ತುಮಕೂರು

ರಾಜಕಾರಣಿಗಳ ಕೈಗೊಂಬೆಯಾಗದೆ ಸಮಸ್ಯೆಗೆ ಸ್ಪಂದಿಸಿ

Published On :

ತಿಪಟೂರು: ತಾಲೂಕಿನ ಜನತೆ ಸರ್ಕಾರಿ ಇಲಾಖೆಗಳ ವಿರುದ್ಧ ದೂರುಗಳನ್ನು ನೀಡಿದ್ದು, ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಂತೆ ವರ್ತಿಸದೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಚ್.ಬಿ. ರಮೇಶ್‌ಕುಮಾರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದು ಕೊರತೆ ಬಗ್ಗೆ ದೂರು ಪಡೆದ ನಂತರ ಮಾತನಾಡಿದ ಅವರು ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಲೋಕಾಯುಕ್ತ ಕಚೇರಿಯ ಗಮನಕ್ಕೆ ಬಂದಿದ್ದು, ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಂದ ಲಂಚ ಪಡೆದರೆ ದೂರುದಾರರು ಲೋಕಾಯುಕ್ತ ಪೊಲೀಸ್ ಕಚೇರಿಗೆ ದೂರು ನೀಡಬೇಕು. ಇದರಿಂದ ಲಂಚ ಪಡೆಯುವ ಅಧಿಕಾರಿಗಳು ಹಾಗೂ ಅವರ ಸಿಬ್ಬಂದಿ ವಿರುದ್ದ ಕ್ರಮ ಜರುಗಿಸಲು ಸಾಧ್ಯ ಎಂದರು.
ಬಸ್ ನಿಲ್ದಾಣ ಸಮೀಪ ನಗರಸಭೆಯಲ್ಲಿ ಬಾಡಿಗೆ ಪಡೆದಿರುವ ವಿಜಯ ಕಾಂಡಿಮೆಂಟ್ಸ್ ಅನಧಿಕೃತ ಗೋಡೆಯನ್ನು ಕಟ್ಟಿರುವ ಬಗ್ಗೆ ಅಂಗಡಿ ಮಾಲೀಕರು ಲೋಕಾಯುಕ್ತ ನಿರೀಕ್ಷಕರಿಗೆ ದೂರು ನೀಡಿದರು. ಈ ಬಗ್ಗೆ ನಗರಸಭೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕಂದಾಯ ಅಧಿಕಾರಿ ಈಶ್ವರಪ್ಪನವರಿಗೆ ಸೂಚನೆ ನೀಡಲಾಯಿತು.
ನಿಂತ ವೃದ್ಧಾಪ್ಯ ವೇತನ: ಕಳೆದ 3 ವರ್ಷಗಳಿಂದ ವೃದ್ಧಾಪ್ಯ ವೇತನ ನಿಂತು ಹೋಗಿರುವ ಬಗ್ಗೆ ಹೊನ್ನವಳ್ಳಿ ಹೋಬಳಿ ಗುಡಿಗೊಂಡನಹಳ್ಳಿಯ 66 ವರ್ಷದ ಹೊನ್ನಮ್ಮ ಎಂಬುವವರು ಲೋಕಾಯುಕ್ತ ನಿರೀಕ್ಷಕರಿಗೆ ವೇತನ ಮಂಜೂರು ಮಾಡುವಂತೆ ಕೋರಿದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಶಿರಸ್ತೆದಾರರಿಗೆ ದೂರು ಪ್ರತಿ ನೀಡಿ 15 ದಿನಗಳೊಳಗೆ ಕ್ರಮ ಕೈಗೊಳ್ಳುವಂತೆ ನಿರೀಕ್ಷಕರಿಗೆ ಸೂಚಿಸಿದರು. ನಿವೇಶನ ಅತಿಕ್ರಮಣವಾಗಿದೆ ಎಂದು ಹಿಂಡಿಸ್ಕೆರೆಯ ಯೋಗಾನಂದ ಎಂಬುವವರು ಅತಿಕ್ರಮಣಕಾರರ ವಿರುದ್ದ ದೂರು ನೀಡಿದ್ದು, ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತ ನಿರೀಕ್ಷಕರಿಗೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿದ್ದು, ಅದನ್ನು ಸರ್ಕಾರ ವಾಪಸ್ಸು ಪಡೆಯಬೇಕೆಂದು ತರಕಾರಿ ನಾಗರಾಜು ಲೋಕಾಯುಕ್ತ ನಿರೀಕ್ಷಕರಿಗೆ ಮನವಿ ಮಾಡಿದರು. ನೊಣವಿನಕೆರೆಯಲ್ಲಿ ಷಣ್ಮುಖಪ್ಪ ಎಂಬುವವರಿಗೆ ಸೇರಿದ ಹಳೆಮನೆಯ ಗೋಡೆ ಶಿಥಿಲಗೊಂಡಿದ್ದು ಪಕ್ಕದಲ್ಲಿ ವಾಸಿಸುವ ತಮ್ಮ ಮನೆಗೆ ಹಾನಿಯಾಗುವ ಸಂಭವವಿದ್ದು, ಗ್ರಾ.ಪಂ ಪಿಡಿಓ ಕ್ರಮ ಜರುಗಿಸಬೇಕೆಂದು ನಿವೃತ್ತ ಉಪನ್ಯಾಸಕ ಎಲ್.ಎಲ್. ವಿಶ್ವೇಶ್ವರಯ್ಯ ಲೋಕಾಯುಕ್ತರಿಗೆ ದೂರು ನೀಡಿದರು. ತಾ.ಪಂ. ಅಭಿವೃದ್ಧಿ ಅಧಿಕಾರಿ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.