ವಚನ ಸಾಹಿತ್ಯದಲ್ಲಿ ಅಕ್ಕನದ್ದು ವಿಶಿಷ್ಟ ಹೆಸರು
ತುಮಕೂರು: ತನ್ನ ಆಧ್ಯಾತ್ಮಿಕ ಅನುಭವಗಳನ್ನು ವಿಶಿಷ್ಟವಾದ ನುಡಿಗಟ್ಟಿನಲ್ಲಿ ಹಿಡಿದುಕೊಡುವಲ್ಲಿ ವಚನಸಾಹಿತ್ಯ ಪರಂಪರೆಯಲ್ಲೇ ಅಕ್ಕನ ಸ್ಥಾನ ವಿಶಿಷ್ಟವಾದುದು ಎಂದು ಜಿಲ್ಲಾ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಎಂ.ಸಿ.ಲಲಿತ ಅಭಿಪ್ರಾಯಪಟ್ಟರು.
ಅವರು ತಾಲೂಕು ಶರಣ ಸಾಹಿತ್ಯ ಪರಿಷತ್ತು ಕೋರಾದ ಮಹಾಲಿಂಗೇಶ್ವರ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಮಾದೇನಹಳ್ಳಿ, ಮಲ್ಲಿಕಾರ್ಜುನಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಚನಕಾರ್ತಿಯರನ್ನು ಕುರಿತು ಉಪನ್ಯಾಸ ನೀಡಿದರು.
ಅಕ್ಕಮಹಾದೇವಿ ಕನ್ನಡದ ಮೊದಲ ಮತ್ತು ಶ್ರೇಷ್ಠ ಕವಯಿತ್ರಿ. ಈ ನಾಡಿನ ಮೊದಲ ಅನುಭಾವಿ ಮಹಿಳೆ ಕೌಟುಂಬಿಕ ಚೌಕಟ್ಟಿನ ಆಚೆಗೆ ಭಕ್ತಿಯ ಮೂಲಕವಾಗಿ ಮೋಕ್ಷ ಸಾಧನೆಯತ್ತ ಮಹಿಳೆಯ ಬದುಕಿನ ದಿಗಂತವನ್ನು ತೋರಿಸಿಕೊಟ್ಟವಳು ಅಕ್ಕ ಎಂದರು.
ಅಕ್ಕನ ವಚನಗಳು ಕೇವಲ ಭಕ್ತಿಯ ಅವೇಶದಲ್ಲಿ ಎಚ್ಚರವಿಲ್ಲದೆ ಬರೆದವುಗಳಲ್ಲ. ಅವಳು ಲೌಕಿಕದ ಗಂಡನನ್ನು ನಿರಾಕರಿಸಿ ಅಲೌಕಿಕದ ಗಂಡನಿಗಾಗಿ ಹಂಬಲಿಸುತ್ತಾಳೆಂದರೆ ಅದು ಲೌಕಿಕದ ಕುರಿತ ಅವಳ ಪ್ರತಿಭಟನೆಯೇ ಆಗಿದೆ. ಅಕ್ಕನದು ಸ್ವಯಂ ಘೋಷಿತ ಪ್ರತಿಭಟನೆಯಲ್ಲ. ಅದೊಂದು ಧಾರ್ಮಿಕ ಚೌಕಟ್ಟಿನಲ್ಲಿ ವ್ಯಕ್ತವಾಗುವ ಅಂತರ್ಮುಖಿ ಪ್ರತಿಭಟನೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಡಿ.ಎನ್. ಯೋಗೀಶ್ ಅವರು ಅಕ್ಕನ ಹೋರಾಟ ಅವಳು ಇದ್ದ ಕಾಲದ ಭ್ರಷ್ಟ ವ್ಯವಸ್ಥೆಯ ವಿರುದ್ಧದ ಹೋರಾಟ, ಅಕ್ಕನ ವಚನಗಳ ಮುಖ್ಯ ಆಶಯ ಆದರ್ಶ ವ್ಯವಸ್ಥೆಯ ಕಲ್ಪನೆ ಎಂದ ಅವರು ಅಕ್ಕನ ವಚನಗಳ ಸಂವೇದನೆಗಳನ್ನು ಭಕ್ತಿಯ ಆವೇಶದ ಪರಿಧಿಯ ಆಚೆಗೆ ನೋಡುವ ಪ್ರಯತ್ನವನ್ನು ವಿದ್ವಾಂಸರು ಮಾಡಬೇಕಾಗಿದೆ ಎಂದರು.
ಮಹಾದೇವಿಯಕ್ಕನ ಜೀವನ ಚರಿತ್ರೆ ಹೆಣ್ಣಿನ ಗೌರವ ಸಾಧನೆಯ, ಸ್ವಾತಂತ್ರ್ಯ ಸಾಧನೆಯ ಹೆಣ್ಣಿನ ಪರಮಾರ್ಥ ಸಾಧನೆಯ ಒಂದು ಮಹಾ ಪ್ರಕರಣ. ತನ್ನ ವೈಚಾರಿಕತೆ ಮತ್ತು ದಿಟ್ಟತನದ ನಡವಳಿಕೆಯ ಮೂಲಕ ಸಾಧನೆ ಗೈದ ಅಕ್ಕ ಹನ್ನೆರಡನೇ ಶತಮಾನದ ಶರಣ ಚಳುವಳಿಯ ನಡುವೆ ಒಂದು ವಿಶಿಷ್ಟವೂ ಭಿನ್ನವೂ ಆದ ನಿಲುವಿನಿಂದ ಹೆಣ್ತನದ ಘನತೆ ಗೌರವದ ಪ್ರತೀಕವಾಗಿದ್ದಾಳೆ ಎಂದರು. ಅಧ್ಯಕ್ಷತೆ ವಹಿಸಿದ್ದ ಚಿಂತಕಿ ಇಂದಿರಾ ಪ್ರಿಯದರ್ಶಿನಿಯವರು ವಚನಕಾರ್ತಿಯರ ಹೊಸ ಬದುಕಿನ ಪರಿಕಲ್ಪನೆ ಆಶಯಗಳು ಕೆಳ ಸಂಸ್ಕೃತಿಯ ಅಂಶಗಳನ್ನು ವೈಧಿಕ ಧರ್ಮದ ವಿರೋಧವನ್ನು ಒಳಗೊಂಡ ಸಂಕೀರ್ಣ ನೆಲೆಯೊಂದನ್ನು ಸೂಚಿಸುತ್ತವೆ ಎಂದರು.
ಬಸವಕೇಂದ್ರ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮುದ್ದೇನಹಳ್ಳಿ ನಂಜಯ್ಯ, ಕೋರಾ ಸಿದ್ದಲಿಂಗಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಚಿಕ್ಕಬೆಳ್ಳಾವಿ ಶಿವಕುಮಾರ ಪ್ರೊ. ಬಿರಾದರ್ ಮೊದಲಾದವರು ಹಾಜರಿದ್ದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಲೆರಾಂಪುರ ರುದ್ರಮೂರ್ತಿ ನಿರೂಪಿಸಿದರು. ಚೈತ್ರ ಸ್ವಾಗತಿಸಿದರು. ಕೆ.ಜಿ.ಚಂದನ್ ವಂದಿಸಿದರು. ನೇತ್ರ, ಆಯಿಷಾಬಾನು ಮತ್ತು ಲಾವಣ್ಯ ಪ್ರಾರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

