ಔಷಧ ರೂಪದಲ್ಲಿ ಆಹಾರ ಸೇವಿಸಿ ರೋಗ ನಿವಾರಿಸಿ
ತುಮಕೂರು: ಮಾನವ ಆಹಾರವನ್ನು ಔಷಧ ರೂಪದಲ್ಲಿ ತೆಗೆದುಕೊಂಡಾಗ ಯಾವುದೇ ರೋಗ ಹತ್ತಿರ ಸುಳಿಯುವುದಿಲ್ಲ ಎಂದು ಧಾರವಾಡದ ಬಸವ ಮಹಾಮನೆಯ ಮಠದ ಅಧ್ಯಕ್ಷರಾದ ಬಸವಾನಂದಸ್ವಾಮೀಜಿ ಹೇಳಿದರು.
ನಗರದ ಶ್ರೀ ಬಸವೇಶ್ವರ ಹೈಸ್ಕೂಲ್ ಮೈದಾನದಲ್ಲಿ 15 ದಿನಗಳ ಕಾಲ ನಡೆದ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಿಸರ್ಗದ ಪಂಚಭೂತಗಳು ಮನುಷ್ಯನ ದೇಹದಲ್ಲಿ ಪಂಚೇಂದ್ರಿಯಗಳ ಮೇಲೆ ಬೀರುವ ಪರಿಣಾಮ, ದುಷ್ಪರಿಣಾಮಗಳು ಮತ್ತು ಸೂಕ್ಷ್ಮ ಸಂಹವನಗಳ ಬಗ್ಗೆ 15 ದಿನಗಳ ಪ್ರವಚನ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾಗರಿಕರಿಗೆ ತಿಳಿಸಿದರು.
ನೆಮ್ಮದಿ: ಎಲ್ಲಾ ವಯೋವುನಾದ ಜನರು ಉಪವಾಸದಿಂದ ಹಲವು ರೋಗಗಳು ನಿವಾರಣೆಯಾಗಿ ಉತ್ತಮ ಜೀವನವನ್ನು ನಡೆಸಬಹುದು ಎಂಬುದನ್ನು ಉದಾಹರಣೆ ಸಮೇತ ತಿಳಿಸಿದರು.
ಸಾತ್ವಿಕ ಆಹಾರಗಳಾದ ತರಕಾರಿ, ಹಣ್ಣು ಹಂಪಲುಗಳ ಸೇವನೆಯಿಂದ ದೇಹವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬಹುದು. ಇದರಿಂದ ಬಾಹ್ಯ ಮತ್ತು ಆಂತರಿಕ ಸೌಂದರ್ಯ ಹೆಚ್ಚುತ್ತದೆ. ಲೋಭ, ಮೋಹ ಮತ್ತು ಮತ್ಸರಗಳು ಮನಸ್ಸಿನಿಂದ ಕ್ಷೀಣಿಸುತ್ತಾ ದೇಹವು ದೇವಾಲಯದ ರೂಪವನ್ನು ಪಡೆಯುತ್ತದೆ. ಇಂದಿನ ಆಧುನಿಕಯುಗದಲ್ಲಿ ಶಾಂತಿ ಮತ್ತು ನೆಮ್ಮದಿಯಿಂದ ಬಾಳಲು ಸಹಕಾರಿಯಾಗುತ್ತದೆ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಮಾನವ ಜಡತ್ವ ಮೈಗೂಡಿ ಸೋಮಾರಿಯಾಗುತ್ತಿದ್ದಾನೆ. ಇದರಿಂದ ಮಾನವನ ಪ್ರಗತಿಗೆ ಜಡತ್ವ ಒಳ್ಳೆಯದಲ್ಲ. ಪರಿಪೂರ್ಣ ಬದುಕನ್ನು ರೂಪಿಸಿಕೊಳ್ಳಲು ಸಿದ್ಧಗಂಗಾ ಮಠದ ಶಿವಕುಮಾರ ಮಹಾಸ್ವಾಮೀಜಿ ಅವರ ಅಹಾರ ಪದ್ಧತಿ, ಕರ್ತವ್ಯ ಶೀಲತೆಯನ್ನು ನೋಡಿ ನಾವೆಲ್ಲರೂ ಕಲಿತುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಶ್ಲಾಘನೆ: ವಿಶ್ವ ನಿಸರ್ಗ ವೇದಿಕೆ ಅಧ್ಯಕ್ಷರಾದ ಪ್ರೊ. ಕೆ. ಸಿದ್ದಪ್ಪ ಅವರು ತುಮಕೂರು ನಗರದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿ, ಜನರಿಗೆ ಆರೋಗ್ಯದ ಲಾಭ ಪಡೆಯಲು ಅನುವು ಮಾಡಿಕೊಟ್ಟಿರುವುದಕ್ಕೆ ಸ್ವಾಮೀಜಿಯನ್ನು ಶ್ಲಾಘಿಸಿದರು.
ಸಮಾರೋಪ ಸಮಾರಂಭ ಉದ್ಘಾಟಿಸಿದ ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ಸಿದ್ಧಲಿಂಗ ಸ್ವಾಮಿಜಿ ಅವರು ಮಾತನಾಡಿ ಉತ್ತಮ ಆರೋಗ್ಯಕ್ಕಾಗಿ ಉಪವಾಸ ಅಗತ್ಯವಿದೆ. ಇಂತಹ ಕಾರ್ಯಕ್ರಮಗಳು ಸದಾ ನಡೆಯುವುದರಿಂದ ಮಾನವರು ಮಾನಸಿಕವಾಗಿ ಪರಿವರ್ತನೆಗೊಳ್ಳುತ್ತಾರೆ ಎಂದು ಅವರು ಹೇಳಿದರು.
ಇಂದಿನ ಉತ್ಕೃಷ್ಟ ಸಮಾಜ ನಿರ್ಮಾಣಕ್ಕಾಗಿ ಆರೋಗ್ಯ ವಿಷಯದ ಪ್ರವಚನದ ಅಗತ್ಯವಿದೆ. ಇದರಿಂದ ಮೂರನೇ ಬಾರಿ ತುಮಕೂರು ನಗರಕ್ಕೆ ಬಸವಾನಂದಸ್ವಾಮಿಜಿ ಅವರು ಆಗಮಿಸಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.
ಸಂಘಟಕರು ಮತ್ತು ವಿಶ್ವ ನಿಸರ್ಗ ವೇದಿಕೆಯ ಅಧ್ಯಕ್ಷ ಪ್ರೊ. ಕೆ. ಸಿದ್ದಪ್ಪ ಅವರು ಮಾತನಾಡಿ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಮಾರ್ಗದರ್ಶನದಿಂದ ಒಳ್ಳೆಯ ಕುಡಿಯುವ ನೀರು, ಸಸಿ ನೆಡುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದೇವೆ, ಶೀಘ್ರದಲ್ಲಿ ಔಷಧ ವನಗಳ ನಿರ್ಮಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಪ್ರೊ. ಸುರೇಶ್ ನಿರೂಪಿಸಿದರು. ತಿಪ್ಪೇಸ್ವಾಮಿ ಸ್ವಾಗತಿಸಿದರು, ಸದಾನಂದ ಅವರು ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

