'ಹಳ್ಳಿಗಳ ಉದ್ಧಾರವೇ ದೇಶದ ಬೆಳವಣಿಗೆ'
ತುಮಕೂರು: ಹಳ್ಳಿಗಳ ಬೆಳವಣಿಗೆ ದೇಶದ ಬೆಳವಣಿಗೆ. ಗ್ರಾಮದ ಅಭಿವೃದ್ಧಿಯೇ ಸಮಾಜ ಸೇವೆ, ಬಡಜನರ ಸೇವೆ ಎಂದು ಸ್ವಾಂದೇಸನಹಳ್ಳಿ ಗ್ರಾಪಂ ಅಧ್ಯಕ್ಷ ಈರಣ್ಣ ಪ್ರತಿಪಾದಿಸಿದರು.
ಅವರು ತುಮಕೂರು ತಾಲೂಕು ಮುತ್ಸಂದ್ರ ಗ್ರಾಮದಲ್ಲಿ ಶ್ರೀದೇವಿ ನರ್ಸಿಂಗ್ ಕಾಲೇಜಿನ ವತಿಯಿಂದ ಏರ್ಪಾಟಾಗಿದ್ದ ಎನ್ಎಸ್ಎಸ್ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮಗಾಂಧಿ ಅವರ ಗ್ರಾಮಸ್ವರಾಜ್ಯ ಕನಸಾಗಿಯೇ ಉಳಿದಿದೆ. ಗ್ರಾಮಗಳ ಅಭಿವೃದ್ಧಿಯಾಗದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು. 7 ದಿನಗಳ ಈ ಎನ್ಎಸ್ಎಸ್ ಶಿಬಿರದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನದ ಪ್ರಾಮುಖ್ಯತೆ, ಮಾನಸಿಕ ಆರೋಗ್ಯ ಸೇರಿದಂತೆ ಇತರೆ ವಿಷಯಗಳ ಕುರಿತು ಪ್ರತಿದಿನ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶ್ರೀದೇವಿ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಟಿ.ವಿ. ಬ್ರಹ್ಮದೇವಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಸಾಕಮ್ಮ ನಾಗರಾಜ್, ಜಯಮ್ಮ ಹನುಮಯ್ಯ, ಯೋಗೀಶ್, ಸತೀಶ್, ಲಕ್ಷ್ಮೀದೇವಮ್ಮ, ಶ್ರೀನಿವಾಸ್, ರಾಜಶೇಖರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಬಿರಾಧಿಕಾರಿ ಎಸ್.ಆರ್. ಅರುಣ್ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಸ್ವಾಗತಿಸಿ, ಪುನಿತ್ ಕುಮಾರ್ ವಂದಿಸಿದರು.
ಇಂದು ಶಾಲಾ ಕಾಲೇಜಿಗೆ ರಜೆ ಇಲ್ಲ
ತುಮಕೂರು: ಎಂದಿನಂತೆ ಫೆ. 21 ರ ಗುರುವಾರ ಶಾಲಾ ಕಾಲೇಜು ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ಆರ್.ಕೆ. ರಾಜು ಸ್ಪಷ್ಟಪಡಿಸಿದ್ದಾರೆ. ಬುಧವಾರ ಸಂಜೆ 4 ಗಂಟೆಯಿಂದಲೇ ಕೆಎಸ್ಆರ್ಟಿಸಿ ಬಸ್ ಸೇವೆ ಆರಂಭಿಸಲಾಗಿದ್ದು ನಾಳೆಯೂ ಸೇವೆ ಮುಂದುವರೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಚಿಕ್ಕನಾಯಕನಹಳ್ಳಿ: ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ರಾಜಕೀಯ ಪಕ್ಷವೊಂದರ ಕಾರ್ಯ ಕಾರ್ಯಕರ್ತರಂತೆ ವರ್ತಿಸುತ್ತಿರುವ ಅಧಿಕಾರಿಯ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಅನೀಸ್ ಖೈಸರ್ ಎರಡನೆ ಬಾರಿಗೆ ಇಲ್ಲಿಗೆ ವರ್ಗಾವಣೆಗೊಂಡು ಬಂದಲಾಗಾಯ್ತಿನಿಂದಲು ಶಾಸಕರ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಶಾಸಕರ ಖಾಸಗಿ ಕಾರ್ಯಕ್ರಮಗಳಿಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ತ್ರೀಶಕ್ತಿ ಸಂಘದ ಸದಸ್ಯರನ್ನು ತಮ್ಮ ಅಧಿಕಾರ ದರ್ಪದಿಂದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಹಾಲಿ ಶಾಸಕರು ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ಅಂಗನವಾಡಿ ಮಕ್ಕಳಿಗೆ ಮತ್ತು ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಉಚಿತವಾಗಿ ಸೀರೆ ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ವ್ಯವಸ್ಥೆಯನ್ನು ಅನೀಸ್ ಖೈಸರ್ ವಹಿಸಿಕೊಂಡಿದ್ದರು ಎಂದು ಆರೋಪಿಸಿದರು.
ಎಪಿಎಂಸಿ ಅಧ್ಯಕ್ಷ ರಾಮಕೃಷ್ಣಪ್ಪ
ಪಾವಗಡ: ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ನಡೆಯಿತು. ಸಮಿತಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರಾಮಕೃಷ್ಣಪ್ಪ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಬಿ.ಗಂಗಾಧರಪ್ಪ ಅವಿರೋಧ ಆಯ್ಕೆಗೊಂಡಿದ್ದಾರೆ. ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಒಟ್ಟು 14 ಮಂದಿ ಸದಸ್ಯರ ಪೈಕಿ, 6 ಬಿಜೆಪಿ 6 ಕಾಂಗ್ರೆಸ್ ಹಾಗೂ 2 ಜೆಡಿಎಸ್ ಸದಸ್ಯರಿದ್ದರು. ಇದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಹೊಂದಾಣಿಕೆ ಮಾಡಿಕೂಳ್ಳುವ ಮೂಲಕ ಅಧ್ಯಕ್ಷರನ್ನಾಗಿ ರಾಮಕೃಷ್ಣಪ್ಪ ಹಾಗೂ ಉಪಾಧ್ಯಕ್ಷರಾಗಿ ಬಿ.ಗಂಗಾಧರಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಚುನಾವಣೆ ಅಧಿಕಾರಿಯಾಗಿ ತಹಸೀಲ್ದಾರ್ ಕಾರ್ಯನಿರ್ವಹಿಸಿದ್ದು ಎಪಿಎಂಸಿ ಕಾರ್ಯದರ್ಶಿ ಹಾಜರಿದ್ದರು.
ಕಾರು- ಬೈಕ್ ಡಿಕ್ಕಿ: ಮೂವರ ಸಾವು
ಪಾವಗಡ: ವೇಗವಾಗಿ ಬರುತ್ತಿದ್ದ ಕಾರೊಂದು ಬೈಕಿಗೆ ಗುದ್ದಿದ ಪರಿಣಾಮ ಬೈಕ್ ಚಾಲಕ ಡಾ.ಮಂಜುನಾಥ್ ಸೇರಿದಂತೆ ಹಿಂದೆ ಕುಳಿತಿದ್ದ ಆಂಧ್ರ ಮೂಲದ ಇಬ್ಬರು ಸ್ನೇಹಿತರು ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಅನಂತಪುರ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಪಟ್ಟಣದ ಗುಟ್ಟಹಳ್ಳಿ ವಾಸಿ ಗುಮ್ಮಘಟ್ಟ ಪಶು ವೈದ್ಯ ಇಲಾಖೆಯಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ಡಾ.ಮಂಜುನಾಥ್ (50) ಹಾಗೂ ಇವರ ಆಂಧ್ರದ ಸ್ನೇಹಿತರಿಬ್ಬರು ಸ್ಥಳದಲ್ಲಿಯೆ ಮೃತಪಟ್ಟಿ ದುದೈವಿಗಳು. ಆಂಧ್ರದ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದ್ದು ಪಟ್ಟಣದಲ್ಲಿ ಬುಧವಾರ ಶವ ಸಂಸ್ಕಾರ ನಡೆಯಿತು. ಸ್ಥಳಕ್ಕೆ ಶಾಸಕ ವೆಂಕಟರಮಣಪ್ಪ, ಬಿಜೆಪಿ ಮುಖಂಡ ವಿಜ್ಞಾನಿ ವೆಂಕಟಸ್ವಾಮಿ, ಜೆಡಿಎಸ್ ಮುಖಂಡ ತಾಳೇಮರದಹಳ್ಳಿ ಮಂಜುನಾಥ್, ಗುಟ್ಟಹಳ್ಳಿ ಬಂಗಾರಪ್ಪ, ಚಿನ್ನಮ್ಮನಹಳ್ಳಿ ಶ್ರೀರಾಮು ಮುಂತಾದವರು ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು.
ಇಂದು ಕಾಂಗ್ರೆಸ್ ಪ. ಭಾಗದ ಪೂರ್ವಭಾವಿ ಸಭೆ
ಶಿರಾ: ತಾಲೂಕಿನ ಬರಗೂರು ಗ್ರಾಮದಲ್ಲಿ ಗುರುವಾರ ಶಿರಾ ತಾಲೂಕು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟರ ವಿಭಾಗದ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ. ಉದ್ಘಾಟನೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ವಿಭಾಗದ ಅಧ್ಯಕ್ಷ ರಾಮಕೃಷ್ಣ ನೆರವೇರಿಸಲಿದ್ದು, ಶಾಸಕ ಜಯಚಂದ್ರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಿರಾ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂಗಾವರ ಮಾರಣ್ಣ, ನಗರ ಅಧ್ಯಕ್ಷ ಅಲ್ಲಾಬಕ್ಷ್ ಪ್ಯಾರು, ಉದಯಶಂಕರ್ ಮತ್ತಿತರರು ಭಾಗವಹಿಸುವರು ಎಂದು ಶಿರಾ ತಾಲೂಕು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಕೆ.ನರಸಪ್ಪ ತಿಳಿಸಿದ್ದಾರೆ.
24 ರಂದು ನೆನಪಿನ ಬುತ್ತಿ ಆತ್ಮಕಥನ ಬಿಡುಗಡೆ
ತುಮಕೂರು: ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಫೆ. 24 ರಂದು ಬೆಳಗ್ಗೆ 10-30 ಕ್ಕೆ ಕೆ. ನರಸಿಂಹಯ್ಯ ಸಿದ್ದಾಪುರ ಅವರ ಬದುಕು - ಬರಹ ಸಾಧನೆ ಕುರಿತ ನೆನಪಿನ ಬುತ್ತಿ ಆತ್ಮಕಥನ ಬಿಡುಗಡೆ ಸಮಾರಂಭ ಏರ್ಪಾಟಾಗಿದೆ. ಬೆಂಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಸೋಸಿಯೇಟ್ ಪ್ರೊ. ಡಾ. ಆರ್. ಕಾವಲ್ಲಮ್ಮ ಕೃತಿ ಬಿಡುಗಡೆ ಮಾಡಲಿದ್ದಾರೆ. ಬದುಕು -ಬರಹ ಸಾಧನೆ ಕುರಿತು ನಿವೃತ್ತ ಮೋಜಣಿದಾರ ಚಿಕ್ಕನರಸೀಯಪ್ಪ, ಬೆಂಗಳೂರಿನ ನಿವೃತ್ತ ಹಿರಿಯ ಬ್ಯಾಂಕ್ ಅಧಿಕಾರಿ ವೈ.ಎನ್. ರಮೇಶ್ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ವಿದ್ಯಾವಾಚಸ್ಪತಿ ಕವಿತಾಕೃಷ್ಣ ವಹಿಸಲಿದ್ದಾರೆ.
ಕೊಲ್ಲಾಪುರದಮ್ಮ ದೇವಿ ವಾರ್ಷಿಕೋತ್ಸವ
ಶಿರಾ: ಪಟ್ಟಣದ ಅಮರಾಪುರ ರಸ್ತೆಯ ಜ್ಯೋತಿನಗರ ಬಡಾವಣೆಯ ಶಕ್ತಿ ನಗರದಲ್ಲಿರುವ ಶ್ರೀ ಕೊಲ್ಲಾಪುರದಮ್ಮ ದೇವಿಯ 8ನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ದೇವರಿಗೆ ಪಂಚಾಮೃತಾಭಿಷೇಕ ವಿಶೇಷ ಹೂವಿನ ಅಲಂಕಾರ, ಗಣಪತಿ ಹೋಮ, ನವಗ್ರಹ ಹೋಮ, ಪುರಸರ ಮೃತ್ಯುಂಜಯ ಹೋಮ, ಶ್ರೀ ಲಲಿತಾ ಹೋಮಾ, ಇತ್ಯಾದಿ ಕಾರ್ಯಕ್ರಮಗಳು ನೂರಾರು ಭಕ್ತ ಸಮೂಹದ ಸಮ್ಮುಖದಲ್ಲಿ ನಡೆಯಿತು.
ಎಬಿವಿಪಿ ರಾಜ್ಯ ಕಾರ್ಯಕಾರಿಣಿಗೆ ಆಯ್ಕೆ
ತುಮಕೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸಮ್ಮೇಳನ ಬೆಳಗಾವಿಯಲ್ಲಿ ನಡೆದು, ರಾಜ್ಯದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ರಾಜ್ಯ ಕಾರ್ಯಕಾರಿಣಿಗೆ ತುಮಕೂರು ಜಿಲ್ಲೆಯ 3 ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ತುಮಕೂರಿನ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಹರಿಪ್ರಸಾದ್, ತುಮಕೂರಿನ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ಮಂಜುನಾಥ, ತುಮಕೂರು ಸಿದ್ದಗಂಗಾ ತಾಂತ್ರಿಕ ಕಾಲೇಜಿನ ಅಮರೇಶ್ ಆಯ್ಕೆಯಾಗಿದ್ದಾರೆ.
ಮಾ.9 ರಂದು ಕ್ರಿಕೆಟ್ ಟೂರ್ನಿ
ತುಮಕೂರು: ತುಮಕೂರು ಬನಶಂಕರಿಯಲ್ಲಿರುವ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಗ್ರಾಜುಯೇಟ್ ಅಸೋಸಿಯೇಟ್ಸ್ ವತಿಯಿಂದ ಮುಂದಿನ ಮಾರ್ಚ್ 9 ಹಾಗೂ 10 ರಂದು ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಏರ್ಪಾಟಾಗಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀಕಾಂತ್, ಪವಿತ್ರ ಎಂಟರ್ಪ್ರೈಸಸ್, ಉಪ್ಪಾರಹಳ್ಳಿ ಆಟೋ ಸರ್ಕಲ್, ತುಮಕೂರು, ಮೊ. 9731841851, ನಾರಾಯಣಮೂರ್ತಿ 9844372988 ಸಂಪರ್ಕಿಸುವಂತೆ ಕೋರಲಾಗಿದೆ.
ನಾಳೆ ಉಚಿತ ನೇತ್ರ ತಪಾಸಣಾ ಶಿಬಿರ
ಶಿರಾ: ತಾಲೂಕಿನ ಕಳ್ಳಂಬೆಳ್ಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಫೆ. 22 ಶುಕ್ರವಾರ ಉಚಿತ ನೇತ್ರ ತಪಾಸಣಾ ಶಿಭಿರ ಏರ್ಪಡಿಸಲಾಗಿದೆ. ಡಾ.ಎಂ.ಸಿ.ಮೋದಿ ಚಾರಿಟಬಲ್ ಟ್ರಸ್ಟ್ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ, ತಾಲೂಕು ಆರೋಗ್ಯ ಇಲಾಖೆಗಳ ಸಂಯುಕ್ರಾಶ್ರಯದಲ್ಲಿ ನಡೆಯುವ ಸದರಿ ಶಿಬಿರದಲ್ಲಿ ನುರಿತ ವೈದ್ಯರು ಪಾಲ್ಗೊಳ್ಳಲಿದ್ದು, ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯುವಂತೆ ಕೋರಿದ್ದಾರೆ.
ಕಾಂಗ್ರೆಸ್ಗೆ ಸೇರ್ಪಡೆ
ಪಾವಗಡ: ತಾಲೂಕಿನ ಬಿಜೆಪಿ ಹಿರಿಯ ಮುಖಂಡ ಹಾಗೂ ಪುರಸಭೆ ಮಾಜಿ ಸದಸ್ಯ ಕೆ.ವಿ.ಶ್ರೀನಿವಾಸ್ ಹಾಗೂ ಬೆಂಬಲಿಗರು ಬಿಜೆಪಿ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಮತ್ತಷ್ಟು ಬಲ ಬಂದಾಂತಾಗಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು ತಿಳಿಸಿದರು. ಶಾಸಕ ವೆಂಕಟರಮಣಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ಪಟ್ಟಣದ ಎಸ್ಎಸ್ಕೆ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

