ಕಾವೇರಿ ನೀರು ಸಂರಕ್ಷಣೆ: ಎಲ್ಲರ ಅಸಡ್ಡೆ
ಕುಣಿಗಲ್: ಕಾವೇರಿನದಿ ನೀರು ಸಂರಕ್ಷಣೆ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ಸೇರಿದಂತೆ ರಾಜಕೀಯ ಪಕ್ಷಗಳು ಬದ್ಧತೆಯಿಂದ ವರ್ತಿಸದೆ ನಿರ್ಲಕ್ಷ್ಯತನ ತೋರಿದ್ದರೆ, ರಾಜ್ಯವನ್ನು ಕೇಂದ್ರದಲ್ಲಿ ಪ್ರತಿನಿಧಿಸುತ್ತಿರುವ ಸಂಸದರ ತಮ್ಮ ಅಧಿಕಾರಕ್ಕೆ ಅಂಟಿ ಕೂತಿದ್ದು ನಿಜಕ್ಕೂ ಖಂಡನೀಯ ಎಂದು ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ತಿಳಿಸಿದರು.
ತಾಲೂಕಿನ ಯಡೆಯೂರಿನಲ್ಲಿ ಕನ್ನಡಸೇನೆ ಯಡೆಯೂರು ಘಟಕ ಹಮ್ಮಿಕೊಂಡಿದ್ದ ಕನ್ನಡಹಬ್ಬ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ರಾಜ್ಯವು ಭೀಕರ ಬರಗಾಲದಿಂದ ತತ್ತರಿಸುತ್ತಿರುವ ಕಠಿಣ ಪರಿಸ್ಥಿಯಲ್ಲಿ, ತಮಿಳುನಾಡಿನ ಬೆಳೆ ಸಂರಕ್ಷಣೆಗೆ ರಾಜ್ಯದ ಜನತೆಯ ಕುಡಿಯುವ ಉದ್ದೇಶಕ್ಕೆ ಸಂಗ್ರಹಿಸಲಾಗಿರುವ ಕಾವೇರಿ ನೀರನ್ನು, ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಒಂದೆಡೆ ಆದೇಶಿಸಿದ್ದರೆ, ಮತ್ತೊಂದೆಡೆ ಕಾವೇರಿ ಐತೀರ್ಪಿನ್ನು ಕೇಂದ್ರ ಸರ್ಕಾರ ಗೆಜೆಟ್ನಲ್ಲಿ ಪ್ರಕಟಿಸಲು ತಮಿಳುನಾಡು ಸರ್ಕಾರ ಒತ್ತಡ ಹೇರುತ್ತಾ ಕನ್ನಡಿಗರ ಪಾಲಿಗೆ ಮರಣಶಾಸನ ಸಿದ್ಧತೆ ನಡೆದಿದೆ.
ಸಮರ್ಥವಾದ ಮಂಡನೆ ಅಗತ್ಯ: ರಾಜ್ಯ ಸರ್ಕಾರ, ರಾಜ್ಯದ ನೆಲ, ಜಲದ ಗರಿಮೆಯ ಮಹತ್ವ ತಿಳಿಯದ ಉತ್ತರ ಭಾರತದ ವಕೀಲರಿಂದ ಸಮರ್ಥವಾದ ಮಂಡಿಸದೆ, ರಾಜ್ಯದ ಪಾಲಿಗೆ ಅನ್ಯಾಯವಾಗುವಂತೆ ಮಾಡಿದ್ದರೆ, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಂಸದರು, ಕೇಂದ್ರದ ಸಚಿವರು ರಾಜ್ಯದ ಹಿತ ಕಾಪಾಡುವುದನ್ನು ಬಿಟ್ಟು,
ತಮ್ಮ ಕುರ್ಚಿಗೆ ಅಂಟಿಕೊಂಡಿರುವುದು ನಿಜಕ್ಕೂ ಕನ್ನಡಿಗರ ದುರ್ದೈವ ಎಂದರು. ನಾಡು, ನುಡಿ, ನೆಲ, ಜಲದ ವಿಷಯ ಬಂದಾಗ ಕನ್ನಡಪರ ಸಂಘಟನೆಗಳ ಸತತ ಹೋರಾಟದ ಪರಿಣಾಮ ಇಂದು ಒಂದು ಹಂತಕ್ಕೆ ನ್ಯಾಯದೊರಕುವಂತಾಗಿದೆ. ಇನ್ನಾದರೂ ಎಲ್ಲಾ ಜನಪ್ರತಿನಿಧಿಗಳು, ನಾಡು, ನುಡಿ, ನೆಲ, ಜಲದ ಸಂರಕ್ಷಣೆ ನಿಟ್ಟಿನಲ್ಲಿ ಬದ್ಧತೆಯಿಂದ ಶ್ರಮಿಸಬೇಕಿದೆ. ಜನತೆಯೂ ಸಹ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಹಿತಕಾಯುವಂತಹ ನಾಯಕರನ್ನು ಆಯ್ಕೆ ಮಾಡಬೇಕೆಂದರು.
ಪ್ರಜ್ಞಾವಂತರಾಗಬೇಕು: ಮಾಜಿ ಶಾಸಕ ಎಸ್.ಪಿ. ಮುದ್ದಹನುಮೇಗೌಡ, ವಿಧಾನಸಭಾ ಚುನಾವಣೆಗಳು ಹತ್ತಿರವಿದ್ದು, ಮತದಾರರು ಪ್ರಜ್ಞಾವಂತರಾಗಬೇಕಿದೆ. ಮೌಲ್ಯಯುತ ರಾಜಕಾರಣಿಯ ಆಯ್ಕೆ ಮತದಾರರ ಕೈಯಲ್ಲಿದ್ದು, ಮತಚಲಾವಣೆ ಮಾಡುವ ಸಮಯದಲ್ಲಿ ಯಾವುದೇ ಆಮಿಷಗಳಿಗೆ ಬಲಿಯಾಗದೆ, ಜನತೆಯ ಮಧ್ಯವಿದ್ದು, ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವಂತ ಜನಪ್ರತಿನಿಧಿಯ ಆಯ್ಕೆಗೆ ಮುಂದಾಗಬೇಕೆಂದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ವಿಧಾನಸಭಾ ಚುನಾವಣೆಗಳು ಮುಂದಿರುವ ಸಂದರ್ಭದಲ್ಲಿ ಮತದಾರರು ಜಾಗೃತರಾಗುವ ಅವಶ್ಯಕತೆ ಇದೆ. ಕೇವಲ ಚುನಾವಣೆ ಸಂದರ್ಭದಲ್ಲಷ್ಟೆ ಪ್ರತ್ಯಕ್ಷರಾಗಿ ಜನಸಾಮಾನ್ಯರ ಪರ ಎಂದು ಫೋಸು ಕೊಡುವ ರಾಜಕಾರಣಿಗಳ ಬಗ್ಗೆ ಜಾಗೃತರಾಗಿ, ಜನತೆಯ ಮಧ್ಯದಲ್ಲಿದ್ದುಕೊಂಡು ಅವರ ದುಃಖ, ದುಮ್ಮಾನಗಳಿಗೆ ಸ್ಪಂದಿಸುವ, ನಾಡು, ನುಡಿ, ನೆಲ, ಜಲದ ಬಗ್ಗೆ ಬದ್ಧತೆಯಿಂದ ಹೋರಾಡುವಂತ ಜನಪ್ರತಿನಿಧಿಯ ಆಯ್ಕೆ ನಿಟ್ಟಿನಲ್ಲಿ ಒಲವು ತೋರುವ ಮೂಲಕ ತಮ್ಮ ಸಂವಿಧಾನಬದ್ಧ ಜವಾಬ್ದಾರಿ ಚಲಾವಣೆ ಮಾಡಬೇಕೆಂದರು.
ಕನ್ನಡಸೇನೆ ಬೆಂಗಳೂರು ನಗರ ಗೌರವಾಧ್ಯಕ್ಷ ಮಹಾದೇವ್, ಅಂಬರೀಶ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ನಾಗೇಶ್, ಕನ್ನಡಸೇನೆ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಯಡೆಯೂರು ಅಧ್ಯಕ್ಷ ಗುಂಡಯ್ಯ, ಪದಾಧಿಕಾರಿಗಳಾದ ಆದರ್ಶಕುಮಾರ್, ಮಧು, ಹರೀಶ, ಧರಣಿ, ಕೃಷ್ಣೇಗೌಡ, ಲಕ್ಷ್ಮೀಕಾಂತ್ ಇತರರು ಉಪಸ್ಥಿತರಿದ್ದು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು, ಸಾಧಕರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

