ಸುಶೀಲ್ಕುಮಾರ್ ಶಿಂಧೆ ಹೇಳಿಕೆಗೆ ಬಿಜೆಪಿ ಖಂಡನೆ
ಚಿಕ್ಕನಾಯಕನಹಳ್ಳಿ: ಅಲ್ಪಸಂಖ್ಯಾತರ ಓಟಿನಾಸೆಗಾಗಿ ದೇಶವನ್ನು ಒತ್ತೆಯಿಡುವ ಕೀಳುಮಟ್ಟಕ್ಕಿಳಿದಿರುವ ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ದೇಶಾದ್ಯಂತ ಜನ ಬೀದಿಗಿಳಿದು ಹೋರಾಟ ಕೈಗೊಳ್ಳ ಬೇಕಾದ
ಅನಿವಾರ್ಯತೆಯಿದೆ ಎಂದು ಮಾಜಿ ಶಾಸಕ ಕೆ.ಎಸ್. ಕಿರಣ್ಕುಮಾರ್ ನುಡಿದರು.
ಅವರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಕೇಂದ್ರಸಚಿವ ಸುಶೀಲ್ಕುಮಾರ್ ಶಿಂಧೆ ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನೀಡಿರುವ ಅಸಂಬದ್ಧ ಹೇಳಿಕೆಯನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕೇಂದ್ರದ ಜವಾಬ್ದಾರಿಯಿರುವ ಒಬ್ಬ ಸಚಿವರಾಗಿ ಶಿಂಧೆ ಈ ರೀತಿ ಕೇಸರಿ ಭಯೋತ್ಪಾದನೆ ಬಗ್ಗೆ ಕೀಳುಮಟ್ಟಕ್ಕಿಳಿದು ಹೇಳಿಕೆ ನೀಡಿರುವುದ ಖಂಡನೀಯ. ಮುಸ್ಲಿಂ ಭಯೋತ್ಪಾದಕತೆ ಇಡೀ ಪ್ರಪಂಚಕ್ಕೇ ಗೊತ್ತಿರುವ ವಿಚಾರ. ಹೀಗಿದ್ದಾಗ್ಯೂ ಕೇಂದ್ರದ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತದ ವೈಫಲ್ಯಗಳನ್ನು ಮರೆಮಾಚಲು ಬಿಜೆಪಿ, ಸಂಘ ಪರಿವಾರದ ಮೇಲೆ ಕೇಸರಿ ಭಯೋತ್ಪಾದನೆ ಗೂಬೆ ಕೂರಿಸುತ್ತಿರುವುದನ್ನು ನೋಡಿದರೆ, ತನ್ನ ಎಲೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಬಿಟ್ಟು , ಬೇರೆಯವರ ಎಲೆಯಲ್ಲಿರುವ ನೊಣವನ್ನು ಹುಡುಕಿದಂತಾಗಿದೆ. ಕೇಂದ್ರದ ನೂರಾರು ಹಗರಣಗಳಿಂದ ಹೈರಾಣಾಗಿರುವ ಸೋನಿಯಾ ಕೃಪಾಪೋಷಿತ ನಾಟಕ ಮಂಡಳಿ ಜನರ ಗಮನ ಬೇರೆಡೆ ಸೆಳೆಯಲು ಹೂಡಿರುವ ಸಂಚು ಈ ಹೇಳಿಕೆ. ಹಾಡುಹಗಲೇ ದೆಹಲಿ ಅತ್ಯಾಚಾರ, ಗಡಿಯಲ್ಲಿ ನಮ್ಮ ಸೈನಿಕರ ಶಿರಶ್ಚೇದನ ಮಾಡಿದ ಪಾಕಿಸ್ಥಾನದ ವಿರುದ್ಧ ಸೊಲ್ಲೆತ್ತಲು ನಾಲಿಗೆಯಲ್ಲಿ ನರವಿಲ್ಲದ ಕೇಂದ್ರದ ನಾಯಕರು, ದೇಶಕ್ಕಾಗಿ ಪ್ರಾಮಾಣಿಕ ಸಮಾಜಸೇವೆ ಮಾಡುತ್ತಿರುವ ಸಂಘ ಪರಿವಾರದ ವಿರುದ್ಧ ಹೇಳಿಕೆ ನೀಡಿರುವುದನ್ನು ನೋಡಿದರೆ, ಯುಪಿಎ ಪಾಪದ ಕೊಡ ತುಂಬಿರುವಂತೆ ಕಾಣುತ್ತದೆ ಎಂದರು.
ವಿಫಳ ಪ್ರಧಾನಿ: ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಗಾದೆಯನ್ನು ನಮ್ಮ ಹಿರಿಯರು ಸೃಷ್ಟಿಸಿರುವುದು ಮನಮೋಹನ್ ಸಿಂಗ್ರಂತಹವರಿಗೆ ಸರಿಯಾಗಿ ಹೊಂದಾಣಿಕೆಯಾಗುತ್ತದೆ. ಅದನ್ನು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ ನಮ್ಮ ಪ್ರಧಾನಿಗಳು. ಏಕೆಂದರೆ ಅವರು ಮಾತನಾಡಿದ್ದನ್ನು ಇದುವರೆಗೆ ದೇಶದ ಯಾವ ಪ್ರಜೆಯು ಕೇಳಿಲ್ಲ. ಆದರೆ ಹುಚ್ಚರಂತೆ ಮಾತನಾಡುವ ತಮ್ಮ ಸಂಪುಟ ಸಹೋದ್ಯೋಗಿಗಳನ್ನು ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಎಚ್.ಬಿ. ಪಂಚಾಕ್ಷರಿ, ತಾಪಂ ಅಧ್ಯಕ್ಷ ಎಂ.ಎಂ. ಜಗದೀಶ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ವಿ. ಕವಿತಾ, ಬರಗೂರು ಬಸವರಾಜು, ತಾಲೂಕು ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಜಿಲ್ಲಾ ಹಿಂದುಳಿದ ವರ್ಗಗಳ ಸಮಿತಿಯ ಉಪಾಧ್ಯಕ್ಷ ಸಿ.ಎಸ್. ರಾಜಣ್ಣ, ತಾಪಂ ಸದಸ್ಯ ಕೆಂಕೆರೆ ನವೀನ್, ಸೀತಾರಾಮಯ್ಯ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

