ತುಮಕೂರು

ಮೃತ್ಯುಪಾಶವಾಗಿರುವ ವಿದ್ಯುತ್ ಪರಿವರ್ತಕ

Published On :

ಕ.ಪ್ರ.ವಾರ್ತೆ ಚಿಕ್ಕನಾಯಕನಹಳ್ಳಿ ಆ. 28
ನಿರ್ಲಕ್ಷ ಧೋರಣೆ ತಾಳಿರುವ  ಬೆಸ್ಕಾಂ ಇಲಾಖೆ  ಅಮಾಯಕರ ಜೀವದ ಜತೆ ಚೆಲ್ಲಾಟವಾಡುತ್ತಿದೆ.      ಮೂಡಿಗೆರೆ-ಹಿಂದುಪುರ ರಾಷ್ಟ್ರೀಯ ಹೆದ್ದಾರಿ 234 ಕ್ಕೆ ಸಂಪರ್ಕ ಕಲ್ಪಿಸುವ ಕಂದಿಕೆರೆ ಹೋಬಳಿಯ ತಿಮ್ಮನಹಳ್ಳಿ-ಮೈಲುಕಬ್ಬೆ ರಸ್ತೆ  ಮೇಲ್ದರ್ಜೆಗೇರಿಸುವ ಸಂದರ್ಭದಲ್ಲಿ ಅಗಲೀಕರಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೊಂಡಿತು.
ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾದ್ದರಿಂದ ವಾಹನ ಸಂಚಾರ ಜಾಸ್ತಿ. ಅಗಲೀಕರಣ ಮಾಡಬೇಕಾಗಿದ್ದರಿಂದ ರಸ್ತೆ ಬದಿಯಲ್ಲಿರುವ ವಿದ್ಯುತ್ ಪರಿವರ್ತಕ ಸ್ಥಳಾಂತರಿಸುವಂತೆ ಲೋಕೋಪಯೋಗಿ ಇಲಾಖೆ 31-3-2012ರಲ್ಲಿ ಪ್ರಸ್ತಾವನೆಯನ್ನು ಬೆಸ್ಕಾಂಗೆ ಸಲ್ಲಿಸಿದೆ. ಸದರಿ ಬೆಸ್ಕಾಂ ವಿದ್ಯುತ್ ಪರಿವರ್ತಕದ ಸ್ಥಳಾಂತರಕ್ಕೆ ತಗಲುವ ವೆಚ್ಚದ ಅಂದಾಜು ಪಟ್ಟಿ ತಯಾರಿಸಿ ಕಳುಹಿಸಲಾಗಿ, ಲೋಕೋಪಯೋಗ ಇಲಾಖೆ 23-5-2012ಕ್ಕೆ ಅಂದಾಜು ದರ ಪಟ್ಟಿಯ 88214 ರು.ಗಳನ್ನು ಚೆಕ್ ಮೂಲಕ ಸಲ್ಲಿಸಿದೆ. ಈ ಬಗ್ಗೆ ಬೆಸ್ಕಾಂ ನೀಡಿರುವ ಸ್ವೀಕೃತಿ ಪತ್ರವು ಲೋಕೋಪಯೋಗಿ ಇಲಾಖೆಯ ಕಡತದಲ್ಲಿದೆ. ಆದರೆ ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರರು ನಮಗೆ ಪರಿವರ್ತಕ ಸ್ಥಳಾಂತರದ ಬಾಬ್ತು ಹಣವನ್ನು ನೀಡಿಲ್ಲ. ಆದ್ದರಿಂದ ಪರಿವರ್ತಕ ಸ್ಥಳಾಂತರ ಕಾರ್ಯ ವಿಳಂಬವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಸತ್ಯವೇ ಬೇರೆ ಇದೆ.
ಸಬೂಬು: ಲೋಕೋಪಯೋಗಿ ಇಲಾಖೆ ಬೆಸ್ಕಾಂಗೆ ಚೆಕ್ ನೀಡಿರುವ ಬಗ್ಗೆ ಮತ್ತು ಪರಿವರ್ತಕ ಸ್ಥಳಾಂತರದ ಬಗ್ಗೆ ವ್ಯವಹರಿಸುವ ಪರವಾದ ಎಲ್ಲಾ ದಾಖಲೆಗಳು ಇದ್ದರು, ಬೆಸ್ಕಾಂ ಸಬೂಬು ಹೇಳುತ್ತಿದೆ. ಆದರೆ ಬೆಸ್ಕಾಂ ಸಿಬ್ಬಂದಿಯೇ ಹೇಳುವಂತೆ ಕಾಮಗಾರಿಯ ಹಣ ನಮ್ಮ ಇಲಾಖೆಗೆ ಜಮೆ ಆಗಿದೆ. ಆದರೆ ಕಡತ ಕಳೆದು ಹೋಗಿದೆ. ಆದ್ದರಿಂದ ಪರಿವರ್ತಕ ಸ್ಥಳಾಂತರ ಕಾಮಗಾರಿ ವಿಳಂಬವಾಗುತ್ತಿದೆ ಎಂಬುದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿ  ಹೇಳಿದ ಸತ್ಯ. ಈಗ ಬೆಸ್ಕಾಂ ಹೊಸರಗಳೆ ತೆಗೆದಿದೆ.
ಲೋಕೋಪಯೋಗಿ ಇಲಾಖೆ ಅಳಲು: ಕಾಮಗಾರಿ ವಿಳಂಬವಾದ್ದರಿಂದ ಯೋಜನಾ ವೆಚ್ಚ ಹೆಚ್ಚಳವಾಗಿದೆ. ಹೆಚ್ಚುವರಿ ಹಣ ತುಂಬಿ ಎಂಬ ಬೇಡಿಕೆ.
ಆದರೆ ಒಂದು ಕಾಮಗಾರಿಗೆ ಒಮ್ಮೆ ಎಸ್ಟಿಮೇಟ್ ಮಾಡಿ ಹಣ ಕಟ್ಟಿಸಿಕೊಂಡ ಮೇಲೆ ಪುನಃ ಎಲ್ಲಿಂದ ಹಣ ಕಟ್ಟಲಿ ಎಂಬುದು ಲೋಕೋಪಯೋಗಿ ಇಲಾಖೆ ಅಳಲು. ಈ ಬಗ್ಗೆ ಅವರು ಕಾರ್ಯಪಾಲಕ ಎಂಜಿನಿಯರ್(ಇಇ) ಅವರಿಗೆ ಪತ್ರವ್ಯವಹಾರ ಮಾಡಲಾಗಿ ಅವರು ಕಾಮಗಾರಿ ಮಾಡಿ ಎಂದು ಲಿಖಿತ ಮೂಲಕ ತಿಳಿಸಿದರೂ ಕಾಮಗಾರಿ ಪೂರೈಸಿಲ್ಲ.
7 ಬಾರಿ ಪತ್ರ ವ್ಯವಹಾರ: ಈಗಾಗಲೇ ಬೆಸ್ಕಾಂಗೆ 7 ಬಾರಿ ಪತ್ರವ್ಯವಹಾರ ಮಾಡಲಾಗಿದೆ. ಆದರೂ ಪರಿವರ್ತಕ ಸ್ಥಳಾಂತರ ಮಾಡಿಲ್ಲ, ಸದರಿ ಕಾಮಗಾರಿ ವಿಷಯವಾಗಿ ಬೆಸ್ಕಾಂನವರನ್ನು ಸಂಪರ್ಕಿಸಿದಾಗ ಅವರು ನಮ್ಮಲ್ಲಿ ಮಾಹಿತಿ ಲಭ್ಯವಿಲ್ಲ, ಹಣ ನಮ್ಮ ಇಲಾಖೆ ಖಾತೆಗೆ ಜಮಾ ಆದ ಬಗ್ಗೆ ದಾಖಲೆ ಲಭ್ಯವಾಗಿಲ್ಲ, ಪರಿಶೀಲಿಸಿ ನಂತರ ಕ್ರಮಕೈಗೊಳ್ಳುತ್ತೇವೆ ಎಂಬ ಉತ್ತರ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರದು.
ಬೆಸ್ಕಾಂ ಇಲಾಖೆ ಈಗಲಾದರೂ ಸಬೂಬು ಹೇಳದೆ ಹಣ ಪಡೆದಿರುವುದರಿಂದ ತ್ವರಿತವಾಗಿ ಪರಿವರ್ತಕ ಸ್ಥಳಾಂತರಿಸಿ ಅಮಾಯಕರ ಜೀವ ಉಳಿಸುವ ಕಾರ್ಯವನ್ನು ಮಾಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.