ರಾಷ್ಟ್ರಧ್ವಜಕ್ಕೆ ಅಪಮಾನ: ಕರವೇ ಪ್ರತಿಭಟನೆ
ಕುಣಿಗಲ್: ಪುರಸಭೆ ಕಾರ್ಯಾಲಯದಲ್ಲಿ ಶನಿವಾರ ಗಣರಾಜ್ಯೋತ್ಸವದ ಪ್ರಯುಕ್ತ ಹಾರಿಸಲಾದ ರಾಷ್ಟ್ರಧ್ವಜ ಭಾನುವಾರ ಮಧ್ಯಾಹ್ನವಾದರೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಇನ್ನು ಹಾರಾಡುತ್ತಲೆ ಇದ್ದುದನ್ನು ಕಂಡ ಕರವೇ(ನಾರಾಯಣಗೌಡ ಬಣ)ದ ಕಾರ್ಯಕರ್ತರು, ಪುರಸಭೆ ಸಿಬ್ಬಂದಿ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಶನಿವಾರ ಗಣರಾಜ್ಯೋತ್ವದ ಪ್ರಯುಕ್ತ ಪುರಸಭೆ ಆವರಣದಲ್ಲಿ ರಾಷ್ಟ್ರಧ್ವಜಾರೋಹಣೆ ನೆರವೇರಿಸಲಾಗಿದ್ದು, ಸಂಜೆ ರಾಷ್ಟ್ರಧ್ವಜ ಅವರೋಹಣ ಮಾಡಬೇಕಿತ್ತು. ಆದರೆ ಮುಖ್ಯಾಧಿಕಾರಿ ಸೇರಿದಂತೆ ಬಹುತೇಕ ಆಯಕಟ್ಟಿನ ಸಿಬ್ಬಂದಿ ಕೇಂದ್ರಸ್ಥಾನದಲ್ಲಿ ಇರದ ಕಾರಣ ರಾಷ್ಟ್ರಧ್ವಜವನ್ನು ಇಳಿಸುವಂತೆ ಸಿಬ್ಬಂದಿಯೊಬ್ಬರಿಗೆ ಸೂಚಿಸಿ ತೆರಳಿದ್ದರೆನ್ನಲಾಗಿದೆ. ಆದರೆ ಭಾನುವಾರ ಮಧ್ಯಾಹ್ನ 12ಗಂಟೆಯಾದೂ ರಾಷ್ಟ್ರಧ್ವಜ ಹಾರಾಡುತ್ತಲೆ ಇದ್ದುದನ್ನು ಕಂಡ ಕರವೇ (ನಾರಾಯಣಗೌಡ ಬಣ)ದ ಪದಾಧಿಕಾರಿಗಳಾದ ದಿನೇಶ, ರಾಮಣ್ಣ, ಪುರುಷೋತ್ತಮ, ಪ್ರಸಾದ್ ಇತರರು, ಪುರಸಭೆಗೆ ಆಗಮಿಸಿ, ಪುರಸಭಾ ಸಿಬ್ಬಂದಿ ಧೋರಣೆ ಖಂಡಿಸಿದರು. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಸಿಬ್ಬಂದಿ, ಅಧಿಕಾರಿ, ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.
ವಾಗ್ವಾದ: ವಿಷಯ ತಿಳಿದ ಪುರಸಭಾಧ್ಯಕ್ಷೆ ನಳಿನಾಭೈರಪ್ಪ, ಉಪಾಧ್ಯಕ್ಷ ರಂಗಸ್ವಾಮಿ, ಸಿಬ್ಬಂದಿಗಳಾದ ನಾಗರಾಜ್, ಭೈರಪ್ಪರೊಂದಿಗೆ ಸ್ಥಳಕ್ಕೆ ಆಗಮಿಸಿದಾಗ, ಪುರಸಭಾಧ್ಯಕ್ಷರೊಂದಿಗೆ ಕರವೇ ಪದಾಧಿಕಾರಿಗಳು ವಾಗ್ವಾದ ನಡೆಸಿ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದಾಗ, ಅಧ್ಯಕ್ಷೆ ನಳಿನಾಭೈರಪ್ಪ, ಪುರಸಭಾ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದು, ರಾಷ್ಟ್ರಧ್ವಜ ಇಳಿಸಲು ಸಹಕರಿಸುವಂತೆ ಮನವಿ ಮಾಡಿದರು.
ಇದಕ್ಕೊಪದ ಪ್ರತಿಭಟನಾಕಾರರು ಪುರಸಭಾಧ್ಯಕ್ಷರ ಧೋರಣೆ ಖಂಡಿಸಿದರಲ್ಲದೆ, ಬೆಳಗ್ಗೆ ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ಸೇರಿದಂತೆ ಹಲವು ಮಂದಿ ಜವಾಬ್ದಾರಿಯುತ ಅಧಿಕಾರಿಗಳು ಭೇಟಿ ನೀಡಿ ಹೋಗಿದ್ದರೂ ಇನ್ನು ರಾಷ್ಟ್ರಧ್ವಜ ಹಾರಾಡುತ್ತಿರುವುದು ನೋಡಿದರೆ, ಪುರಸಭಾ ಸಿಬ್ಬಂದಿಗಳಿಗೆ ರಾಷ್ಟ್ರಧ್ವಜದ ಬಗ್ಗೆ ಗೌರವ ಇಲ್ಲದಂತಾಗಿದೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಹಿಂಪಡೆಯಲಾಗದು ಎಂದು ಪಟ್ಟು ಹಿಡಿದರು. ಉಪಾಧ್ಯಕ್ಷ ರಂಗಸ್ವಾಮಿ ಪ್ರತಿಭಟನಾಕಾರರ ಮನ ಒಲಿಸಲು ಮುಂದಾದರು. ಪ್ರತಿಭಟನಾಕಾರರು ಪಟ್ಟು ಹಿಡಿದ ಕಾರಣ, ವಿಧಿ ಇಲ್ಲದೆ, ಪುರಸಭಾಧ್ಯಕ್ಷೆ ನಳಿನಾಭೈರಪ್ಪ, ರಾಷ್ಟ್ರಧ್ವಜ ಇಳಿಸುವಲ್ಲಿ ನಿರ್ಲಕ್ಷ್ಯ ತೋರಿರುವ ಸಿಬ್ಬಂದಿ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ, ಕರವೇ ಸಂಘಟನೆಗೆ ಲಿಖಿತ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.
ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರಧ್ವಜ ನೀತಿ ಸಂಹಿತೆ ಅಡಿಯಲ್ಲಿ ಪುರಸಭಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರವೇ ಪದಾಧಿಕಾರಿಗಳು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

