ನೌಕರರ ಸಂಘಕ್ಕೆ ಶಾಂತಿಯುತ ಚುನಾವಣೆ
ಕ.ಪ್ರ.ವಾರ್ತೆ ಕುಣಿಗಲ್ ಜು. 22
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ 29 ಸ್ಥಾನಗಳ ಪೈಕಿ 22 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, ಉಳಿದ ಏಳು ಸ್ಥಾನಗಳಿಗೆ ಸೋಮವಾರ ಪಟ್ಟಣದ ಜಿಕೆಬಿಎಂಎಸ್ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತದಾನ ನಡೆಯಿತು.
ಸೋಮವಾರ ಬೆಳಗ್ಗೆ 11 ಗಂಟೆಗೆ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಪ್ರಾರಂಭಕ್ಕೆ ಬಿರುಸುಗೊಂಡ ಮತದಾನ ಮಧ್ಯಾಹ್ನದ ವೇಳೆಗೆ ನೀರಸವಾಗಿ, ಮುಕ್ತಾಯದ ಹಂತದಲ್ಲಿ ಮತ್ತೆ ಬಿರುಸುಗೊಂಡಿತು. ಪಶುವೈದ್ಯ ಇಲಾಖೆಯಲ್ಲಿ 83 ಮತಗಳಿಗೆ 1 ಸ್ಥಾನಕ್ಕೆ ಇಬ್ಬರು, ಸಮಾಜ ಕಲ್ಯಾಣ ಇಲಾಖೆಯ 24 ಮತಗಳಿಗೆ 1 ಸ್ಥಾನಕ್ಕೆ ಇಬ್ಬರು, ತಾಲೂಕು ಪಂಚಾಯಿತಿ 62 ಮತಗಳ 1ಸ್ಥಾನಕ್ಕೆ ಇಬ್ಬರು, ರೇಷ್ಮೆ ಇಲಾಖೆಯ 215 ಮತಗಳ 1 ಸ್ಥಾನಕ್ಕೆ ಮೂವರು ಹಾಗೂ ಶಿಕ್ಷಣ ಇಲಾಖೆಯ 962 ಮತಗಳ ಮೂರು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ರಾಜಕೀಯ ಪಕ್ಷಗಳ ಚುನಾವಣೆಗೆ ಸರಿಸಮಾನವಾಗಿ ಅಭ್ಯರ್ಥಿಗಳು ವಿವಿಧ ಫ್ಲೆಕ್ಸ್, ಬ್ಯಾನರ್ ಕಟ್ಟಿ ಮತದಾರರ ಓಲೈಕೆಗೆ ಮುಂದಾದರೆ, ಕೆಲ ಅಭ್ಯರ್ಥಿಗಳ ಕುಟುಂಬದ ಸದಸ್ಯರು, ಪತ್ನಿಯರು ಸಹ ಮತಯಾಚನೆ ಕಾರ್ಯದಲ್ಲಿ ನಿರತರಾಗಿದ್ದರು. ಶಿಕ್ಷಣ ಇಲಾಖೆಯ ಮೂರು ಸ್ಥಾನಗಳಲ್ಲಿ ಎರಡು ತಂಡ ಸಿಂಡಿಕೇಟ್ ಮಾಡಿಕೊಂಡು, ಸಿಂಡಿಕೇಟ್ ಪರ ಮತಯಾಚನೆಗೆ ಮುಂದಾದರೆ ಇತರೆ ಇಬ್ಬರು ಅಭ್ಯರ್ಥಿಗಳು ಸ್ವತಂತ್ರವಾಗಿ ಅಖಾಡದಲ್ಲಿದ್ದರು. ಆರ್ಥಿಕ ಶಕ್ತಿ ಇದ್ದವರು ಶಾಮಿಯಾನ ಹಾಕಿಕೊಂಡು, ಫ್ಲೆಕ್ಸ್, ಬ್ಯಾನರ್ ಹಾಕಿ, ಅಬ್ಬರದ ಮತಯಾಚನೆಯಲ್ಲಿದ್ದರೆ, ಮತ್ತೆ ಕೆಲ ಅಭ್ಯರ್ಥಿಗಳು ಸಮೀಪದ ರಂಗಮಂದಿರದಲ್ಲಿ ಕುಳಿತು ಮತಯಾಚನೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.
ಚುನಾವಣೆಯಲ್ಲೂ ಅಭ್ಯರ್ಥಿಗಳು ಮತದಾರರ ಒಲೈಕೆಗೆ ಹಲವು ತರಹದ ಆಮಿಷ ನೀಡಿದರೆ, ಕೆಲ ಅಭ್ಯರ್ಥಿಗಳು ಮತ ಹಾಕಲು ಬರುವ ಹೋಗುವ ವಾಹನ ವ್ಯವಸ್ಥೆ ಸೇರಿದಂತೆ ಊಟಕ್ಕೆ ವ್ಯವಸ್ಥೆ ಮಾಡಲು ಹೋಟೆಲ್ ಟೋಕನ್ಗಳನ್ನು ವ್ಯವಸ್ಥಿತವಾಗಿ ವಿತರಿಸುತ್ತಿದ್ದರೆ, ಮತ್ತೆ ಕೆಲವರು ತಮ್ಮ ಬಂಧುಗಳ ಮನೆಯಲ್ಲಿ ವಿಶೇಷ ಹಬ್ಬದ ಅಡುಗೆ ಮಾಡಿಸಿ ಅಲ್ಲಿಗೆ ಕರೆದೊಯ್ದು ಭೋಜನ ವ್ಯವಸ್ಥೆ ಏರ್ಪಾಡು ಮಾಡಿದ್ದರೆ, ಮತ್ತೆ ಕೆಲವರು ಶಕ್ತ್ಯಾನುಸಾರ ನೆನಪಿನ ಕಾಣಿಕೆ ವಿತರಿಸಿದರು.
ಆಯ್ಕೆಯಾದವರು: ಸಂಜೆ ನಾಲ್ಕು ಗಂಟೆಯ ನಂತರ ಮತ ಎಣಿಕೆ ಕಾರ್ಯಪ್ರಾರಂಭಗೊಂಡು ಆರು ಗಂಟೆಯ ನಂತರ ಫಲಿತಾಂಶ ಪ್ರಕಟಗೊಂಡಿತು. ಪಶುವೈದ್ಯ ಇಲಾಖೆಯಿಂದ ಶಿವರಾಜು, ಸಮಾಜ ಕಲ್ಯಾಣ ಇಲಾಖೆಯಿಂದ ಅಶ್ವಥರಾಮಯ್ಯ, ರೇಷ್ಮೆ ಇಲಾಖೆಯಿಂದ ವೆಂಕಟೇಶ್. ಜಿ.ಆರ್ ಹಾಗೂ ತಾಲೂಕು ಪಂಚಾಯಿತಿಯಿಂದ ಕೆ.ಎಂ.ನಾರಾಯಣ ಹಾಗೂ ಶಿಕ್ಷಣ ಇಲಾಖೆಯಿಂದ ಗೋಪಾಲ್, ನಾಗರಾಜ್(ಗುರು), ಶಿವಕುಮಾರ್ ಚುನಾಯಿತರಾಗಿದ್ದಾರೆ. ಶಾಂತಿಯುತ ಮತದಾನಕ್ಕೆ ಶ್ರಮಸಿದ ಎಲ್ಲರಿಗೂ ಚುನಾವಣಾಧಿಕಾರಿ ಕೆಂಚಪ್ಪ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

