ಮೊದಲ ದಿನವೇ ಭರ್ಜರಿ ವ್ಯಾಪಾರ, ರೈತರ ಹರ್ಷ
ತುರುವೇಕೆರೆ: ಕಲ್ಪತರು ನಾಡು ಎಂಬ ಹೆಗ್ಗಳಿಕೆ ಇರುವ ಇಲ್ಲಿ ಬಹು ವರ್ಷಗಳಿಂದ ತಾಲೂಕಿನ ರೈತಾಪಿಗಳು ನಿರೀಕ್ಷಿಸಿದ್ದ ತೆಂಗಿನ ಕಾಯಿ ಮಾರುಕಟ್ಟೆ ಪ್ರಾರಂಭವಾಯಿತು. ಮೊದಲ ಪ್ರಯತ್ನದಲ್ಲೇ ಪ್ರತಿ ಸಾವಿರ ತೆಂಗಿನ ಕಾಯಿಗೆ ರು. 9 ಸಾವಿರ ಸಿಕ್ಕಿ ರೈತರ ಮುಖದಲ್ಲಿ ಸಂತಸ ಕಂಡಿತು.
ತಾಲೂಕು ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ತೆಂಗಿನ ಕಾಯಿ ಮಾರಾಟ ಮಾಡಲು ಮಾರುಕಟ್ಟೆ ಸಮಿತಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಅಧಿಕೃತವಾಗಿ ಚಾಲನೆ ನೀಡಿದರು.
ದಲ್ಲಾಳಿಗಳ ಕಾಟವಿಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾರುಕಟ್ಟೆ ಪ್ರಾರಂಭದಿಂದಾಗಿ ರೈತರು ತಾವು ಬೆಳೆದ ತೆಂಗಿನ ಕಾಯಿಯನ್ನು ಯಾವುದೇ ಶುಲ್ಕ ವಿಲ್ಲದೇ, ಮಧ್ಯವರ್ತಿಗಳ ಹಾವಳಿ ಇಲ್ಲದೇ ಹಾಗೂ ಹೆಚ್ಚುವರಿ ಕಾಯಿ ನೀಡುವ ಪರಿಪಾಠವಿಲ್ಲದೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಮುಕ್ತ ಮಾರುಕಟ್ಟೆ: ಕೊಬ್ಬರಿ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಕುಸಿತ ಕಂಡಿತ್ತು.ನ್ಯಾಫೆಡ್ ಪ್ರಾರಂಭವಾಗಿರುವುದರಿಂದ ಕ್ವಿಂಟಾಲ್ ಕೊಬರಿಗೆ ಕನಿಷ್ಠ ರು. 6,500 ದೊರೆಯುತ್ತಿದೆ. ಸಾವಿರ ತೆಂಗಿನ ಕಾಯಿಯನ್ನು ವರ್ಷಪೂರ್ತಿ ಒಣಗಿಸಿ ಮಾರುಕಟ್ಟೆಯ ಕುಸಿತದ ನಡುವೆಯೂ ರೈತರು ಪರದಾಡುತ್ತಿದ್ದರು. ಇವೆಲ್ಲಕ್ಕೂ ತಿಲಾಂಜಲಿ ಇಡಲು ನೇರವಾಗಿ ತೆಂಗಿನ ಕಾಯಿಯನ್ನು ಮಾರಾಟ ಮಾಡುವುದರಿಂದ ರೈತರಿಗೆ ವರ್ಷಕ್ಕೆ ಮೊದಲೇ ಹಣ ದೊರೆಯುತ್ತದೆ ಎಂದು ಕೊಂಡಜ್ಜಿ ವಿಶ್ವನಾಥ್ ಹೇಳಿದರು.
ಪ್ರತಿ ಗುರುವಾರ ಕೃಷಿ ಮಾರುಕಟ್ಟೆ ಆವರಣದಲ್ಲಿ ತೆಂಗಿನ ಕಾಯಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಪ್ರಥಮ ಪ್ರಯತ್ನದಲ್ಲೇ ಸಾವಿರ ತೆಂಗಿನ ಕಾಯಿಗೆ 9 ಸಾವಿರ ದೊರೆತಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ. ಕೃಷಿ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಗೋವಿಂದಯ್ಯ, ಸದಸ್ಯರಾದ ಶಂಕರೇಗೌಡ, ಕುಶಾಲ್ ಕುಮಾರ್, ಮಂಗಿಕುಪ್ಪೆ ಬಸವರಾಜು, ಆಂಜನಪ್ಪ, ಮುನಿಯೂರು ಚಂದ್ರು, ರಾಜ್ಯ ತೆಂಗು ಬೆಳೆಗಾರರ ಸಂಘದ ಸಂಚಾಲಕ ಎಂ.ಬಿ.ಸಿದ್ದಬಸಪ್ಪ ಮೊದಲಾದವರು ಪ್ರಾರಂಭೋತ್ವವದಲ್ಲಿ ಭಾಗವಹಿಸಿದ್ದರು.
ಚಿಕ್ಕ ವಯಸ್ಸಲೇ ದುಶ್ಟಟ ದಾಸರಾಗಬೇಡಿ: ಕಿವಿಮಾತು
ಮಧುಗಿರಿ: ಹಲವರು ಚಿಕ್ಕ ವಯಸ್ಸಿನಲ್ಲಿಯೇ ದುಶ್ಚಟಗಳಿಗೆ ಬಲಿಯಾಗಿ, ಅದರಿಂದ ಹರಡುವ ಭಯಾನಕ ರೋಗಗಳಿಗೆ ತುತ್ತಾಗುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಡಾ.ಜಿ.ಕೆ.ಜಯರಾಮ್ ಕಿವಿಮಾತು ಹೇಳಿದರು. ಇಲ್ಲಿನ ರೋಟರಿ ಸಂಸ್ಥೆ ಆಶ್ರಯದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಜಗತ್ತಿನಲ್ಲಿ ಮುಕ್ತ ಜೀವನ ನಡೆಸಲಾಗದೆ ಒತ್ತಡದ ಬದುಕಿನಿಂದಾಗಿ ದುಶ್ಚಟಗಳಿಗೆ ದಾಸರಾಗಿ ಮನುಷ್ಯ ಹತ್ತು ಹಲವು ರೋಗಗಳಿಗೆ ತುತ್ತಾಗುತ್ತಿದ್ದು ಕ್ಷಣಿಕ ಸುಖಕ್ಕಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದರು. ಈಗ್ಗೆ 34 ವರ್ಷ ಸಮಾಜದಲ್ಲಿ ಜವಾಬ್ದಾರಿಯುತವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದೇನೆ. ಕಾರಣ ವೈದ್ಯಕೀಯ ವೃತ್ತಿ ಗೌರವವಾದ ಸ್ಥಾನವಾಗಿದ್ದು ನೊಂದು, ಬೆಂದು ಬಂದ ರೋಗಿಗಳಿಗೆ ಜೀವ ಉಳಿಸುವ ಕಾಯಕವಾಗಿದೆ. 'ಡಾಕ್ಟರ್ ಡೇ' ಅಂಗವಾಗಿ ಮಧುಗಿರಿ ರೋಟರಿ ಸಂಸ್ಥೆ ವತಿಯಿಂದ ವಿಕಲಚೇತನ ನವೀನ್ಗೆ ಉಚಿತ ವ್ಹೀಲ್ಚೇರ್ ವಿತರಿಸಲಾಯಿತು. ರೋಟರಿ ಅಧ್ಯಕ್ಷ ಎಂ.ವೆಂಕಟರಾಮು, ಮಾಜಿ ಅಧ್ಯಕ್ಷೆ ಲತಾನಾರಾಯಣ್, ಎಲ್.ಪ್ರಕಾಶ್ ಬಾಬು, ಬಿ.ಎಲ್.ಮಲ್ಲಿಕಾರ್ಜುನ, ಜೆ.ಎಸ್.ಆಸ್ಪತ್ರೆ ಡಾ.ಸೋಮಶೇಖರ್, ಸುನಂದ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

