ತುಮಕೂರು

ಕೊಂಗಾಡಿಯಪ್ಪ ಸಮಾಧಿ ಸ್ಥಳದಲ್ಲಿ ಪೂಜೆ

Published On :

ದೊಡ್ಡಬಳ್ಳಾಪುರ: ಲೋಕಸೇವಾನಿರತ, ದೊಡ್ಡಬಳ್ಳಾಪುರದ ಪುರಪಿತೃ ಡಿ. ಕೊಂಗಾಡಿಯಪ್ಪ ಅವರ 152ನೇ ಜನ್ಮದಿನಾಚರಣೆ ಅಂಗವಾಗಿ ಇಲ್ಲಿನ ಸಂಜಯನಗರದಲ್ಲಿರುವ ಸಾರ್ವಜನಿಕ ರುದ್ರಭೂಮಿಯಲ್ಲಿರುವ ಶ್ರೀಯುತರ ಸಮಾಧಿ ಸ್ಥಳದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಾಗವಹಿಸಿದ್ದ ಗಣ್ಯರು ಕೊಂಗಾಡಿಯಪ್ಪ ಅವರ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಸೂಚಿಸಿದರು. ನಂತರ ಸಿಹಿ ಹಂಚಿಕೆ ನಡೆಯಿತು. ಸಮಿತಿ ಸಂಚಾಲಕರಾದ ಎನ್.ಸಿ. ಲಕ್ಷ್ಮೀ, ಡಿ.ಆರ್. ನಟರಾಜ್, ಎಸ್. ನಟರಾಜ್, ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ. ಶ್ರೀನಿವಾಸ್, ಕಾರ್ಯದರ್ಶಿ ಎ.ಎಸ್. ಕೇಶವ, ನಿವೃತ್ತ ಉಪನ್ಯಾಸಕಿ ಕೆ.ಎಸ್.ಪ್ರಭಾ, ಎ.ಓ.ಆವಲಮೂರ್ತಿ, ಹಿರಿಯ ಪತ್ರಕರ್ತ ಪಿ.ಜಿ. ಸುಬ್ಬರಾವ್, ವೇಣು, ದೇವಾಂಗ ಮಂಡಲಿ ಪದಾಧಿಕಾರಿಗಳು, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಮುಖಂಡರು, ಕೊಂಗಾಡಿಯಪ್ಪ ಅವರ ಅಭಿಮಾನಿಗಳು ಹಾಜರಿದ್ದರು.

ಆರ್. ರವಿಶಂಕರ್ ನಾಯ್ಕ್  ನೇಮಕ
ಪಾವಗಡ: ಕರ್ನಾಟಕ ಜನತಾ ಪಕ್ಷದ ತಾ. ಅಧ್ಯಕ್ಷರಾಗಿ ಉಪ್ಪರಹಳ್ಳಿ ಆರ್. ರವಿಶಂಕರ್ ನಾಯ್ಕ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎನ್. ಜಯರಾಮ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ರಂಗನಾಯ್ಕ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾ. ಅಧ್ಯಕ್ಷ ರವಿಶಂಕರ್‌ನಾಯ್ಕ್, ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ತಾಲೂಕಿನ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ತಮ್ಮ ಅಧಿಕಾರವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದರು.

ತಿಪಟೂರು:  96 ನಾಮಪತ್ರ ಸಲ್ಲಿಕೆ
ತಿಪಟೂರು: ತಿಪಟೂರು ನಗರಸಭಾ ಚುನಾವಣೆಗೆ ಇಂದಿನವರೆಗೆ ಒಟ್ಟು 96 ನಾಮಪತ್ರಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಕೆಜೆಪಿ 27, ಕಾಂಗ್ರೆಸ್ 21, ಬಿಜೆಪಿ 20, ಜೆಡಿಎಸ್ 9, ಬಿಎಸ್‌ಆರ್ 1, ಜೆಡಿಯು 1 ಮತ್ತು 17 ಪಕ್ಷೇತರರಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಹಸೀಲ್ದಾರ್ ವಿಜಯಕುಮಾರ್ ತಿಳಿಸಿದ್ದಾರೆ.

ನಾಳೆ ವಿಶೇಷ ಪೂಜೆ
ಇಲ್ಲಿಗೆ ಸಮೀಪದ ಕುಚ್ಚಂಗಿಯ 1008 ಪಾರ್ಶ್ವನಾಥ ಸ್ವಾಮಿ ಜಿನ ಮಂದಿರದಲ್ಲಿ ಇದೇ ತಿಂಗಳ 24 ರಂದು ಬೆಳಗ್ಗೆ 11 ಗಂಟೆಗೆ 44ನೇ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಮಹಾಭಿಷೇಕ ಪೂಜೆ ಹಮ್ಮಿಕೊಳ್ಳಲಾಗಿದೆ. ಅಂದು 10 ಗಂಟೆಗೆ ಕುಚ್ಚಂಗಿಗೆ ಹೋಗಿ ಬರಲು ವಾಹನ ವ್ಯವಸ್ಥೆ ಮಾಡಲಾಗಿದೆ.

ವಿವಿ ಪ್ರಮಾಣ ಪತ್ರ
ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ 6ನೇ ಸೆಮಿಸ್ಟರ್ ಬಿಸಿಎ ವಿದ್ಯಾರ್ಥಿಗಳು ತುಮಕೂರಿನಲ್ಲಿಯೇ ಪ್ರಥಮ ಬಾರಿಗೆ ಅಮೆರಿಕಾದ ಸ್ಟ್ಯಾನ್ ಫೋರ್ಡ್ ವಿವಿ ಸರ್ಟಿಫಿಕೇಟ್ ಪಡೆದಿದ್ದಾರೆ.
ಸ್ಟ್ಯಾನ್‌ಫೋರ್ಡ್ ವಿವಿ ನಡೆಸಿದ ಆನ್‌ಲೈನ್ ಕೋರ್ಸಿನಲ್ಲಿ ಬಿಸಿಎ ವಿಭಾಗದ ಮುಖ್ಯಸ್ಥ ಮಧುಪ್ರಿಯ ಮಾರ್ಗದರ್ಶನದಲ್ಲಿ 4 ಜನ ವಿದ್ಯಾರ್ಥಿಗಳಾದ ಸುಹಾಸ್ ಎಸ್, ಅಜಯ್ ಗೌತಮ್, ಕೀರ್ತನ ಹಾಗೂ ವಿನಯ್ ಅವರು ಉತ್ತೀರ್ಣರಾಗಿ ವಿವಿ ಯಿಂದ ಮೊದಲ ಬಾರಿಗೆ ಸರ್ಟಿಫಿಕೇಟ್ ಪಡೆದಿದ್ದಾರೆ. ಸಂಸ್ಥೆಯ ಅಧ್ಯಕ್ಷ ಕೆ.ಬಿ.ಜಯಣ್ಣ, ಗೌರವ ಕಾರ್ಯದರ್ಶಿ ಎನ್.ಬಿ. ಪ್ರದೀಪ್, ಪ್ರಾಚಾರ್ಯ ಬಿ.ಟಿ. ಗುರುರಾಜ್ ಮತ್ತು ಬಿಸಿಎ ವಿಭಾಗದ ಮುಖ್ಯಸ್ಥ ಮಧುಪ್ರಿಯ ಅವರು ವಿದ್ಯಾರ್ಥಿ ಅಭಿನಂದಿಸಿದ್ದಾರೆ.

ನಾಳೆ ಪೂರ್ವಭಾವಿ ಸಭೆ
ಜಿಲ್ಲಾ ಜಾತ್ಯತೀತ ಮಾನವ ವೇದಿಕೆ ಆಶ್ರಯದಲ್ಲಿ ಎಲ್ಲಾ ಹಿಂದುಳಿದ ಮತ್ತು ಶೋಷಿತ ವರ್ಗಗಳ ಶ್ರೇಯೋಭಿವೃದ್ಧಿ ಬಗ್ಗೆ ಚಿಂತನೆ ಮಾಡಲು ಜಿಲ್ಲಾ ಮಟ್ಟದ ಶೋಷಿತ ವರ್ಗದವರ ಸಮ್ಮೇಳನವನ್ನು ಮಾಡಲು ಉದ್ದೇಶಿಸಿದ್ದು, ಫೆ.24 ರಂದು ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.

ತಾಲೂಕು ಕೆಜೆಪಿಗೆ ನೇಮಕ
ಪಾವಗಡ: ಕೆಜೆಪಿ ತಾಲೂಕು ಅಧ್ಯಕ್ಷರಾಗಿ ಉಪ್ಪಾರಹಳ್ಳಿ ಆರ್.ರವಿಶಂಕರ್‌ನಾಯ್ಕ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎನ್.ಜಯರಾಮ್ ನೇಮಕ ಮಾಡಿರುವುದಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ,ರಂಗನಾಯ್ಕ್ ಪಕ್ಷದ ಜಿಲ್ಲಾ ಸಮಿತಿ ಆದೇಶದಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ರವಿಶಂಕರ್‌ನಾಯ್ಕ್, ಮುಖಂಡರ ಸಹಕಾರದಿಂದ ತಾಲೂಕಿನಲ್ಲಿ ಕೆಜೆಪಿಯನ್ನು ಪ್ರಬಲವಾಗಿ ಬೆಳೆಸಲಾಗುತ್ತಿದೆ ಎಂದರು.
ಪುರಸಭೆ ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದ 23ವಾರ್ಡುಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು ಈಗಾಗಲೇ ಪಕ್ಷದ ಭಿ ಫಾರಂಗಳು ವಿತರಿಸಲಾಗುತ್ತಿದೆ ಎಂದರು.
ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ ಆಭ್ಯರ್ಥಿ ಗೋಪಾಲನಾಯಕ್ ಮುಖಂಡ ರಂಗಸಮುದ್ರ ಜಯರಾಮ್ ಮುಂತಾದವರಿದ್ದರು.     

ಶೇಂಗಾ ಬಣವೆಗೆ ಬೆಂಕಿ: ನಷ್ಟ
ಪಾವಗಡ: ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಸುಮಾರು 2 ಲಕ್ಷ ಮೌಲ್ಯದ ಶೇಂಗಾ ಹುಲ್ಲು ಬಣವೆವೊಂದು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಶುಕ್ರವಾರ ತಾಲೂಕಿನ ಸಿ.ಕೆ. ಪುರ ಗ್ರಾಪಂ ವ್ಯಾಪ್ತಿಯ ಚನ್ನಸಾಗರದಹಟ್ಟಿಯಲ್ಲಿ ನಡೆದಿದೆ.
ಚನ್ನಸಾಗರದಹಟ್ಟಿ ಬಡ ರೈತ ಮುತ್ತಣ್ಣ ಎಂಬುವರಿಗೆ ಸೇರಿದ ಬಣವೆಗೆ ಗ್ರಾಮದ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಬಣವೆ ಪೂರ್ತಿ ಸುಟ್ಟು ಭಸ್ಮವಾಗಿ ಅಪಾರ ಪ್ರಮಾಣದಲ್ಲಿ ನಷ್ಚಕೀಡಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ತನಿಖಾಧಿಕಾರಿ ತಿಪ್ಪೇಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು.
ಘಟನೆ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಆನೇಕ ಬಾರಿ ಕರೆ ಮಾಡಿದರೂ ಪಾವಗಡ ಪೊಲೀಸರು ಸ್ವಂದಿಸದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಗ್ರಾಮಸ್ಥರು ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಯುವ ಮುಖಂಡ ಸಿ.ಕೆ. ಪುರ ಸಿ.ಎ. ಆಜೇಯ್ ನಾಗೇಶ್ ಭೇಟಿ ನೀಡಿನೊಂದ ಮುತ್ತಣ್ಣನಿಗೆ ಸ್ವಾಂತನ ಹೇಳಿದರು.

ನಗರಸಭೆ ಆಡಳಿತಾಧಿಕಾರಿಯಾಗಿ ಡಿಸಿ  
ತುಮಕೂರು: ನಗರಸಭೆಯ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಆರ್.ಕೆ. ರಾಜು ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು. ತುಮಕೂರು ನಗರಸಭೆಯ ಕೌನ್ಸಿಲ್ ಅವಧಿಯು ಸರ್ಕಾರದ ಅಧಿಸೂಚನೆಯನ್ವಯ ಫೆ.21, 2013ಕ್ಕೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪುರಸಭಾ ಅಧಿನಿಯಮ 1964ರ ಕಲಂ 315 ರನ್ವಯ ಸರ್ಕಾರದ ಅಧಿಸೂಚನೆಯಲ್ಲಿ ತುಮಕೂರು ನಗರಸಭೆಗೆ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಯವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಆಡಳಿತಾಧಿಕಾರಿಗಳ ಕಚೇರಿ, ನಗರಸಭೆ, ತುಮಕೂರು ದೂ.ವಾ.ಸಂ. 0816-2278941 ಇಲ್ಲಿ ಸಂಪರ್ಕಿಸಬಹುದು.  

5ನೇ ತರಗತಿಗೆ ಪ್ರವೇಶ ಪರೀಕ್ಷೆ
ಪಾವಗಡ: 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ 2013-14ನೇ ಸಾಲಿಗೆ ಸರ್ಕಾರಿ ಆದರ್ಶ ಶಾಲೆ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪಿ. ನಾಗರಾಜ್ ತಿಳಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 2013-14ನೇ ಸಾಲಿಗೆ ಸರ್ಕಾರಿ ಆದರ್ಶ ಶಾಲೆಗೆ ಪ್ರವೇಶ ಪರೀಕ್ಷೆ ಬರೆಯಲು ಅರ್ಜಿಗಳನ್ನು ವಿತರಿಸಲಾಗುತ್ತಿದ್ದು, ಕ್ಷೇತ್ರಾ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಫೆ.28 ರೊಳಗೆ ನೋಡಲ್ ಅಧಿಕಾರಿಗಳಾದ ಸಿಇಒ ಜಯರಾಮ್ ಅಥವಾ ತಾ. ಬಿಇಒ ಕಚೇರಿಗೆ ನೇರವಾಗಿ ತಲುಪಿಸಲು ತಾ. ಬಿಇಒ ಬಿ.ಪಿ. ನಾಗರಾಜ್ ತಿಳಿಸಿದ್ದಾರೆ.

ಪ.ಪಂ.ಗೆ 56 ನಾಮಪತ್ರ ಸಲ್ಲಿಕೆ
ಗುಬ್ಬಿ: ಗುಬ್ಬಿ ಪಟ್ಟಣ ಪಂಚಾಯಿತಿಯ 17 ವಾರ್ಡ್‌ಗಳಿಗೆ ನಡೆಯಲಿರುವ ಚುನಾವಣೆಗೆ ಶುಕ್ರವಾರ ನಾಮಪತ್ರಗಳನ್ನು ತಮ್ಮ ಬೆಂಬಲಿಗರೊಂದಿಗೆ ಮೆರವಣೆಗೆ ಮೂಲಕ ಆಗಮಿಸಿ ನಂತರ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದರು. ಕಾಂಗ್ರೆಸ್‌ನಿಂದ 12 ಅಭ್ಯರ್ಥಿಗಳು, ಬಿಜೆಪಿಯ 5 ಅಭ್ಯರ್ಥಿಗಳು, ಜೆಡಿಎಸ್‌ನಿಂದ 18, ಕೆಜೆಪಿಯಿಂದ 15 ಅಭ್ಯರ್ಥಿಗಳು, ಬಿಎಸ್‌ಆರ್ ಪಕ್ಷದಿಂದ 1 ಅಭ್ಯರ್ಥಿಗಳು ಹಾಗೂ ಪಕ್ಷತರ ಅಭ್ಯರ್ಥಿಗಳು 5 ತಮ್ಮ ಬೆಂಬಲಿಗರೊಂದಿಗೆ ನಾಮ ಪತ್ರಗಳನ್ನು ಸಲ್ಲಿಸಿದರು.

ನಾಳೆ ಪ್ರಣಾಳಿಕೆ ಬಿಡುಗಡೆ
ತುಮಕೂರು: ಇಲ್ಲಿನ ಟೌನ್‌ಹಾಲ್ ವೃತ್ತದಲ್ಲಿ ಇದೇ ತಿಂಗಳ 24 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಸ್ಲಂ ಜನರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಪ್ರಾಂಶುಪಾಲ ಪ್ರೊ.ಜಿ.ಎಂ. ಶ್ರೀನಿವಾಸಯ್ಯ ಪ್ರಣಾಳಿಕೆ ಬಿಡುಗಡೆಗೊಳಿಸುವರು. ಎ. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೊ.ಕೆ.ದೊರೈರಾಜು,ಡಾ. ಬಸವರಾಜು, ಮುನೀರ್ ಅಹಮದ್, ಬಾ.ಹ. ರಮಾಕುಮಾರಿ ಮತ್ತಿತರರು ಆಗಮಿಸಲಿದ್ದಾರೆ.

ನಾಳೆ ಪ್ರತಿಭಾ ಪುರಸ್ಕಾರ
ತುಮಕೂರು: ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ 24 ರಂದು ಬೆಳಗ್ಗೆ 9 ಗಂಟೆಗೆ ಸಪ್ತಗಿರಿ ಬಡಾವಣೆಯ ಜಿಎಸ್‌ಎಸ್ ಭವನದಲ್ಲಿ ಕೇಂದ್ರ ಸಮಿತಿ ಪದಾಧಿಕಾರಿಗಳಿಗೆ ಸನ್ಮಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಅಧ್ಯಕ್ಷತೆ ಜಿ. ಯೋಗೀಶ್. ಎಸ್.ಎಂ.ಕೃಷ್ಣ, ಪ್ರಕಾಶ್ ಸಿ. ಅಂಗಡಿ, ಕೆ.ಶ್ಯಾಮಸುಂದರ್, ಎಂ.ಎನ್.ಉಮೇಶ್, ವಿಜಯಕುಮಾರ್ ಎನ್. ಗುಡ್‌ಡದ್, ಲಯನ್ ಜಿ.ರುದ್ರೇಶ್, ಜಿ.ಪ್ರಭಾಕರ್ ಮತ್ತಿತರರು ಆಗಮಿಸಲಿದ್ದಾರೆ.

ಯುವಕರು ಸಮಾಜಮುಖಿ ಕಾರ್ಯ ಕೈಗೊಳ್ಳಲಿ: ಸುಧಾಕರ್
ತುಮಕೂರು: ಯುವಕರು ಆರೋಗ್ಯ ಪೂರ್ಣ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎಂದು ಹುಲಿಕುಂಟೆ ಜಿ.ಪಂ.ಸದಸ್ಯ ಸುಧಾಕರ್‌ಲಾಲ್ ಕಿವಿಮಾತು ಹೇಳಿದ್ದಾರೆ.  ಇಲ್ಲಿಗೆ ಸಮೀಪದ ಕೋರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವಕರು ಕೇವಲ ಆರೋಗ್ಯ ಪೂರ್ಣ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವದರ ಜತೆಗೆ ನೇತ್ರ ತಪಾಸಣಾ ಶಿಬಿರ ಸೇರಿದಂತೆ ಹತ್ತು ಹಲವಾರು ಶಿಬಿರಗಳಲ್ಲಿ ತೊಡಗಿಕೊಂಡು ಸಮಾಜಮುಖಿ ಕೆಲಸಗಳಲ್ಲಿ ಪಾಲ್ಗೊಂಡರೆ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಟಿ.ನರಸಿಯಪ್ಪ ಅವರು ಯುವಕರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಜಿಲ್ಲಾ ಆಸ್ಪತ್ರೆಯ ನೇತ್ರತಜ್ಞ ಕಲ್ಲೇಶ್ವರ ಮಾತನಾಡಿ,ಕಣ್ಣಿನ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.  ಕೋರಾ ಗ್ರಾಪಂ ಅಧ್ಯಕ್ಷೆ ಕಲ್ಪನ ನಟರಾಜ್, ಸದಸ್ಯರಾದ ಜಯಮ್ಮ, ಸುನಿತ, ಶಶಿಧರಬಾಬು, ಉಪಾಧ್ಯಕ್ಷ ಚನ್ನಗಿರಿಯ್ಯ, ಬೆಸ್ಕಾಂ ಅಭಿಯಂತರ ಅಭಿಲಾಶ್, ಕರವೇ ಜಿಲ್ಲಾಧ್ಯಕ್ಷ ರಘುರಾಮ್ ಉಪಸ್ಥಿತರಿದ್ದರು.

ಹೈದರಾಬಾದ್ ಬಾಂಬ್ ಸ್ಫೋಟ: ಭಗತ್‌ಸೇನೆ ಪ್ರತಿಭಟನೆ
ತುಮಕೂರು: ಹೈದರಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಖಂಡಿಸಿ ಭಗತ್ ಕ್ರಾಂತಿ ಸೇನೆ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಸ್ಫೋಟದಿಂದ ಅಮಾಯಕರು ಸಾವನ್ನಪ್ಪಿದ್ದು, ಇದು ಭಯೋತ್ಪಾದಕರ ಕೃತ್ಯವಾಗಿದ್ದು, ಈ ದುರಂತ ಮತ್ತೆಂದೂ ನಡೆಯಬಾರದೆಂದು ಹಾಗೂ ಈ ಕೃತ್ಯವನ್ನು ಉಗ್ರವಾಗಿ ಖಂಡಿಸುವ ಮೂಲಕ ಕ್ರಾಂತಿ ಸೇನೆ ಕಾರ್ಯಕರ್ತರು ಟೌನ್‌ಹಾಲ್ ವೃತ್ತದಲ್ಲಿ ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದರು.
ಕೇಂದ್ರದ ವಿರುದ್ಧ ಕಿಡಿ: ಇಂತಹ ಭಯೋತ್ಪಾದಕ ಕೃತ್ಯಗಳು ನಡೆಯುತ್ತಲೇ ಇದ್ದರೂ ಗೃಹ ಇಲಾಖೆ ಹಾಗೂ ಕಠಿಣ ಕಾನೂನುಗಳನ್ನು ರೂಪಿಸದೆ ಇರುವುದೇ ಕಾರಣ ಎಂದು ಸೇನೆಯ ಕಾರ್ಯಕರ್ತರು ಆರೋಪಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸೇನೆಯ ಶ್ರೀನಿವಾಸಗೌಡ ಮಾತನಾಡಿದರು. ಸೇನೆಯ ಮುಖಂಡರಾದ ಆರಾಧ್ಯ ಮಂಚಲದೊರೆ, ಕಿರಣ, ಗಂಧರ್ವ, ನಿಶಾಂತ್, ಮೌರ್ಯ, ಮಂಜು, ರಮೇಶ್, ಮಂಜು ಆಂಬುಲೆನ್ಸ್, ರೋಷನ್, ಭಾನು, ಪವನ್, ರಾಜು, ಉಪೇಂದ್ರ ಮುಂತಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.