನ ಅಧ್ಯಕ್ಷರಾಗಿ ಮಹಮದ್‌ಸಾಲೇಹ ಸಲಾಮತ್ ಆಯ್ಕೆಯಾಗಿದ್ದಾರೆ.
ಅತ್ಯಾಚಾರ ಖಂಡಿಸಿ ಅಭಾವಿಪ ಪ್ರತಿಭಟನೆ
ತುಮಕೂರು: ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಅಭಾವಿಪ ತುಮಕೂರು ನಗರ ಶಾಖೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಾರ್ಯಕಾರಣಿ ಸದಸ್ಯ ಅಮರೇಶ, ಹಿಂದೆ ಈ ರೀತಿಯ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗದಿರುವುದೆ, ಈ ರೀತಿಯ ಪ್ರಕರಣಗಳು ಪುನಾವರ್ತಿತ ಆಗುವುದಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಆರೋಪಿಗಳನ್ನು ತಕ್ಷಣ ಪತ್ತೆ ಹಚ್ಚಿರುವ ಮಹಾರಾಷ್ಟ್ರ ಪೊಲೀಸ್‌ನ ಕಾರ್ಯ ಶ್ಲಾಘನೀಯ. ಆದರೆ, ಅವರಿಗೆ ಅತಿ ಕಠಿಣ ಶಿಕ್ಷೆ ನೀಡುವುದರ ಮೂಲಕ ಸರಿಯಾದ ಎಚ್ಚರಿಕೆ ನೀಡಬೇಕು. ಮಹಾರಾಷ್ಟ್ರ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಸರಿಯಾದ ದಿಟ್ಟ ಹೆಜ್ಜೆ ಇಡಬೇಕು. ಕೇಂದ್ರ ಸರಕಾರ ರಾಷ್ಟ್ರೀಯ ಭದ್ರತೆಯ ವಿಷಯವನ್ನು ತುಂಬ ಲಘುವಾಗಿ ಪರಿಗಣಿಸಿದೆ. ಸರ್ಕಾರದ ಸುರಕ್ಷತೆಯ ಅನೇಕ ಘೋಷಣೆಗಳು ಕಡತದಲ್ಲಷ್ಟೆ ಇದೆ. ಅದು ಕಾರ್ಯಗತಗೊಳಿಸುವಲ್ಲಿ ಸರ್ಕಾರ ಪ್ರಯತ್ನ ಮಾಡಬೇಕು ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿಯಲ್ಲೇ ವಿರೋಧ
ತುಮಕೂರು: ಮುಂದಿನ ಸಂಸತ್ ಚುನಾವಣೆಗೆ ಜಾತ್ಯತೀತ ಜನತಾದಳದೊಂದಿಗೆ ಬಿಜೆಪಿಯ ಮೈತ್ರಿಗೆ ವಿರೋಧ ವ್ಯಕ್ತವಾಗಿದೆ. ತುಮಕೂರು ಗ್ರಾಮಾಂತರ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಸುರೇಶ್‌ಗೌಡ ಅವರು ಬಿಜೆಪಿ, ಜೆಡಿಎಸ್ ಮೈತ್ರಿಗೆ ಅಸಮಾಧಾನ ವ್ಯಕ್ತಪಡಿಸಿದ್ದು ಈ ಸಂಬಂಧ ಪಕ್ಷದ ಮುಖಂಡರ ಜತೆ ಚರ್ಚಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ದ್ದು ಅಪವಿತ್ರ ಮೈತ್ರಿ ಎಂದು ಜರಿದಿರುವ ಸುರೇಶ್‌ಗೌಡ ಮೈತ್ರಿ ಬಗ್ಗೆ ಪಕ್ಷದೊಳಗೆ ಚರ್ಚೆ ನಡೆದಿರಲಿಲ್ಲ ಎಂದರು. ವಚನ ಭ್ರಷ್ಟ ಆರೋಪ ಹೊತ್ತಿರುವ ಜೆಡಿಎಸ್ ಜತೆ ಹೊಂದಾಣಿಕೆಯಲ್ಲಿ  ಅರ್ಥವಿಲ್ಲ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ತಾವು ಚರ್ಚಿಸಲು ಸಿದ್ಧರಿರುವುದಾಗಿ ಸುರೇಶ್‌ಗೌಡ ತಿಳಿಸಿದರು. ಬಿಜೆಪಿಗೆ ಯಡಿಯೂರಪ್ಪ ಬರಲು ಪಕ್ಷದಲ್ಲಿ ಕೆಲವರ ವಿರೋಧವಿದೆ. ಆದರೆ ಪಕ್ಷ ಸದೃಢವಾಗಿ ಬೆಳೆಯಲು, ಲೋಕಸಭಾ ಚುನಾವಣೆಯಲ್ಲಿ ಸೀಟು ಗೆಲ್ಲಲು ಯಡಿಯೂರಪ್ಪ ಅನಿವಾರ್ಯ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.