ಶವಸಂಸ್ಕಾರ ಸ್ಥಳ ವಿವಾದವಿಂದು ಇತ್ಯರ್ಥ?
ಕ.ಪ್ರ.ವಾರ್ತೆ ತುಮಕೂರು ಜು. 24
ಕಳೆದ 2 ವಾರಗಳಿಂದ ತೀವ್ರ ಕುತೂಹಲ ಕೆರಳಿಸಿರುವ ಪಟ್ಟನಾಯಕನಹಳ್ಳಿಯ ಶವಸಂಸ್ಕಾರ ಸ್ಥಳ ವಿವಾದ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜು. 25 ರಂದು ನ್ಯಾಯ ತೀರ್ಮಾನ ಸಭೆ ಏರ್ಪಡಿಸಲಾಗಿದೆ. ಶವಸಂಸ್ಕಾರಕ್ಕೆ ಅವಕಾಶ ನೀಡದ ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮಿಗಳ ವಿರುದ್ಧ ಹಾಗೂ ಪರ ಪ್ರತಿಭಟನೆಗಳು ನಡೆದಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಶವಸಂಸ್ಕಾರಕ್ಕೆ ಜಾಗ ನೀಡಬೇಕೆಂದು ಒತ್ತಾಯಿಸುತ್ತಿರುವ ಸಿಡಿಯಜ್ಜನಪಾಳ್ಯದ ವಂಶಸ್ಥರು ಹೇಳಿರುವಂತೆ, ಅವರ ಪೂರ್ವಿಕರು ದಾನ ನೀಡಿದ ಸುಮಾರು 250 ಕ್ಕೂ ಹೆಚ್ಚು ಎಕರೆ ಪಟ್ಟನಾಯಕನಹಳ್ಳಿ ಮಠದ ಸ್ವತ್ತಾಗಿದೆ. ಈ ಜಾಗದಲ್ಲೇ ಕನಿಷ್ಠ 2 ಎಕರೆ ಜಾಗವನ್ನು ತಮ್ಮ ವಂಶಸ್ಥರ ಶವಸಂಸ್ಕಾರಕ್ಕೆ ಬಿಟ್ಟು ಕೊಡಬೇಕೆಂದು ದಾಖಲೆಗಳಲ್ಲಿ ಹೇಳಲಾಗಿದ್ದು, ಅದರಂತೆ ಒತ್ತಾಯ ಮಾಡುತ್ತಲೇ ಬಂದಿರುವುದಾಗಿ ತಿಳಿಸಿದ್ದಾರೆ. ಕಳೆದ ಜು. 8 ರಂದು ನಿಧನರಾದ ಸಿಡಿಯಜ್ಜನಪಾಳ್ಯದ ಸೋಮಲಿಂಗಯ್ಯನವರ ವಂಶಸ್ಥೆ ಜಯಮ್ಮನವರ ಶವಸಂಸ್ಕಾರ ವಿವಾದ ಮಠದ ನಂಜಾವಧೂತ ಸ್ವಾಮಿಗಳೊಂದಿಗೆ ಮಾತಿನ ಚಕಮಕಿ, 144 ಸೆಕ್ಷನ್ ಹೇರಿಕೆ, ಡಿಸಿ, ಎಸ್ಪಿ ಮಧ್ಯಸ್ಥಿಕೆಯೊಂದಿಗೆ ಜು. 9 ರಂದು ಅಂತ್ಯಗೊಂಡಿತ್ತು.
ಈ ಮಧ್ಯೆ ನೂತನ ಜಿಲ್ಲಾಧಿಕಾರಿ ಸತ್ಯಮೂರ್ತಿ, ತಾವು ಹೊಸದಾಗಿ ಜಿಲ್ಲೆಗೆ ಬಂದಿರುವುದಾಗಿಯೂ, ಮಠ ಹಾಗೂ ಸೋಮಲಿಂಗಯ್ಯನವರ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ, ಸಮಗ್ರವಾದ ದಾಖಲೆಗಳನ್ನು ಪರಿಶೀಲಿಸಬೇಕಿದೆ. ಹೀಗಾಗಿ ಎಲ್ಲ ಕಡತಗಳ ಪರಿಶೀಲನೆಯ ನಂತರ, ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಎರಡೂ ಕಡೆಯ ಮುಖಂಡರು ತಾಳ್ಮೆಯಿಂದಿರಬೇಕು. ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸವನ್ನು ಯಾರೂ ಮಾಡಬಾರದು ಎಂದು ತಿಳಿಸಿದ್ದರು. ಅದರಂತೆ ಇದೇ ತಿಂಗಳ 17 ರಂದು ಸಭೆ ನಿರ್ಧಾರವಾಗಿತ್ತು. ನಂತರ ಕಾರಣಾಂತರಗಳಿಂದ ಸಭೆಯನ್ನು ಜು. 25 ಕ್ಕೆ ಮುಂದೂಡಲಾಗಿತ್ತು.
ಪಾದಯಾತ್ರೆ: ಈ ಮಧ್ಯೆ ಸಿಡಿಯಜ್ಜನಪಾಳ್ಯದ ವಂಶಸ್ಥರು ಹಾಗೂ ಅಹಿಂದ ಮುಖಂಡರು, ಕಾರ್ಯಕರ್ತರೊಂದಿಗೆ ನ್ಯಾಯ ದೊರಕಿಸಿಕೊಡುವಂತೆ ಪಟ್ಟನಾಯಕನಹಳ್ಳಿಯಿಂದ ತುಮಕೂರಿಗೆ ಜು. 14 ರಂದು ಸಾವಿರಾರು ಮಂದಿಯೊಂದಿಗೆ ಪಾದಯಾತ್ರೆ ಕೈಗೊಂಡಿದ್ದರು. ಜು. 15 ರಂದು ತುಮಕೂರಿಗೆ ಆಗಮಿಸಿದ ಪಾದಯಾತ್ರೆ ನಗರದಲ್ಲಿ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ, ಡಿಸಿ ಛೇಂಬರ್‌ಗೆ ನುಗ್ಗಿ ನ್ಯಾಯ ಕೇಳುವವರೆಗೂ ಹೋಗಿತ್ತು. ಜಿಲ್ಲಾಧಿಕಾರಿಗಳು ಕೂಡ ಬೆಚ್ಚಿ ಬಿದ್ದಿದ್ದರು. ಪರಿಸ್ಥಿತಿಯನ್ನು ಶಾಂತರೀತಿಯಿಂದಲೇ ನಿಭಾಯಿಸಿದ ಪೊಲೀಸರು, ಜಿಲ್ಲಾಧಿಕಾರಿಗಳು ಜು. 25 ಕ್ಕೆ ಸಭೆ ನಿಗದಿಪಡಿಸಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದರು.
ಪ್ರತಿ ಪಾದಯಾತ್ರೆ: ಅಹಿಂದ ಮುಖಂಡರು, ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿದ್ದಕ್ಕೆ ಪ್ರತಿಯಾಗಿ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠದ ಭಕ್ತರು ಹಾಗೂ ಒಕ್ಕಲಿಗ ಸಮೂಹ ಶಿರಾಕ್ಕೆ ಜು. 22 ರಂದು ಪಾದಯಾತ್ರೆ ನಡೆಸಿ, ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮಠದ ಆವರಣದಲ್ಲಿ ಶವಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿತು. ಈ ಮಧ್ಯೆ ಜು. 23 ರಂದು ಆದಿಚುಂಚನಗಿರಿಯ ಬೆಂಗಳೂರಿನ ಶಿಕ್ಷಣ ಸಂಸ್ಥೆಯ ಮೇಲೆ ಐಟಿ ದಾಳಿ ವಿರೋಧಿಸಿ ಜಿಲ್ಲಾ ಒಕ್ಕಲಿಗರ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ನಂಜಾವಧೂತ ಸ್ವಾಮಿಗಳ ಪರ ಪ್ರತಿಭಟನೆಯೂ ನಡೆಯಿತು. ಜಿಲ್ಲಾಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಲಾಯಿತು.
ಹಳೇ ವಿವಾದ: ಶವಸಂಸ್ಕಾರ ಜಾಗ ವಿವಾದ ಹಳೆಯದು. ಆದರೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಹೊಸಬರು. ಅವರಿಗೆ ಜಾಗದ ಸಮಸ್ಯೆ ಅರಿಯಲು ಕನಿಷ್ಠ 15 ದಿನಗಳ ಕಾಲ ಸಮಸ್ಯೆ ಸಿಕ್ಕಿದೆ. ಜಿಲ್ಲಾಧಿಕಾರಿಗಳ ತೀರ್ಮಾನ ಏನು ಎಂಬುದನ್ನು ಕಾದು ನೋಡಬೇಕಿದೆ.
ಕಾನೂನು ಸಚಿವರ ಕ್ಷೇತ್ರ: ಎಲ್ಲಕ್ಕಿಂತ ಮುಖ್ಯವಾಗಿ ಪಟ್ಟನಾಯಕನಹಳ್ಳಿ ಕ್ಷೇತ್ರ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಪ್ರತಿನಿಧಿಸುವ ಕ್ಷೇತ್ರವಾಗಿರುವುದು ಗಮನಾರ್ಹ.
ಸತ್ಯ ಎತ್ತಿ ಹಿಡಿಯುವರೇ?: ನೂತನ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರೇ ಹೇಳಿಕೊಂಡಿರುವಂತೆ ಎಲ್ಲ ಕಡತಗಳ ಪರಿಶೀಲನೆ ನಂತರ ಯಾವುದು ಸತ್ಯ, ಯಾವುದು ಮಿಥ್ಯ ಅನ್ನೋದನ್ನು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಸತ್ಯಮೂರ್ತಿ ಸತ್ಯ ಎತ್ತಿ ಹಿಡಿಯುವರೇ ಅಥವಾ ಒತ್ತಡಕ್ಕೆ ಒಳಗಾಗುವರೇ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

