ತುಮಕೂರು

ಕಾಡಾನೆ ಹಾವಳಿ: ಅಧಿಕಾರಿಗಳಿಗೆ ಘೇರಾವ್ ಹಾಕಲು ನಿರ್ಧಾರ

Published On :

ಬಂಗಾರಪೇಟೆ: ತಿಂಗಳಿಂದ ರೈತರ ತೋಟಗಳಿಗೆ ಅಡ್ಡಾದಿಡ್ಡಿಯಾಗಿ ನುಗ್ಗಿ ಕೋಟ್ಯಂತರ ರು. ಬೆಳೆ ನಷ್ಟ ಉಂಟು ಮಾಡಿರುವ ಕಾಡಾನೆಗಳ ಹಾವಳಿಗೆ ಗ್ರಾಮಸ್ಥರು ಸುಸ್ತಾಗಿ ಆನೆಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಘೇರಾವ್ ಹಾಕಲು ಮುಂದಾಗಿದ್ದಾರೆ.
ಅನಿರೀಕ್ಷಿತವಾಗಿ ಪಕ್ಕದ ತಮಿಳುನಾಡಿನ ಗಡಿ ಅರಣ್ಯ ಪ್ರದೇಶದಿಂದ ಇಲ್ಲಿನ ಗಡಿ ಗ್ರಾಮಗಳ ಕಡೆ ಆಹಾರ ಹುಡುಕಿಕೊಂಡು ತಿಂಗಳಿಂದ 50ಕ್ಕೂ ಹೆಚ್ಚಿನ ಆನೆಗಳು ಬಂದಿದ್ದರೂ ಇದುವರೆಗೂ ಅವುಗಳನ್ನು ಮತ್ತೆ ಬಂದ ದಾರಿಯಲ್ಲೇ ತಮಿಳುನಾಡಿನ ಕಡೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ವಿಫಲರಾಗಿದ್ದಾರೆ. ಇದರಿಂದ ಇಲ್ಲಿನ ರೈತರ ಅಪಾರ ಪ್ರಮಾಣದ ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಇವರೆಗೂ ಮೂವರ ಪ್ರಾಣ ಬಲಿ ತೆಗೆದುಕೊಂಡಿರುವ ಕಾಡಾನೆ ಓಡಿಸಲು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದಂತೆ ಕಾಣುತ್ತಿಲ್ಲ.
ಇನ್ನೂ ಎಷ್ಟು ಪ್ರಾಣ ತೆಗೆದುಕೊಂಡ ಮೇಲೆ ಇಲಾಖೆ ಎಚ್ಚರವಹಿಸುವುದು ಎಂದು ಆನೆಗಳಿಂದ ನೊಂದಿರುವ ರೈತರು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವಂತಾಗಿದೆ.
ಕಳೆದ ಮೂರು ದಿನಗಳಿಂದ ದೋಣಿಮಡಗು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಮುಷ್ಟ್ರಹಳ್ಳಿ, ಗುಡಿವಂಕ, ತನಿಮಗಡು, ಬತ್ತಲಹಳ್ಳಿ, ಕರದಿನತ್ತ, ಸಾಕಾರಸನಹಳ್ಳಿ, ಮಲ್ಲೇಶಪಾಳ್ಯ ಮತ್ತಿತರ ಕಡೆ ರಾತ್ರಿ ವೇಳೆ ವಾಕಿಂಗ್ ಮಾಡುತ್ತಾ ಹಗಲು- ರಾತ್ರಿ ಕಷ್ಟಪಟ್ಟು ರೈತರು ಬರಗಾಲದಲ್ಲೂ ಬೆಳೆದಿರುವ ರಾಗಿ, ಅಲಸಂದಿ, ಜೋಳ, ಬಾಳೆ ತೋಟ, ಟೋಮೆಟೋ ಮತ್ತಿತರ ಬೆಳೆಗಳನ್ನು ನಾಶಗೊಳಿಸುತ್ತಿರುವುದು ರೈತರನ್ನು ಮತ್ತೆ ಚಿಂತೆಗೀಡು ಮಾಡಿದೆ. ಆನೆಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳೊಣವೆಂದರೆ ಪ್ರಾಣ ಹೆದರಿಕೆ. ಈ ಕಾರಣಕ್ಕೆ ರೈತರು ಸಂಜೆ ಆರು ಗಂಟೆಯೊಳಗೆ ಮನೆ ಸೇರುವಂತಾಗಿದೆ. ಆನೆಗಳಿಂದ ನಷ್ಟಕ್ಕೊಳಗಾದ ರೈತರ ಬೆಳೆಗಳಿಗೆ ನಷ್ಟ ಪರಿಹಾರ ಕೊಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಅರ್ಜಿ ಪಡೆದು ಬರೀ ಮಾತಿನಲ್ಲೆ ರೈತರನ್ನು ವಂಚಿಸುತ್ತಿರುವ ಇದುವರೆಗೂ ಒಬ್ಬ ರೈತರಿಗೂ ನಯಾಪೈಸೆ ಪರಿಹಾರ ನೀಡಿಲ್ಲ.
ಅಧಿಕಾರಿಗಳ ವರ್ತನೆಯಿಂದ ಬೇಸತ್ತಿರುವ ಗ್ರಾಮಸ್ಥರು ಗ್ರಾಮಗಳಿಗೆ ಬಂದರೆ ಘೇರಾವ್ ಹಾಕಿ ಪ್ರತಿಭಟಿಸಲು ಮುಂದಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.