ಜಿಲ್ಲಾ ಉತ್ಸವಕ್ಕೆ ಚಾಲನೆ
ತುಮಕೂರು: ಮೂರು ದಿವಸಗಳ ವೈಭವದ ಜಿಲ್ಲಾ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ತುಮಕೂರಿನ ಚಿಕ್ಕಪೇಟೆಯ ಆಂಜನೇಯ ಪ್ರತಿಮೆ ಮುಂಭಾಗದಲ್ಲಿ ಶುಕ್ರವಾರ ಸಂಜೆ ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರು ಜಿಲ್ಲಾಉತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಆರ್.ಕೆ. ರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ ಗುಪ್ತ, ಅಪರ ಜಿಲ್ಲಾಧಿಕಾರಿ ದೊಡ್ಡಪ್ಪ, ಜಿಲ್ಲಾ ಪಂಚಾಯತ್ ಸಿಇಓ ಗೋವಿಂದರಾಜು, ತಹಶೀಲ್ದಾರ್ ಅಹೋಬಳಯ್ಯ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ತುಮಕೂರಿನ ಚಿಕ್ಕಪೇಟೆಯಿಂದ ವಿವಿಧ ಜಾನಪದ ತಂಡಗಳೊಂದಿಗೆ ಹೊರಟ ಮೆರವಣಿಗೆ ಜೂನಿಯರ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡಿತು. ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಅವರು ಜಿಲ್ಲಾ ಉತ್ಸವ ನಾಡ ಉತ್ಸವವಾಗಲಿ ಎಂದು ಆಶಿಸಿದರು. ಮನುಷ್ಯನಿಗೆ ಮನರಂಜನೆಯೂ ಅತ್ಯಗತ್ಯವಾಗಿದ್ದು ಜಿಲ್ಲಾ ಉತ್ಸವದ ಮೂಲಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ತುಮಕೂರು ಜಿಲ್ಲೆಯ ಜನತೆ ಸಂತೋಷಪಡಲಿ ಎಂದು ಹಾರೈಸಿದರು.
ಸರಳವಾಗಿ ಆದರೆ ಪರಿಣಾಮಕಾರಿಯಾಗಿ ಜಿಲ್ಲಾ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ. ಆದರೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಿಲ್ಲಾ ಉತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳು, ವಿವಿಧ ಗೋಷ್ಠಿಗಳು ನಡೆಯುತ್ತಿದೆ. ಜಿಲ್ಲೆಯ ಎಲ್ಲಾ ಕಲಾವಿದರಿಗೂ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಉದ್ಘಾಟನೆ: ಇದಕ್ಕೂ ಮುನ್ನ ಶುಕ್ರವಾರ ಬೆಳಗ್ಗೆ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ತುಮಕೂರು ಜಿಲ್ಲಾ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಿತು. ಜಿಲ್ಲಾಧಿಕಾರಿ ಆರ್.ಕೆ. ರಾಜು, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋಮು ಭಾಸ್ಕರಾಚಾರ್, ಟಿ.ಆರ್. ರೇವಣ್ಣ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿಗಳು ಜಿಲ್ಲಾ ಉತ್ಸವದ ಮೂಲಕ ನಾಡಿನ ಹಾಗೂ ಜಿಲ್ಲೆಯ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಕಾರ್ಯ ನಡೆಯಲಿದೆ ಎಂದರು. ಮೂರು ದಿವಸಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಹೆಸರಾಂತ ಕಲಾವಿದರಿಂದ ಮನರಂಜನೆ ಕಾರ್ಯಕ್ರಮವಿದೆ. ತುಮಕೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯವರೂ ಈ ಕಾರ್ಯಕ್ರಮ ವೀಕ್ಷಿಸಲು ಆಗಮಿಸುವ ನಿರೀಕ್ಷೆ ಇದೆ ಎಂದರು.
ಮನುಷ್ಯನಿಗೆ ಮನರಂಜನೆ ಅತ್ಯಗತ್ಯ. ಅಲ್ಲದೇ ಈ ರೀತಿಯ ಕಾರ್ಯಕ್ರಮದಿಂದ ಬೌದ್ಧಿಕ ವಿಕಾಸ ಕೂಡ ಆಗಲಿದೆ ಎಂದು ವೇದಿಕೆಯಲ್ಲಿದ್ದ ಗಣ್ಯರು ಅಭಿಪ್ರಾಯಪಟ್ಟರು. ನಂತರ ರಂಗಗೀತೆ, ನಾಟಕ ಪ್ರದರ್ಶನ ನಡೆಯಿತು. ತಾಲೀಮು ಕೊಠಡಿಯಲ್ಲಿ ರಂಗಭೂಮಿಗೆ ಸಂಬಂಧಪಟ್ಟ ಗೋಷ್ಠಿಗಳು ನಡೆದವು.
ಜೂನಿಯರ್ ಕಾಲೇಜಿನ ಮುಖ್ಯ ವೇದಿಕೆಯಲ್ಲಿ ಅರ್ಚನ ಉಡುಪ ಹಾಗೂ ಶಿವಮೊಗ್ಗ ಸುಬ್ಬಣ್ಣ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಂತರ ಅಂತಾರಾಷ್ಟ್ರೀಯ ಕಲಾವಿದ ಹರಿಹರನ್ ಅವರ ಸಂಗೀತ ಸಂಜೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

