ತುಮಕೂರು

'ಎಕರೆಗೆ 1.20 ಕೋಟಿ ನೀಡಿದರೆ ರೇಲ್ವೆಗೆ ಭೂಮಿ'

Published On :

ತುಮಕೂರು, ರಾಯದುರ್ಗ, ದಾವಣಗೆರೆ ರೇಲ್ವೆ ಮಾರ್ಗ; ಊರುಕೆರೆ ಬಳಿ ರೈತರ ಸಭೆ
ಕ.ಪ್ರ.ವಾರ್ತೆ ತುಮಕೂರು ಆ.31
ತುಮಕೂರು- ರಾಯದುರ್ಗ ಹಾಗೂ ತುಮಕೂರು- ದಾವಣಗೆರೆ ರೇಲ್ವೆ ಮಾರ್ಗಕ್ಕಾಗಿ ಎಕರೆಗೆ 1.20 ಕೋಟಿ ಪರಿಹಾರ ನೀಡಿದರೆ ಭೂಮಿ ನೀಡುವುದಾಗಿ ತುಮಕೂರು ಭಾಗದ ರೈತರು ಸ್ಪಷ್ಟಪಡಿಸಿದ್ದಾರೆ.
ಭೂಮಿ ಕಳೆದುಕೊಳ್ಳುವ ತುಮಕೂರು ತಾಲೂಕಿನ 90 ಕಿಮೀವರೆಗಿನ ರೈತರು ಈ ಹಿಂದೆ ನಿಗದಿಯಾಗಿದ್ದಂತೆ ಎಕರೆಗೆ 1.20 ಕೋಟಿ ಪರಿಹಾರ ನೀಡಿದರೆ ಭೂಮಿ ಬಿಟ್ಟುಕೊಡಲು ಸಿದ್ಧ ಎಂದು ರೈತರು ತಿಳಿಸಿದ್ದಾರೆ.
ತುಮಕೂರು ಸಮೀಪದ ಬೋವಿಪಾಳ್ಯದ ಶಿವಶಕ್ತಿ ಲೇಔಟ್‌ನಲ್ಲಿ ತುಮಕೂರು ಸಂಸದ ಜಿ.ಎಸ್. ಬಸವರಾಜು ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ರೈತರು ಮೇಲಿನಂತೆ ಅಭಿಪ್ರಾಯ ಹಂಚಿಕೊಂಡರು.
ರೈತರು ಈಗಿನ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಹಾಗೂ ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಆರ್.ಕೆ. ರಾಜು ಅವರು ನಿಗದಿಪಡಿಸಿದ್ದಂತೆ ಎಕರೆಗೆ 1.20 ಕೋಟಿ ಪರಿಹಾರ ನೀಡಿದರೆ ತಕ್ಷಣವೇ ಭೂಮಿ ಬಿಟ್ಟುಕೊಡಲು ಸಿದ್ಧರಿದ್ದೇವೆ. ಸರ್ಕಾರ ಈ ನಿಟ್ಟಿನಲ್ಲಿ ಚೌಕಾಸಿ ಮಾಡುವುದನ್ನು ಬಿಟ್ಟು ನಿಗದಿಪಡಿಸಿದ ಪರಿಹಾರ ನೀಡಬೇಕೆಂದು ಒಕ್ಕೊರಲಿನ ಮನವಿ ಮಾಡಿದರು.
ಭೂಮಿ ನೀಡಲು ಸಿದ್ಧರಾಗಬೇಕು: ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಕರ್ನಾಟಕದ ಹೆಬ್ಬಾಗಿಲಿನಂತಿರುವ ತುಮಕೂರು ಜಿಲ್ಲೆಗೆ ರೇಲ್ವೆ ಯೋಜನೆಗಳು ಅಗತ್ಯವಾಗಿವೆ. ಈ ಹಿನ್ನೆಲೆಯಲ್ಲಿ ನಾವು ಭೂಮಿ ನೀಡಲು ಸಿದ್ಧರಾಗಬೇಕು. ಈ ಹಿಂದಿನ ಜಿಲ್ಲಾಧಿಕಾರಿಗಳು ನಿಗದಿ ಮಾಡಿದಂತೆ ಗುಂಟೆಗೆ 3 ಲಕ್ಷನಂತೆ ಎಕರೆಗೆ 1.20 ಕೋಟಿಗೆ ಭೂಮಿ ನೀಡಲು ಒಪ್ಪಿ, ಸರ್ಕಾರ ಒಪ್ಪಿಗೆ ಪತ್ರ ನೀಡಿದರೆ ಅದನ್ನು ಸದನದ ಮುಂದಿಟ್ಟು ಒಪ್ಪಿಗೆ ಪಡೆಯಲು ಪ್ರಯತ್ನಿಸುವುದಾಗಿ ತಿಳಿಸಿದರು.
ರೈತರ ಪರ: ಭೂಮಿ ವಶಪಡಿಸಿಕೊಳ್ಳುವುದರಲ್ಲಿ ನಾನು ಸರ್ಕಾರದ ಪರ. ಆದರೆ, ಪರಿಹಾರ ಪಡೆಯುವಲ್ಲಿ ನಾನು ರೈತರ ಪರ ಎಂದ ಸಂಸದ ಬಸವರಾಜು, ಹೊಸ ಭೂಸ್ವಾಧೀನ ಕಾಯ್ದೆಯ ಪ್ರಕಾರ ನಗರ ಪ್ರದೇಶದಲ್ಲಿ ಇಂದಿನ ಮಾರುಕಟೆಯ ದರಕ್ಕೆ ಎರಡರಷ್ಟು ಮತ್ತು ಗ್ರಾಮೀಣ ಪ್ರದೇಶದಲ್ಲಿ ಇಂದಿನ ಮಾರುಕಟ್ಟೆಯ ಬೆಲೆಯ ನಾಲ್ಕರಷ್ಟು ಹೆಚ್ಚಿನ ಹಣ ನೀಡಬೇಕಾಗುತ್ತದೆ. ಜತೆಗೆ ಭೂಮಿ ಕಳೆದುಕೊಂಡ ಕುಟುಂಬಕ್ಕೆ ಕೆಲಸ ನೀಡುವಂತೆ ಸಹ ಕಾಯ್ದೆಯಲ್ಲಿ ಹೆಸರಿಸಿದ್ದು, ಯಾರು ಹೆದರುವ ಅಗತ್ಯವಿಲ್ಲ. ರೈತರೆಲ್ಲಾ ಒಗ್ಗಟ್ಟಾಗಿ ನ್ಯಾಯಾಲಯಕ್ಕೆ ಹೋಗದೆ ರಾಜಿ ಸಂಧಾನದ ಮೂಲಕ ಪರಿಹಾರ ಪಡೆದರೆ ಹೆಚ್ಚಿನ ಹಣ ಪಡೆಯಬಹುದು ಎಂದು ತಿಳಿಸಿದರು.
ಒಟ್ಟು 325 ಎಕರೆ ಭೂಮಿ ರೇಲ್ವೆ ಹಳಿ ಹಾಕಲು ಹೋಗಲಿದೆ. ಇದರಲ್ಲಿ 100 ಎಕರೆಯಷ್ಟು ಸರ್ಕಾರಿ ಜಮೀನು ಇದೆ. ಈಗಾಗಲೇ ನೋಟಿಫಿಕೇಷನ್ ಆಗಿದೆ. ಹೊಸ ಕಾಯ್ದೆಯ ಪ್ರಕಾರ ಸರ್ಕಾರಿ ಉದ್ದೇಶಗಳಿಗೆ ಭೂಮಿ ನೀಡುವುದಿಲ್ಲ ಎಂದು ಹೇಳಲು ಬರುವುದಿಲ್ಲ. ಆದ್ದರಿಂದ ಕೋರ್ಟ್, ಕಚೇರಿ ಎಂದು ಅಲೆದು ಹಣ ಹಾಳು ಮಾಡಿಕೊಳ್ಳುವ ಬದಲು ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಹೆಚ್ಚಿನ ಪರಿಹಾರ ಪಡೆಯಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಲು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಹೆಬ್ಬಾಕ ರವಿಶಂಕರ್, ಎಪಿಎಂಸಿ ಮಾಜಿ ಅಧ್ಯಕ್ಷ ಉಮೇಶ್, ರೈತ ಮುಖಂಡ  ಬಿ.ಉಮೇಶ್, ಕೊರಟಗೆರೆ ಎಪಿಎಂಸಿ ಸದಸ್ಯ ಶಿವಕುಮಾರ್, ಮುಖಂಡರಾದ ಟಿ.ಆರ್. ಸದಾಶಿವಯ್ಯ ಡಿ. ಗಂಗರಾಜು ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.