ತುಮಕೂರು

ವಿವೇಕಾನಂದರ ತತ್ವಾದರ್ಶ ಮೈಗೂಡಿಸಿಕೊಳ್ಳಿ

Published On :

ಕ.ಪ್ರ. ವಾರ್ತೆ ತಿಪಟೂರು ಜು.3
ಸ್ವಾಮಿ ವಿವೇಕಾನಂದರು ಸನಾತನ ಧರ್ಮವಾದ ಹಿಂದೂ ಧರ್ಮಕ್ಕೆ ದೇಶ ವಿದೇಶಗಳಲ್ಲಿ ಗೌರವ ಸಿಗುವಂತೆ ಮಾಡಿದವರು. ಮಹಾತ್ಮಾಗಾಂಧೀಜಿ, ಸುಭಾಷ್‌ಚಂದ್ರ ಬೋಸ್ ಸೇರಿದಂತೆ ಮಹಾನ್ ವ್ಯಕ್ತಿಗಳು ವಿವೇಕಾನಂದರ ಆದರ್ಶಗಳ ಪ್ರಭಾವಕ್ಕೆ ಒಳಗಾಗಿದ್ದರು. ಆದ್ದರಿಂದ ಇಂದಿನ ಯುವ ಪೀಳಿಗೆ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಬದುಕಬೇಕೆಂದು ತುಮಕೂರು ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷರಾದ  ವೀರೇಶಾನಾಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
 ನಗರದ ಕಲ್ಪತರು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ರಾಮಕೃಷ್ಣ ಭಾವಪ್ರಚಾರ ಪರಿಷತ್, ರಾಮಕೃಷ್ಣ ವಿವೇಕಾನಂದ ಆಶ್ರಮ ಹಾಗೂ ಕಲ್ಪತರು ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾರಣೆಯ ಅಂಗವಾಗಿ ಭವ್ಯ ರಥಯಾತ್ರೆ ಮತ್ತು ಯುವ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿವೇಕಾನಂದರ ಸಂದೇಶವನ್ನು ಯುವ ಜನರಿಗೆ ತಿಳಿಸುವ ಸಲುವಾಗಿ ವಿವೇಕಾನಂದ ಭವ್ಯ ರಥಯಾತ್ರೆಯನ್ನು ಬೆಂಗಳೂರಿನಿಂದ ಪ್ರಾರಂಭಿಸಿ, 30 ಜಿಲ್ಲೆಗಳು ಹಾಗೂ 220 ತಾಲೂಕು ಕೇಂದ್ರಗಳಲ್ಲಿ ಅಲ್ಲದೆ ಬೀದರ್‌ವರೆಗೂ  ಈ ರಥೆಯಾತ್ರೆಯನ್ನು ಮಾಡುವ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.
ಅಭಿವೃದ್ಧಿ ಸಾಧ್ಯ: ಗುರುಕುಲಾನಂದಾಶ್ರಮದ  ಇಮ್ಮಡಿ ಕರಿಬಸವೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ಮನುಷ್ಯ ಜಾತೀಯತೆಯನ್ನು ಮೀರಿ ಬೆಳೆದರೆ ರಾಷ್ಚ್ರದ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲಾ ಧರ್ಮದ ಮೂಲ ಒಂದೇ ಎಂದು ಜನತೆ ಅರ್ಥ ಮಾಡಿಕೊಂಡು ಮಾನವೀಯ ಮೌಲ್ಯವನ್ನು ಬೆಳೆಸಿಕೊಂಡರೆ ಎಲ್ಲಾ ಧರ್ಮಿಯರು ಸುಖ, ಶಾಂತಿ, ನೆಮ್ಮದಿಯಿಂದ ಆತ್ಮ ಸಾಕ್ಷಾತ್ಕಾರವನ್ನು ಕಾಣಬಹುದು. ಯಾರಲ್ಲಿ ಶ್ರದ್ಧೆ ಇರುತ್ತದೋ ಅಂತಹವನಿಗೆ ಜ್ಞಾನ ಲಭಿಸಲಿದ್ದು, ಉತ್ತಮ ಜ್ಞಾನಿಗಳಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುವುದು ಎಂದರು.
ಪತ್ತೆಹಚ್ಚಿ:  ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ, ನಗರದ ಸರ್ಕಾರಿ  ಜಾಗವನ್ನು ಅಕ್ರಮವಾಗಿ ಯಾರು ಅಕ್ರಮಿಸಿಕೊಂಡಿದ್ದಾರೆ ಎಂಬುದನ್ನು ಪತ್ತೆಹಚ್ಚಿ ಅದನ್ನು ವಶಪಡಿಸಿಕೊಂಡು ರಾಮಕೃಷ್ಣಾಶ್ರಮಕ್ಕೆ ಜಾಗ ನೀಡುವುದಾಗಿ ತಿಳಿಸಿದರು. ಇಂದಿನ ವಿದ್ಯಾರ್ಥಿಗಳೇ ಮುಂದಿನ ಉತ್ತಮ ನಾಯಕರಾಗಲಿದ್ದು, ವಿದ್ಯಾರ್ಥಿ ದೆಸೆಯಲ್ಲಿಯೇ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕೆಂದ ಅವರು ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸತ್ಪ್ರಜೆಗಳಾಗಬೇಕೆಂದು ಕರೆ ನೀಡಿದರು.
 ಸಮಾರಂಭದಲ್ಲಿ ರಾಮಕೃಷ್ಣ ಮಠದ ಸ್ವಾಮಿ ತ್ಯಾಗೀಶ್ವರಾನಂದಜೀ, ಸ್ವಾಮಿ ಮಹಾವಾಕ್ಯಾನಂದಜೀ ಆಶೀರ್ವಚನ ನೀಡಿದರು. ಮಾಜಿ ಶಾಸಕ ಬಿ.ಸಿ.ನಾಗೇಶ್, ಕೆಐಟಿ ಪ್ರಾಂಶುಪಾಲ ಡಾ.ಶಶಿಧರ್, ಕೆ.ವಿ.ಎಸ್. ಕಾರ್ಯದರ್ಶಿ ಕೆ.ಪಿ.ರುದ್ರಮುನಿಸ್ವಾಮಿ, ಪ್ರಾಂಶುಪಾಲ ರಂಗನಾಥ್ ಮತ್ತಿತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ರಥಯಾತ್ರೆಯ ಮೆರವಣಿಗೆಯು ತಿಪಟೂರು ನಗರದ ಕೆರೆಕೋಡಿ ಸರ್ಕಲ್‌ನಿಂದ ಪ್ರಾರಂಭಗೊಂಡು ನಗರದ ಮುಖ್ಯರಸ್ತೆಯಲ್ಲಿ ಕ್ರಮಿಸಿ ಕಲ್ಪತರು ವಿದ್ಯಾಸಂಸ್ಥೆಯ ಸಭಾಂಗವನ್ನು ತಲುಪಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.