ತುಮಕೂರು

ಆಹಾರ ಧಾನ್ಯ ವಿತರಣೆ ನಿಲ್ಲಿಸಿದ್ದಕ್ಕೆ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ,  ಕುಣಿಗಲ್ ,  ಆ.26
ಪಟ್ಟಣದ ವಿವಿಧ ಬಡಾವಣೆಯ ನೂರಾರು ಬಿಪಿಎಲ್ ಕಾರ್ಡ್‌ದಾರರಿಗೆ ತಾಂತ್ರಿಕ ಕಾರಣ ನೆಪವೊಡ್ಡಿ ಪ್ರಸಕ್ತ ಮಾಹೆಯ ಆಹಾರಧಾನ್ಯ ವಿತರಣೆ ನಿಲ್ಲಿಸಿರುವುದನ್ನು ವಿರೋಧಿಸಿ, ಕಾರ್ಡ್‌ದಾರರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ, ತಹಸೀಲ್ದಾರ್, ಆಹಾರ ಇಲಾಖೆ ಅಧಿಕಾರಗಳ ವಿರುದ್ಧ ಘೋಷಣೆ ಕೂಗಿ, ಕೂಡಲೆ ಅಹಾರಧಾನ್ಯ ವಿತರಿಸುವಂತೆ ಆಗ್ರಹಿಸಿದರು.
ಸೋಮವಾರ ಬೆಳಗ್ಗೆ 11ಗಂಟೆಗೆ ಮುಖಂಡರಾದ ಕುಮಾರಸ್ವಾಮಿ, ಬಾಬು, ವೆಂಕಟೇಶ್, ನಾರಾಯಣ, ಸದಸ್ಯೆ ತಾರಾದೇವಿ ನೇತೃತ್ವದಲ್ಲಿ ನೂರಾರು ಕಾರ್ಡ್‌ದಾರರು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಪ್ರಾರಂಭಿಸಿದರು. ಮುಖಂಡ ಕುಮಾರಸ್ವಾಮಿ ಮಾತನಾಡಿ, 2009ರಲ್ಲಿ ಬಿಪಿಎಲ್ ಕಾರ್ಡ್‌ಗೆ ದಾಖಲಾತಿ ನೀಡಿ, ಭಾವಚಿತ್ರ ಕಾರ್ಡ್ ಹೊಂದಿರುವ ಫಲಾನುಭವಿಗಳು ಇದೆ 25ರೊಳಗೆ ಎಸ್‌ಎಂಎಸ್ ಕಳುಹಿಸಿ ಪುನಃ ಹೊಸದಾಗಿ ಭಾವಚಿತ್ರ ತೆಗೆಸಿ, ನೂತನ ಕಾರ್ಡ್ ಪಡೆಯುವಂತೆ ಈಗ ಅಹಾರ ಇಲಾಖಾಧಿಕಾರಿಗಳು, ಸೊಸೈಟಿಯವರು ಹೇಳುತ್ತಿದ್ದಾರೆ.
ಅಧಿಕಾರಿಗಳ ಧೋರಣೆ ಖಂಡನೆ: ಆದರೆ, ಈ ಹಿಂದೆಯೇ ಕಾರ್ಡ್‌ದಾರರಿಗೆ ಸೂಕ್ತ ಮಾಹಿತಿ ನೀಡದ ಕಾರಣ ಕಾರ್ಡ್‌ದಾರರು ತಮ್ಮಪಾಡಿಗೆ ತಾವಿದ್ದು, ಈಗ ಏಕಾಏಕಿ ಆಹಾರಧಾನ್ಯ ನಿಲ್ಲಿಸಿರುವ ಅಧಿಕಾರಿಗಳ ಧೋರಣೆ ಖಂಡಿಸಿದರಲ್ಲದೆ ಕಳೆದ ಶುಕ್ರವಾರ ಪ್ರತಿಭಟನೆ ನಡೆಸಿದಾಗ, ಅಧಿಕಾರಿಗಳು ಸೋಮವಾರದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಯಾವುದೇ ಕ್ರಮ ಕೈಗೊಳ್ಳದೆ ಬಡಜನತೆಯ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವುದು ಖಂಡನೀಯ ಎಂದರು.ಬಿಪಿಎಲ್ ಕಾರ್ಡ್ ಫಲಾನು ಭವಿ ಹಫೀಜಾಬಾನು, ತಾವು ಅನಕ್ಷರಸ್ಥರಾಗಿದ್ದು ತಮ್ಮ ಮನೆಯಲ್ಲಿ ಮೊಬೈಲ್ ಫೋನ್ ಇಲ್ಲ, ಕೂಲಿನಾಲಿ ಮಾಡಿ, ಬೀಡಿಕಟ್ಟಿ ಜೀವನ ಸಾಗಿಸುತ್ತಿದ್ದೇವೆ, ಸರ್ಕಾರ ಮನಸ್ಸಿಗೆ ಬಂದಂತೆ, ಕಾನೂನು ಮಾಡುತ್ತಿದೆ ಎಂದರು.
ಬೆಳಗ್ಗೆ 11ಗಂಟೆಯಿಂದ ತಾಲೂಕು ಕಚೇರಿ ಮುಂದೆ ಸೂಕ್ತ ಸಮಜಾಯಿಷಿಗೆ ಆಗ್ರಹಿಸಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರೂ, ತಹಸೀಲ್ದಾರ್ ಆಗಲಿ, ಆಹಾರ ಇಲಾಖಾಧಿಕಾರಿಗಳಾಗಲಿ ಸ್ಥಳಕ್ಕೆ ಆಗಮಿಸಿ ಸೂಕ್ತ ಉತ್ತರ ಹೇಳದ ಕಾರಣ ಬೇಸತ್ತ ಪ್ರತಿಭಟನಕಾರರು, ಆಹಾರ ಇಲಾಖೆ ವಿಭಾಗಕ್ಕೆ ತೆರಳಿ ಶಿರಸ್ತೆದಾರ್‌ರೆ ಬಂದು ಉತ್ತರ ಹೇಳುತ್ತೀರೋ ಅಥವಾ ನಾವೆ ಬಂದು ಇಲ್ಲಿ ಕೂರಬೇಕೋ ಎಂದಾಗ,  ವಿಧಿ ಇಲ್ಲದೆ, ಶಿರಸ್ತೆದಾರ್ ರಂಗಧಾಮಯ್ಯ ಆಗಮಿಸಿದರು. ಅವರು ಸ್ಪಷ್ಟನೆ ನೀಡಲು ಮುಂದಾದಾಗ ಪ್ರತಿಭಟನಾಕಾರರು ಶಿರಸ್ತೆದಾರ್‌ರೊಂದಿಗೆ ವಾಗ್ವಾದ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರು ಮಧ್ಯಪ್ರವೇಶಿಸಿ ಸಮಾಧಾನಗೊಳಿಸಿದರು.
ಶೀಘ್ರ ಸ್ಪಷ್ಟ ನಿರ್ಧಾರ: ಶಿರಸ್ತೆದಾರ್ ರಂಗಧಾಮಯ್ಯ ಮಾತನಾಡಿ, ಸರ್ಕಾರ ಈ ಹಿಂದೆ ಅಂದರೆ ಮಾರ್ಚ್ ತಿಂಗಳಲ್ಲೆ ಹಳೇ ಕಾರ್ಡ್‌ಗೆ ಎಸ್‌ಎಂಎಸ್ ಕಳಿಸುವಂತೆ ಸೂಚಿಸಿದೆ. ಕಾರಣಾಂತರದಿಂದ ಬಹುತೇಕರು ಕಳಿಸಿಲ್ಲವಾದ ಕಾರಣ ಈಗ ಆಹಾರ ಧಾನ್ಯ ವಿತರಣೆ ಅಂತಹ ಕಾರ್ಡ್‌ಗೆ ನಿಲ್ಲಿಸಲಾಗಿದೆ. ಈ ಮಧ್ಯೆ ಕಳೆದ ಶುಕ್ರವಾರ ಪ್ರತಿಭಟನೆ ನಡೆಸಿದ ಮೇರೆಗೆ, ಸೂಕ್ತ ಕಾಲವಕಾಶ ನೀಡುವಂತೆ, ಅಲ್ಲಿಯವರೆಗೂ ಆಹಾರಧಾನ್ಯ ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ತಹಸೀಲ್ದಾರ್ ಇಂದು ಜಿಲ್ಲಾಧಿಕಾರಿಗಳ ಸಭೆಗೆ ತೆರಳಿದ್ದು ಸಭೆಯಲ್ಲಿ ಚರ್ಚಿಸಿದ ನಂತರ, ಮಂಗಳವಾರದಂದು ಸ್ಪಷ್ಟ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.