ಸಂಸ್ಕೃತ ಜಗತ್ತಿನ ಎಲ್ಲ ಜ್ಞಾನಶಾಖೆಗಳ ಮೂಲ
ತುಮಕೂರು: ಸಂಸ್ಕೃತ ಜಗತ್ತಿನ ಎಲ್ಲ ಜ್ಞಾನಶಾಖೆಗಳ ಮೂಲ. ಅದರ ಪ್ರಸಾರಕ್ಕೆ ಯುವಕರು ಮುಂದಾಗಬೇಕು ಎಂದು ಸಂಸ್ಕೃತ ಭಾರತಿಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ನಂದಕುಮಾರ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಹಾಗೂ ಸಂಸ್ಕೃತ ಭಾರತಿ ಸಹಯೋಗದಲ್ಲಿ ಶನಿವಾರ ಆರಂಭಗೊಂಡ ರಾಜ್ಯಮಟ್ಟದ ಸಂಸ್ಕೃತ ವಿದ್ಯಾರ್ಥಿ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಜಗತ್ತಿನ ಎಲ್ಲ ಜ್ಞಾನಶಾಖೆಗಳ ಹಿಂದೆ ಸಂಸ್ಕೃತದ ಸತ್ವವಿದೆ. ಹೇಗೆ ವಿದ್ಯುತ್ ಇಲ್ಲದೆ ವಿದ್ಯುತ್ ಉಪಕರಣಗಳು ಪ್ರಯೋಜನಕ್ಕೆ ಬರುವುದಿಲ್ಲವೋ, ಹಾಗೆಯೇ ಸಂಸ್ಕೃತದ ಹೊರತಾಗಿ ಯಾವುದೇ ಜ್ಞಾನಶಾಖೆಗೆ ಅಸ್ತಿತ್ವ ಇಲ್ಲ ಎಂದರು. ಯುವಕರು ಸಂಸ್ಕೃತ ಕಲಿತು ಅದರ ಪ್ರಸಾರದಲ್ಲಿ ತೊಡಗುವುದರಿಂದ ಭಾರತದ ಪ್ರಾಚೀನ ಜ್ಞಾನಸಂಪತ್ತನ್ನು ಹೊಸಯುಗದ ಜನತೆಗೆ ತಲುಪಿಸಬಹದು ಎಂದು ಅಭಿಪ್ರಾಯಪಟ್ಟರು.
ಅದ್ಭುತ ಭಾಷೆ: ಕಾರ್ಯಕ್ರಮ ಉದ್ಘಾಟಿಸಿದ ಗ್ಲೋಬಲ್ಸ್ ಸಂಸ್ಥೆಯ ಸಿಇಒ ಸುಹಾಸ್ ಗೋಪಿನಾಥ್, ಸಂಸ್ಕೃತ ಒಂದು ಅದ್ಭುತ ಭಾಷೆಯಾಗಿದ್ದು, ಅದನ್ನು ಕಲಿಯುವುದರಿಂದ ಐಟಿ ಉದ್ಯೋಗಿಗಳು ಕೂಡ ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಎಸ್. ವ್ಯಾಸ ಯೋಗ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಕೋಟೆಮನೆ ರಾಮಚಂದ್ರ ಭಟ್ಟ, ಸಂಸ್ಕೃತವನ್ನು ಮತ್ತೆ ಸುಸ್ಥಾನದಲ್ಲಿ ಸ್ಥಾಪಿಸುವ ಕೆಲಸವಾಗಬೇಕೆಂದು ಆಶಿಸಿದರು. ವೈಜ್ಞಾನಿಕ ತಳಹದಿಯ ಮೇಲೆ ನಿಂತಿರುವ ಸಂಸ್ಕೃತ ಆಂತರಿಕವಾಗಿಯೂ ಬಾಹ್ಯವಾಗಿಯೂ ಶುದ್ಧೀಕರಿಸುವ ಕೆಲಸ ಮಾಡುತ್ತದೆ. ಸಂಸ್ಕೃತವನ್ನು ದಿನನಿತ್ಯದ ಭಾಷೆಯಾಗಿಸುವ ಅಗತ್ಯವಿದೆ ಎಂದರು.
ವಿಜ್ಞಾನದ ಮಾರ್ಗ: ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್. ಸಿ. ಶರ್ಮಾ, ಸಂಸ್ಕೃತ ಕೇವಲ ಒಂದು ಭಾಷೆ ಅಲ್ಲ, ಅದೊಂದು ವಿಜ್ಞಾನದ ಮಾರ್ಗ ಎಂದರು.
ಸಂಗೀತ ಕ್ಷೇತ್ರದಿಂದ ತೊಡಗಿ ಕಂಪ್ಯೂಟರ್ ಸೈನ್ಸ್, ಎಂಜಿನಿಯರಿಂಗ್ವರೆಗೆ ಸಂಸ್ಕೃತದ ಪ್ರಭಾವ ವಿಸ್ತರಿಸಿದೆ. ಸಂಸ್ಕೃತಕ್ಕೆ ವಿಜ್ಞಾನ ಹಾಗೂ ಜೀವನದ ಜೊತೆಗೆ ಆಳವಾದ ಸಂಬಂಧವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಡಾ. ಎಂ. ಆರ್. ಹುಲಿನಾಯ್ಕರ್, ಸಂಸ್ಕೃತದ ಸಮಕಾಲೀನ ಭಾಷೆಗಳಾದ ಗ್ರೀಕ್, ಲ್ಯಾಟಿನ್ ಭಾಷೆಗಳು ಅವಸಾನ ಹೊಂದಿವೆ ಆದರೆ ಸಂಸ್ಕೃತ ಇನ್ನೂ ಎಲ್ಲ ಭಾಷೆಗಳ ಮಾತೃಸ್ಥಾನದಲ್ಲಿರುವುದು ಅದರ ಶ್ರೇಷ್ಠತೆಗೆ ಸಾಕ್ಷಿ ಎಂದರು.
ಜನಪ್ರಿಯಗೊಳಿಸಬೇಕಿದೆ: ಸಂಸ್ಕೃತ ವನ್ನು ಜನಸಾಮಾನ್ಯರ ಮಟ್ಟದಲ್ಲಿ ಜನಪ್ರಿಯಗೊಳಿಸಬೇಕಿದೆ. ಭಾಷೆಯ ಬಗೆಗಿನ ಪ್ರೀತಿ ಒತ್ತಡ ಅಥವಾ ಒತ್ತಾಯದಿಂದ ಬರಬಾರದು. ಸಂಸ್ಕೃತವನ್ನು ಪ್ರೀತಿಸುವ ಮನಸ್ಥಿತಿಯನ್ನು ಜನಸಾಮಾನ್ಯರಲ್ಲಿ ತರಬೇಕಿದೆ ಎಂದರು. ತುಮಕೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಎನ್. ಲಕ್ಷ್ಮೀಕಾಂತ ಸ್ವಾಗತಿಸಿದರು. ನ್ಯಾಯವಾದಿ ರವೀಂದ್ರನಾಥ ಠಾಗೂರ್ ವಂದಿಸಿದರು. ಐಐಎಂ-ಬೆಂಗಳೂರಿನ ಪ್ರಾಧ್ಯಾಪಕ ಪ್ರೊ. ಬಿ. ಮಹದೇವನ್ ಸಂಸ್ಕೃತ ಮತ್ತು ವಿಜ್ಞಾನ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಯಿತು. ಸಮ್ಮೇಳನದ ಅಂಗವಾಗಿ ಏರ್ಪಡಿಸಿದ ಭಾರತದ ಪ್ರಾಚೀನ ವೈಜ್ಞಾನಿಕ ಸಾಧನೆಗಳ ಜ್ಞಾನವಾಹಿನಿ ಪ್ರದರ್ಶನವನ್ನು ಅಪಾರ ಸಂಖ್ಯೆಯ ಸಾರ್ವಜನಿಕರು ವೀಕ್ಷಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

