ತುಮಕೂರು

ಗೋಹತ್ಯೆ ನಿಷೇಧ ಕಾಯ್ದೆ ವಾಪಸಿಗೆ ಆಕ್ರೋಶ

Published On :

ಕ.ಪ್ರ.ವಾರ್ತೆ ತುಮಕೂರು ಆ. 28
ಹಿಂದಿನ ಬಿಜೆಪಿ ಸರ್ಕಾರ ಗೋ ಹತ್ಯೆಯನ್ನು ಪರಿಣಾಮಕಾರಿಯಾಗಿ ನಿಷೇಧಿಸಲು ಕಾನೂನಿಗೆ ತಿದ್ದುಪಡಿ ಮಾಡಿದನ್ನು ಮತ್ತು ಹಲವಾರು ಪ್ರತಿಷ್ಠಿತ ದೇವಾಲಯಗಳಿಗೆ ರಚನೆ ಮಾಡಲಾಗಿದ್ದ ವ್ಯವಸ್ಥಾಪನ ಸಮಿತಿಗಳನ್ನು ಇತ್ತೀಚೆಗೆ ರದ್ದು ಮಾಡಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರಗಳನ್ನು ಜಿಲ್ಲಾಧ್ಯಕ್ಷ ಹಾಗೂ ಶಾಸಕ ಬಿ. ಸುರೇಶ್ ಗೌಡರ ನೇತೃತ್ವದಲ್ಲಿ ಪ್ರತಿಭಟನಾ ಧರಣಿಯನ್ನು ತುಮಕೂರು ಜಿಲ್ಲಾ ಘಟಕ ನಡೆಸಿತು.
ನಗರದ ಟೌನ್ ಹಾಲ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕವು ಪ್ರತಿಭಟನೆ ನಡೆಸಿ, ತುಮಕೂರು ತಾಲೂಕು ತಹಸಿಲ್ದಾರ್ ರವರಿಗೆ ಮನವಿ ಅರ್ಪಿಸಿತು.
ರಾಜ್ಯದಲ್ಲಿ ಅಲ್ಪಸಂಖ್ಯಾತರು ಮತ್ತು ಬಹು ಸಂಖ್ಯಾತರ ನಡುವಿನ ಕಂದಕವನ್ನು ಹೆಚ್ಚಿಸುವ ದುಸ್ಸಾಹಕ್ಕೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ, ಇದೊಂದು ರಾಜಕೀಯ ಲಾಭಕ್ಕೆ ಮಾಡಿರುವ ಕ್ರಮವೆಂದು, ಕಾನೂನು ಬಾಹಿರ ನಿರ್ಧಾರವೆಂದು ಆರೋಪಿಸಿದೆ.
ಬಿ. ಸುರೇಶ್‌ಗೌಡ ಮಾತನಾಡಿ ಇದೊಂದು ಬಹು ಸಂಖ್ಯಾತರ ಭಾವನೆಗಳಿಗೆ ವಿರುದ್ಧವಾಗಿದೆ. ಬಿಜೆಪಿ ಸರ್ಕಾರ ವಿಧಾನ ಮಂಡಲಗಳಲ್ಲಿ ನಿಯಮಾನುಸಾರ ಅಂಗೀಕಾರ ಪಡೆದು, ಕಾನೂನು ಮಾಡಲು ಮುಂದಾಗಿತ್ತು. 2011 ರಲ್ಲಿ ರಾಜ್ಯ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಇಚ್ಛೆಗೆ ಅನುಗುಣವಾಗಿ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ರಚನೆ ಮತ್ತು 2010, 2012ರ ಅಧಿವೇಶನದಲ್ಲಿ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರಗಳ ಪರಿರಕ್ಷಣಾ (ತಿದ್ದುಪಡಿ) ವಿಧೇಯಕಕ್ಕೆ ಹಿಂದಿನ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ಎರಡು ಕ್ರಮಗಳನ್ನು ವಾಪಸ್ ಪಡೆದಿರುವುದನ್ನು ತೀವ್ರವಾಗಿ ವಿರೋಧಿಸಿದರು.
ಗೋವುಗಳ ಸಂಖ್ಯೆ ಕ್ಷೀಣ: ನಾಡಿನಲ್ಲಿ ಗೋವುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಗೋ ಸಂತತಿ ಸಂರಕ್ಷಣೆಗಾಗಿ 1964 ರ ಗೋ ಹತ್ಯೆ ನಿಷೇಧ ಕಾನೂನಿಗೆ ಮಾರ್ಪಾಡು ಮಾಡಿ, ಗೋ ಹತ್ಯೆ ವಿರುದ್ಧ ದನಿಯೆತ್ತುವವರಿಗೆ ರಕ್ಷಣೆ ಮಾಡಲು ಹಾಗೂ ಸಾಂಪ್ರದಾಯಕ ಕೃಷಿ ಪದ್ಧತಿಗೆ ಅನುಕೂಲವಾಗುವಂತೆ ಪ್ರೋತ್ಸಾಹಿಸಲು ಮತ್ತು ರಾಜ್ಯದ ಹಲವಾರು ಪ್ರತಿಷ್ಠಿತ ದೇವಾಲಯಗಳಲ್ಲಿ ಉತ್ತಮ ಮೂಲಭೂತ ಸೌಲಭ್ಯ ಒದಗಿಸಿ, ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಿ ಉತ್ತಮ ರೀತಿಯಲ್ಲಿ ದೇವಾಲಯಗಳ ನಿರ್ವಹಣೆ ಮಾಡಲು ಅನುಕೂಲವಾಗುವಂತೆ ದೇವಾಲಯಗಳ ವ್ಯವಸ್ಥಾಪನ ಸಮಿತಿಗಳನ್ನು ರಚನೆ ಮಾಡಲಾಗಿದ್ದನ್ನು, ಕೇವಲ ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದಿದ್ದಾರೆ.
ಕಾಂಗ್ರೆಸ್ ವಿಫಲ: ಬಿಜೆಪಿ ರಾಜ್ಯಕಾರ್ಯದರ್ಶಿ ಎಂ.ಬಿ. ನಂದೀಶ್, ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀಶ್, ತುಮಕೂರು ನಗರ ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಪಿ.ಮಹೇಶ್, ಪ್ರೇಮ ಹೆಗ್ಗಡೆ ಅವರು ಕಾಂಗ್ರೆಸ್, ಧಾರ್ಮಿಕ ಹಕ್ಕುಗಳಿಗೆ ಚ್ಯುತಿ ತಂದಿದೆ. ಸಮಾನ ಸಮಾಜ ನಿರ್ಮಾಣ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದರು.
ಅಲ್ಪ ಸಂಖ್ಯಾತರನ್ನು ಓಲೈಸುವ ಉದ್ದೇಶದಿಂದಲೇ ಈ ಕ್ರಮಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ, ಅಲ್ಪಸಂಖ್ಯಾತರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು. ಕೂಡಲೇ ದೇವಾಲಯಗಳ ವ್ಯವಸ್ಥಾಪನ ಸಮಿತಿ ರದ್ದುಗೊಳಸಿರುವುದು ಮತ್ತು ಗೋ ಹತ್ಯೆ ನಿಷೇಧ ಮಸೂದೆ ವಿಧೇಯಕ ಹಿಂಪಡೆಯಲು ಒತ್ತಾಯಿಸಿದರು.
ಧರಣಿಯಲ್ಲಿ ಜಿಲ್ಲಾ ಉಪಾಧ್ಯಾಕ್ಷ ಪಿ. ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ನಾಗರತ್ನಮ್ಮ, ಕಾರ್ಯದರ್ಶಿ ಶಶಿಕಲಾ, ತಿಮ್ಮಜ್ಜ, ತುಮಕೂರು ಗ್ವಾಮಾಂತರ ಅಧ್ಯಕ್ಷ ಶಿವಕುಮಾರ್, ತುರುವೇಕೆರೆ ತಾಲೂಕು ಅಧ್ಯಕ್ಷ ರವಿಕುಮಾರ್, ಮಧುಗಿರಿ ತಾಲೂಕು  ಅಧ್ಯಕ್ಷ ಲಕ್ಷ್ಮೀಪತಿ, ಗುಬ್ಬಿ ತಾಲೂಕು ಅಧ್ಯಕ್ಷ ಭೈರಪ್ಪ, ಪಾವಗಡ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ತುಮಕೂರು ನಗರ ಪ್ರಧಾನ ಕಾರ್ಯದರ್ಶಿ ನಾಗಭೂಷಣ್, ಮಾಜಿ ನಗರಾಧ್ಯಕ್ಷ ರುದ್ರೇಶ್, ಮಾಧ್ಯಮ ಪ್ರಮುಖ್ ಎಚ್.ಎನ್. ಚಂದ್ರಶೇಖರ್, ತುಮಕೂರು ಎಪಿಎಂಸಿ ಮಾಜಿ ಅಧ್ಯಕ್ಷ ಓಂ ನಮೋ ನಾರಾಯಣ್, ನಗರ ಸಭಾ ಸದಸ್ಯ ಈ ವೆಂಕಟಪ್ಪ, ಮಾಜಿ ಸದಸ್ಯ ಮುನಿಯಪ್ಪ ಎಚ್. ರಾಮಣ್ಣ, ಬಿಜೆಪಿ ಮುಖಂಡರಾದ ಪ್ರೇಮಲತಾ, ವರಲಕ್ಷ್ಮಿ, ಸಾಗರನಹಳ್ಳಿ ವಿಜಯ್ ಕುಮಾರ್, ನಂಜೇಗೌಡ, ಕರ್ನಾಟಕ ಹಾಲು ಮಂಡಲದ ನಿರ್ದೇಶಕ ಎಚ್.ಕೆ. ರೇಣುಕ ಪ್ರಸಾದ್ ಹಾಗೂ ಜಿಲ್ಲೆ, ತಾಲೂಕು ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.