ದಾಖಲೆ ಒದಗಿಸುವಲ್ಲಿ ಪಟ್ಟನಾಯಕನಹಳ್ಳಿ ಮಠ ವಿಫಲ
ಸೋಸಲೆ ಮಠದ ರೀತಿ ಆಡಳಿತಾಧಿಕಾರಿ ನೇಮಿಸಲು ಸರ್ಕಾರಕ್ಕೆ ವಕೀಲ ರವಿ ಆಗ್ರಹ
ಕ.ಪ್ರ.ವಾರ್ತೆ ತುಮಕೂರು ಆ.31
ಮಠದ ಆಸ್ತಿ ತಮ್ಮದೇ ಎಂದು ಪ್ರತಿಪಾದಿಸುತ್ತಿರುವ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ದೇವಾಲಯದ ಭಕ್ತರು ಹಾಗೂ ನಂಜಾವಧೂತ ಶ್ರೀಗಳು ಭೂ ದಾಖಲೆ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಹೀಗಾಗಿ ಕೂಡಲೇ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವಂತೆ ಸಿಡಿಯಜ್ಜನಪಾಳ್ಯದ ವಂಶಸ್ಥರು ಹಾಗೂ ದಾನಿಗಳ ಪರ ವಕೀಲ ರವಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್ ಸತ್ಯಮೂರ್ತಿ ಅವರು ಕೇಳಿದ್ದ ದಾಖಲೆ ನೀಡಲು ಮಠದ ಭಕ್ತರು ವಿಫಲವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಸಲೆ ವ್ಯಾಸರಾಜ ಮಠದ ರೀತಿಯಲ್ಲಿ ಸದರಿ ಮಠಕ್ಕೂ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವಂತೆ ಅರ್ಜಿದಾರರು ಒತ್ತಾಯಿಸಿದ್ದಾರೆ.
ಮಠಕ್ಕೆ ಭೂಮಿ ನೀಡಿದ ಸಿಡಿಯಜ್ಜನಪಾಳ್ಯದ ಕುಟುಂಬಸ್ಥರು ಹಾಗೂ ಇತರೆ ದಾನಿಗಳ ಪರ ವಕೀಲ ರವಿ, ಶವಸಂಸ್ಕಾರ ಜಾಗಕ್ಕೆ ಸಂಬಂಧಿಸಿದಂತೆ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಡಳಿತ ಜು. 25 ರಂದು ಮಠದ ಭಕ್ತರು ಮತ್ತು ಮಠಕ್ಕೆ ಆಸ್ತಿ ದಾನ ಮಾಡಿದ ಕುಟುಂಬಗಳಿಂದ ದಾಖಲೆಗಳನ್ನು ಕಲೆ ಹಾಕಿ ಪರಸ್ಪರ ವಿನಿಮಯ ಮಾಡಿಸಿ ಜು. 30ಕ್ಕೆ ಎರಡು ಕಡೆಯವರು ತಮ್ಮ ಅಭಿಪ್ರಾಯ ಮಂಡನೆಗೆ ಅವಕಾಶ ನೀಡಿದ್ದರು.
ಜು. 30 ರಂದು ನಡೆದ ಸಭೆಯಲ್ಲಿ ಮಠಕ್ಕೆ ಭೂಮಿ ದಾನ ನೀಡಿದವರು ತಮ್ಮ ದಾಖಲೆಗಳ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದರು. ಆದರೆ, ಮಠದ ಭಕ್ತರು ಹಾಲಿ ಮಠದ ಹೆಸರಿನಲ್ಲಿ ಇದೇ ಎನ್ನಲಾದ 250 ಎಕರೆ ಭೂಮಿ ಹೇಗೆ ಮಠಕ್ಕೆ ಬಂತು, ಯಾರಿಂದ ಬಂತು ಎಂಬ ಬಗ್ಗೆ ಸೂಕ್ತ ದಾಖಲೆ ನೀಡಲು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಒಂದು ತಿಂಗಳ ಕಾಲಾವಕಾಶ ನೀಡಿ ಆ. 31 ಕ್ಕೆ ಸೂಕ್ತ ದಾಖಲೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು.
ಮಠದ ಪರ ವಾದ: ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಾಖಲೆ ಸಲ್ಲಿಸಲು, ಮಠದ ಪರ ವಾದ ಮಂಡಿಸಲು ಆಗಮಿಸಿದ್ದ ಮಠದ ಪರ ವಕೀಲರು ಹಾಗೂ ಭಕ್ತರು ಭೂಮಿಗೆ ಸಂಬಂಧಿಸಿದ ದಾಖಲೆ ಸಲ್ಲಿಸಲು ವಿಫಲವಾದರು. ಮಠದ ಭಕ್ತರು, ಭೂಮಿಗೆ ಸಂಬಂಧಿಸಿದಂತೆ ವ್ಯಾಜ್ಯ ನ್ಯಾಯಾಲಯದಲ್ಲಿ ಇರುವಾಗ ಜಿಲ್ಲಾಧಿಕಾರಿಗಳು ಈ ಬಗ್ಗೆ ಪ್ರಶ್ನೆ ಮಾಡುವ ಹಕ್ಕಿಲ್ಲ ಎಂದು ಅರ್ಜಿ ಸಲ್ಲಿಸಿದ್ದಾರೆ.
ಆಡಳಿತಾಧಿಕಾರಿ ನೇಮಕ ಅನಿವಾರ್ಯ: ಎದುರುದಾರರ ಅರ್ಜಿಯ ಹಿನ್ನೆಲೆಯಲ್ಲಿ ಮಠಕ್ಕೆ ಭೂಮಿ ದಾನ ಮಾಡಿದ ಕುಟುಂಬಸ್ಥರು,1995ರಲ್ಲಿ ಶಿರಾ ಸಿವಿಲ್ ನ್ಯಾಯಾಲಯದ ವ್ಯಾಜ್ಯ ಸಂಖ್ಯೆ 98, ಬಾರ್ 88 ರ ಆದೇಶ ಮತ್ತು 2012 ಜನವರಿ 18 ರಂದು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಶಿಫಾರಸ್ಸಿನಂತೆ ಮಠದ ಆಸ್ತಿಯನ್ನು ಕಬಳಿಸಲು ಯತ್ನಿಸಿರುವ ನಂಜಾವಧೂತ ಸ್ವಾಮೀಜಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಹಾಗೂ ಮಠದ ಆಸ್ತಿ ರಕ್ಷಣೆಗೆ ಸೋಸಲೆ ವ್ಯಾಸರಾಜ ಮಠದ ರೀತಿ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ಒತ್ತಾಯಿಸಿದ್ದಾರೆ.
1988 ರಿಂದ ವ್ಯಾಜ್ಯ: ಮಠದ ಆಸ್ತಿಗೆ ಸಂಬಂಧಿಸಿದಂತೆ 1988 ರಿಂದಲೂ ಮಠಕ್ಕೆ ಭೂಮಿ ನೀಡಿದ ಕುಟುಂಬಗಳು ಹಾಗೂ ಮಠಾಧೀಶರ ನಡುವೆ ನಡುವೆ ವ್ಯಾಜ್ಯ ನಡೆಯುತ್ತಿದೆ.
1995 ರ ಜುಲೈ 14 ರಂದು ಗುರು ಕುಮಾರ ಅವಧೂತರು ಮಾಡಿದ್ದ ವಿಲ್‌ಅನ್ನು ರದ್ದುಪಡಿಸಿರುವುದು ಮತ್ತು ಹೈಕೋರ್ಟ್‌ನಲ್ಲಿ ಸದರಿ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಂಡಿರುವುದರಿಂದ ಸದರಿ ಮಠ ಮತ್ತು ಅದರ ಅಧೀನದಲ್ಲಿರುವ ಭೂಮಿಗೂ ನಂಜಾವಧೂತ ಸ್ವಾಮೀಜಿಗಳಿಗೂ ಯಾವುದೇ ಸಂಬಂಧವಿಲ್ಲ. ಕೂಡಲೇ ಅವರನ್ನು ವಜಾಗೊಳಿಸಿ ಅವರ ಬದಲಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಮಠದ ಹೆಸರಿನಲ್ಲಿ ಇರುವ 250 ಎಕರೆ ಆಸ್ತಿ ರಕ್ಷಿಸುವಂತೆ ಜಿಲ್ಲಾಡಳಿತವನ್ನು ಸಿಡಿಯಜ್ಜನ ಪಾಳ್ಯದ ವಂಶಸ್ಥರು, ಮಠಕ್ಕೆ ಭೂಮಿ ದಾನ ನೀಡಿದವರು ಹಾಗೂ ಅವರ ಪರ ವಕೀಲರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

