ಸ್ವಾರ್ಥಕ್ಕಾಗಿ ನಗರ ಬಲಿಕೊಟ್ಟ ಸೊಗಡು
ತುಮಕೂರು: ಸ್ವಾರ್ಥಕ್ಕಾಗಿ ತುಮಕೂರು ನಗರವನ್ನು ಬಲಿಕೊಟ್ಟ ಕೀರ್ತಿ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣನವರಿಗೆ ಸಲ್ಲಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.
ಅವರು ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರಿನ ಶಿರಾಗೇಟ್ ಸರ್ಕಲ್ ನಲ್ಲಿ ಕೆಜೆಪಿ ವತಿಯಿಂದ ಏರ್ಪಾಟಾಗಿದ್ದ ರೋಡ್ ಶೋಗೆ ಚಾಲನೆ ನೀಡಿ ಮಾತನಾಡಿದರು.
ಸಚಿವ ಸೊಗಡು ಶಿವಣ್ಣ ಅತ್ಯಂತ ಸ್ವಾರ್ಥಿ. ಅವರಿಗೆ ತುಮಕೂರು ನಗರಾಭಿವೃದ್ಧಿ ಚಿಂತೆಯಿಲ್ಲ. ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ತುಮಕೂರು ನಗರವನ್ನು ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸಿ, ಕೋಟ್ಯಂತರ ರು. ಹಣ ನೀಡಿದೆ. ಆದರೆ ಪಾಲಿಕೆಯನ್ನು ಉಳಿಸಿಕೊಳ್ಳುವ, ಕೊಟ್ಟ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಯೋಗ್ಯತೆಯಿಲ್ಲದ ಸೊಗಡು ಶಿವಣ್ಣ, ತಮ್ಮ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪದೇ ಪದೇ ಅಧ್ಯಕ್ಷರು, ಆಯುಕ್ತರ ಬದಲಾವಣೆ: ಶಿವಣ್ಣ ತುಮಕೂರು ನಗರಸಭೆಯಲ್ಲಿ 6 ಜನ ಅಧ್ಯಕ್ಷರು 9 ಜನ ಆಯುಕ್ತರನ್ನು ಬದಲಾಯಿಸಿದ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
ತಮ್ಮ ತಾಳಕ್ಕೆ ಕುಣಿಯದ ನಗರಸಭಾಧ್ಯಕ್ಷರು, ಆಯುಕ್ತರನ್ನು ಎತ್ತಂಗಡಿ ಮಾಡಿಸಿ, ಭ್ರಷ್ಟಾಚಾರದ ಪರಮಾವಧಿ ತಲುಪಿದ್ದಾರೆ. ಇದರಿಂದ ತುಮಕೂರು ನಗರದ ಅಭಿವೃದ್ಧಿಗೆ ಭಾರೀ ಹಿನ್ನೆಡೆಯಾಗಿದೆ. ಜನ ಸೊಗಡು ಶಿವಣ್ಣನವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎನ್ನುವ ವಿಶ್ವಾಸವನ್ನು ಯಡಿಯೂರಪ್ಪ ವ್ಯಕ್ತಪಡಿಸಿದರು.
ಅಭಿವೃದ್ಧಿಪಡಿಸೋ ಯೋಗ್ಯತೆಯಿಲ್ಲ: ಹಣ ಕೊಟ್ಟರೂ ತುಮಕೂರು ನಗರ ಅಭಿವೃದ್ಧಿಪಡಿಸೋ ಯೋಗ್ಯತೆಯಿಲ್ಲದ ಸಚಿವ ಸೊಗಡು ಶಿವಣ್ಣ ಎಂದು ಲೇವಡಿ ಮಾಡಿದ ಯಡಿಯೂರಪ್ಪ, ಬರೀ ಕಾಲಹರಣ ಮಾಡುತ್ತಲೇ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಲೇ, ತಮಗೆ ಸಹಕರಿಸಿದ ಅಧ್ಯಕ್ಷರು, ಆಯುಕ್ತರನ್ನು ಪದೇ - ಪದೇ ಬದಲಾಯಿಸುತ್ತಲೇ ಬಂದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೋಡ್ ಶೋನಲ್ಲಿ ಮುಖಂಡರಾದ ಎಂ.ಡಿ. ಲಕ್ಷ್ಮೀನಾರಾಯಣ್, ಜ್ಯೋತಿಗಣೇಶ್, ಜಿಲ್ಲಾ ಕೆಜೆಪಿ ಅಧ್ಯಕ್ಷ ಹೆಬ್ಬಾಕ ರವಿ, ಗಂಗರಾಜು, ಸದಾಶಿವಯ್ಯ
ಯಡಿಯೂರಪ್ಪನವರ ರೋಡ್ ಶೋ ಚರ್ಚ್ ಸರ್ಕಲ್, ಚಿಕ್ಕಪೇಟೆ, ಬನಶಂಕರಿ, ಹನುಮಂತಪುರ, ದೇವರಾಯಪಟ್ಟಣ ಸೇರಿದಂತೆ ನಗರದ ಇತರೆಡೆ ಏರ್ಪಾಟಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

