ತುಮಕೂರು

ಕಾರಣ ನೀಡದೆ ಕಾಯಂ ಕಾರ್ಮಿಕರ ವಜಾ ಆರೋಪ: ಮುಷ್ಕರ ಆರಂಭ

Published On :

ತುಮಕೂರು: ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ತಮುರ ಎಲ್ ಕಾಂಪೋನಿಕ್ಸ್ ಟೆಕ್ನಾಲಜೀಸ್ ಕಂಪನಿ ಯಾವುದೇ ಕಾರಣ ನೀಡದೆ 12 ಕಾಯಂ ಕಾರ್ಮಿಕರನ್ನು ಅಕ್ರಮವಾಗಿ ಕೆಲಸದಿಂದ ತೆಗೆದು ಹಾಕಿದೆ ಎಂದು ಆರೋಪಿಸಿ ಆಡಳಿತ ವರ್ಗದವರ ವಿರುದ್ಧ ಕಾರ್ಮಿಕರು ಮುಷ್ಕರ ಆರಂಭಿಸಿದ್ದಾರೆ.ಕಳೆದ 18 ದಿನಗಳಿಂದ ಕಾರ್ಮಿಕರನ್ನು ಅಕ್ರಮವಾಗಿ ಕೆಲಸದಿಂದ ತೆಗದುಹಾಕಿರುವ ಆಡಳಿತ ಮಂಡಳಿಯ ಕ್ರಮವನ್ನು ವಿರೊಧಿಸಿ ಸುಮಾರು 97 ಕಾರ್ಮಿಕರು ಸಹ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದು, ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಪ್ರತಿಭಟನಾನಿರತ ಕಾರ್ಮಿಕರು ಕಾರ್ಮಿಕರಿಗೆ ಕಿರುಕುಳ ನೀಡುವ ಉದ್ದೇಶದಿಂದ ಬೇಕಾಬಿಟ್ಟಿ ವೇತನ ನೀಡುವುದನ್ನು ನಿಲ್ಲಿಸಬೇಕು. ಅಕ್ರಮ ವರ್ಗಾವಣೆಯನ್ನು ರದ್ದುಗೊಳಿಸಬೇಕು. ಅಕ್ರಮವಾಗಿ ಕೆಲಸದಿಂದ ವಜಾಗೊಳಿಸಿರುವ 7 ಜನರನ್ನು ಪುನಃ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಮೂರು ತಿಂಗಳಲ್ಲಿ 70 ದಿನಗಳ ಕಾಲ ಕಾರ್ಮಿಕರಿಗೆ ಕಾನೂನುಬಾಹಿರವಾಗಿ ಲೇ-ಆಫ್ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
2012 ರ ಅಕ್ಟೋಬರ್ 5 ರಂದು ನಡೆದ ಜಿಲ್ಲಾಧಿಕಾರಿಗಳು, ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ತ್ರಿಪಕ್ಷಿಯ ಸಭೆಯ ನಿರ್ಣಯದಂತೆ ಮೂರು ಜನರನ್ನ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬ ಆದೇಶವನ್ನು ಪಾಲಿಸದೆ ಇರುವ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ಕಾರ್ಮಿಕರು ತಮಗಾಗಿರುವ ಅನ್ಯಾಯವನ್ನು ಆಡಳಿತಮಂಡಳಿಯ ಮುಂದೆ ಹೇಳಿಕೊಳ್ಳಲು ಹೋದಂತಹ ಸಂದರ್ಭದಲ್ಲಿ ಕಾರ್ಮಿಕರ ಮೇಲೆ ಕ್ರಿಮಿನಲ್ ಕೇಸುಗಳನ್ನು ಹಾಕಿ ಬೆದರಿಸುವ ತಂತ್ರವನ್ನು ಆಡಳಿತ ಮಂಡಳಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಉಪವಾಸ ಸತ್ಯಾಗ್ರಹ: ಕಳೆದ 18 ದಿನಗಳಿಂದ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಿಕೊಡದಿದ್ದಲ್ಲಿ ಕಾರ್ಮಿಕರು ಡಿ.27 ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕಾರ್ಮಿಕರು ನಿರ್ಧರಿಸಿದ್ದಾರೆ.
ಎಐಟಿಯುಸಿ ನಗರ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಆಡಳಿತ ಮಂಡಳಿ ಕಾರ್ಮಿಕರ ನೋವಿಗೆ ಸ್ಪಂದಿಸಿ ಅವರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಕಾರ್ಮಿಕರು ಕಂಪನಿಯ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಾರ್ಮಿಕ ಅಧಿಕಾರಿ ಚಲಪತಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರಿಗೆ ಮುತ್ತಿಗೆ ಹಾಕಿದ ಧರಣಿ ನಿರತ ಕಾರ್ಮಿಕರು ಹೊರ ರಾಜ್ಯದಿಂದ ಕರೆತಂದಿರುವ ಕಾರ್ಮಿಕರನ್ನು ವಾಪಸು ಕಳುಹಿಸುವಂತೆ ಒತ್ತಡ ಹಾಕಿದರು. ಈ ವೇಳೆ ಪೊಲೀಸರಿಗೂ ಕಾರ್ಮಿಕರು ಪರಿಸ್ಥಿತಿ
ವಿವರಿಸಿ ಅನ್ಯಾಯವನ್ನು ಮನವರಿಕೆ ಮಾಡಿಕೊಟ್ಟರು.ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ. ಚಿನ್ನಪ್ಪ  ಮತ್ತಿತರರು ಕಾರ್ಮಿಕರಿಗೆ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.