ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇತರರಿಗೆ ಮಾದರಿ
ಕುಣಿಗಲ್: ಯಾವುದೇ ರಾಜಕೀಯ ಸೋಂಕಿಲ್ಲದೆ, ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದ ಮಹಿಳೆಯರ, ರೈತರ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸುಧಾರಣೆಗೆ ತನ್ನದೆ ಆದ ಕೊಡುಗೆ ನೀಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇತರೆ ಸ್ವಯಂ ಸೇವಾ ಸಂಸ್ಥೆಗಳಿಗೆ ಮಾರ್ಗದರ್ಶಿಯಾಗಿದೆ ಎಂದು ಶಾಸಕ
ಬಿ.ಬಿ. ರಾಮಸ್ವಾಮಿಗೌಡ ತಿಳಿಸಿದರು.
ತಾಲೂಕಿನ ಗವಿಮಠ ಗ್ರಾಮದ ಫಿರಂಗಿಸ್ವಾಮಿ ಪ್ರೌಢಶಾಲಾವರಣದಲ್ಲಿ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ವ್ಯವಸ್ಥಾಪನ ಸಮಿತಿ ಹೇರೂರು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹೇರೂರು ವಲಯ ಮತ್ತು ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕೃಷಿ ಮಾಹಿತಿ ಆಂದೋಲನಾ ಉದ್ಘಾಟಿಸಿ ಮಾತನಾಡಿ, ಅತ್ಯಲ್ಪ ಪ್ರದೇಶದಲ್ಲಿ ಅಧಿಕ ಬೆಳೆ ಬೆಳೆಯುವ ತವಕದಿಂದ, ಇಂದು ಕೃಷಿಯಲ್ಲಿ ಹೆಚ್ಚಾಗಿ ರಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ, ಇಂದು ನಾವು ಸೇವಿಸುವ ಆಹಾರವು ವಿಷಯುಕ್ತವಾಗುವಂತಾಗಿರುವುದು ಕಳವಳಕಾರಿಯಾಗಿದೆ. ಇಂತಹ ಸ್ಥಿತಿಯಲ್ಲಿ ಗ್ರಾಮಾಂತರ ಪ್ರದೇಶದ ಜನತೆ, ಮಹಿಳೆಯರೂ ಸೇರಿದಂತೆ ಎಲ್ಲಾ ವರ್ಗದ ಜನತೆಯಲ್ಲೂ ಸಾವಯವ ಕೃಷಿ ಬಳಕೆ ನಿಟ್ಟಿನಲ್ಲಿ ಅರಿವು ಮೂಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಉತ್ಸವ ಹಮ್ಮಿಕೊಂಡಿದೆ.
ಸರ್ಕಾರವು ಹಲವು ಯೋಜನೆಗಳ ಮೂಲಕ ಅರಿವು ಮೂಡಿಸಲು ಮುಂದಾದರೂ ಅವು ಪರಿಣಾಮಕಾರಿಯಾಗಿ ಜನರಿಗೆ ತಲುಪಲು ಸಾಧ್ಯವಿಲ್ಲ. ಆದರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು,
ಅತ್ಯಲ್ಪ ಅವಧಿಯಲ್ಲಿ ತಾಲೂಕಿನಲ್ಲಿ ಮೂರು ಸಾವಿರ ಸ್ವಸಹಾಯ ಸಂಘಗಳ ಮೂಲಕ ಮೂವತ್ತು ಸಾವಿರಕ್ಕೂ ಹೆಚ್ಚು ಸ್ವಸಹಾಯ ಸಂಘದ ಸದಸ್ಯರ ಮೂಲಕ, ಗ್ರಾಮಾಂತರ ಪ್ರದೇಶದಲ್ಲಿ ಮೂಲೆಗುಂಪಾಗಿದ್ದ ಮಹಿಳೆಯರಲ್ಲಿ ಪ್ರಸಕ್ತ ವಿದ್ಯಮಾನಕ್ಕೆ ತಕ್ಕಂತೆ, ಶೈಕ್ಷಣಿಕ, ಸಾಮಾಜಿಕ ಅರಿವು ಮೂಡಿಸಿ, ಈ ಸ್ತ್ರೀಶಕ್ತಿಯನ್ನು ಪರಿಣಾಮಕಾರಿಯಾಗಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸದ್ದಿಲ್ಲದೆ ಕಾರ್ಯಗತವಾಗಿದೆ. ಕೇವಲ ಕೆಲವೆ ಚಟುವಟಿಕೆಗೆ ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳು ಸೀಮಿತವಾಗದೆ ಗ್ರಾಮಾಂತರ ಪ್ರದೇಶದಲ್ಲಿನ ಅಕ್ರಮ ಮದ್ಯಪಾನ ನಿಯಂತ್ರಣೆ ನಿಟ್ಟಿನಲ್ಲಿ ಹೋರಾಟ ನಡೆಸಬೇಕೆಂದರು.
ಕೃಷಿ ಚಟುವಟಿಕೆಯಿಂದ ಸಾಧ್ಯ: ಬಿಜೆಪಿ ಮುಖಂಡ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಡಿ.ಕೃಷ್ಣಕುಮಾರ್, ಗ್ರಾಮಾಂತರ ಪ್ರದೇಶದ ಜನತೆಯ ಆರ್ಥಿಕ ಸ್ವಾವಲಂಬನೆ ಕೇವಲ ಕೃಷಿ ಚಟುವಟಿಕೆಯಿಂದ ಮಾತ್ರ ಸಾಧ್ಯವಾಗದೆ ಕೃಷಿ ಚಟುವಟಿಕೆಗೆ ಪೂರಕವಾಗಿ ಹೈನುಗಾರಿಕೆಯಂತ ಉಪ ಕಸುಬನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಾಗ, ಗ್ರಾಮಾಂತರ ಪ್ರದೇಶದ ಜನತೆ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗಲಿದೆ. ಈ ದಿಸೆಯಲ್ಲಿ ತಾಲೂಕಿನಾದ್ಯಂತ 130 ಕೇಂದ್ರಗಳಲ್ಲಿ ದಿನವೊಂದಕ್ಕೆ 70ಸಾವಿರ ಲೀಟರ್ ಸಂಗ್ರಹವಾಗಿ ಮಾಸಿಕ ಕೋಟಿ ರು. ಬಟವಾಡೆಯಾಗುತ್ತಿದೆ ಎಂದರು.
ಸ್ಪಂದನೆ: ತಾಲೂಕಿನ ಹೈನುಗಾರಿಕೆ ವಲಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯೂ ಪೂರಕವಾಗಿ ಸ್ಪಂದಿಸಿ ಸಹಕರಿಸುತ್ತಿದೆ ಎಂದರು.
ಹೇರೂರು ಗ್ರಾಪಂ ಅಧ್ಯಕ್ಷೆ ಸೌಭಾಗ್ಯಮ್ಮ ಅಧ್ಯಕ್ಷತೆ ವಹಿಸಿದ್ದು, ಜಿಪಂ ಸದಸ್ಯ ದೊಡ್ಡಯ್ಯ, ಎಪಿಎಂಸಿ ಉಪಾಧ್ಯಕ್ಷ ಸುರೇಶ್, ಎಂಪಿಸಿಎಸ್ ಹೇರೂರು ಅಧ್ಯಕ್ಷ ರೇವಣ್ಣಮೂರ್ತಿ, ಯೋಜನೆಯ ಪ್ರಾದೇಶಿಕ ನಿರ್ದೇಶಕ ಎಂ.ಶ್ರೀಹರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ, ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ, ತಹಸೀಲ್ದಾರ್ ಜಗದೀಶ್, ಕೃಷಿಕ ಸಮಾಜ ಜಿಲ್ಲಾಪ್ರತಿನಿಧಿ ಅನಸೂಯಮ್ಮ ಕಳಸೇಗೌಡ, ಯೋಜನೆಯ ಕೃಷಿ ನಿರ್ದೇಶಕ ಮನೋಜ್ ಮೇನೇಜಸ್, ತಾಲೂಕು ಯೋಜನಾಧಿಕಾರಿ ಶಶಿರೇಖಾ, ಪದಾಧಿಕಾರಿಗಳಾದ ಗಂಗಮ್ಮ, ಮಹಂತೇಶ, ತೋಟಗಾರಿಕೆ ಇಲಾಖೆ ಎಡಿ ಡಿ.ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೃಷಿ ಉತ್ಸವದ ಅಂಗವಾಗಿ ರೈತರು ಬಳಸುವ ಕೃಷಿ ಉಪಕರಣಗಳ, ವಿವಿಧ ತಳಿ ಬೀಜಗಳ, ಸಾವಯವ ಉತ್ಪನ್ನಗಳ ಪ್ರದರ್ಶನ, ಉತ್ತಮ ರಾಸುಗಳ, ಶ್ವಾನಗಳ ಪ್ರದರ್ಶನ ಎರ್ಪಡಿಸಿದ್ದು
ಹೇರೂರು ಸುತ್ತಮುತ್ತಲ ಅಸಂಖ್ಯಾತ ರೈತಬಾಂಧವರು, ಯೋಜನೆಯ ಸ್ವಸಹಾಯ ಸಂಘದ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

