ಶಾಲೆಗೆ ಚಕ್ಕರ್ ಹಾಕಿ ರಾಜಕಾರಣ ಮಾಡೋ ಶಿಕ್ಷಕ!
ಕ.ಪ್ರ.ವಾರ್ತೆ ಚಿಕ್ಕನಾಯಕನಹಳ್ಳಿ ಜು. 25
ಕಳೆದ ಮೂರು ವರ್ಷಗಳಿಂದ ಶಾಲೆಗೆ ಹಾಜರಾಗದೆ, ತಮಗೆ ಬೇಕಾದಾಗ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ ಕರ್ತವ್ಯ ಲೋಪವೆಸಗಿರುವ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳದ ಕ್ಷೇತ್ರಶಿಕ್ಷಣಾಧಿಕಾರಿ ವಿರುದ್ಧ ಗ್ರಾಮಸ್ಥರು ಗುರುವಾರ ಲೋಕಾಯುಕ್ತ ನಿರೀಕ್ಷಕರಿಗೆ ದೂರು ಸಲ್ಲಿಸಿದರು.
ತಾಲೂಕಿನ ಹುಳಿಯಾರು ಹೋಬಳಿ ಹಿಂದುಳಿದ ಪ್ರದೇಶವಾದ ಹೊಯ್ಸಲಕಟ್ಟೆ ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆ ಸಹಶಿಕ್ಷಕರಾದ ಆರ್.ಪರಶಿವಮೂರ್ತಿಯವರು ಕಳೆದ ಮೂರು ವರ್ಷಗಳಿಂದ ಶಾಲೆಗೆ ಹಾಜರಾಗಿರುವುದಿಲ್ಲ. ಆದರೆ ತಮಗೆ ಬೇಕಾದಾಗ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡುತ್ತಿದ್ದು, ಹಿಂದುಳಿದ ಪ್ರದೇಶವಾದ ನಮ್ಮ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಪಾಠಪ್ರವಚನಗಳಿಂದ ವಂಚಿತರಾಗಿದ್ದಾರೆ. ಆರ್.ಪರಶಿವಮೂರ್ತಿಯವರು ರಾಜಕೀಯ ಪ್ರಭಾವಿಯಾಗಿದ್ದು, ಮುಖ್ಯಶಿಕ್ಷಕರು ಸಹ ಅವರ ಮೇಲೆ ಕ್ರಮಕೈಗೊಳ್ಳದೆ ಮಕ್ಕಳಿಗೆ ಅನ್ಯಾಯ ಮಾಡಿರುತ್ತಾರೆ. ಈ ಬಗ್ಗೆ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಿ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ದೂರುನೀಡಿದ್ದರು ಸಹ ಆರ್.ಪರಶಿವಮೂರ್ತಿಯವರ ಮೇಲೆ ಕ್ರಮಕೈಗೊಳ್ಳದೆ ಕ್ಷೇತ್ರಶಿಕ್ಷಣಾಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದಾರೆ. ಆದ್ದರಿಂದ ಶಾಲೆಗೆ ಬಾರದ ಸಹಶಿಕ್ಷಕ ಮತ್ತು ಕರ್ತವ್ಯ ಲೋಪವೆಸಗಿರುವು ಕ್ಷೇತ್ರಶಿಕ್ಷಣಾಧಿಕಾರಿಗಳಾದ ಸಾ.ಚಿ. ನಾಗೇಶ್ ಇವರ ಮೇಲೆ ಕ್ರಮಕೈಗೊಳ್ಳುವಂತೆ ಶಾಲೆಯ 32 ವಿದ್ಯಾರ್ಥಿಗಳು, 30ಮಂದಿ ಪೋಷಕರು, ಎಸ್ಡಿಎಂಸಿ ಎಲ್ಲಾ ಅಧ್ಯಕ್ಷರು ಹಾಗು ಸದಸ್ಯರು, 34 ಮಂದಿ ಗ್ರಾಮಸ್ಥರ ಸಹಿಯನ್ನೊಳಗೊಂಡ ದೂರನ್ನು ಚಂದ್ರಶೇಖರ್ ಮತ್ತು ನಾಗರಾಜುರವರು ಲೋಕಾಯುಕ್ತರಿಗೆ ನೀಡಿ ಕ್ರಮಕ್ಕೆ ಮನವಿ ಮಾಡಿದರು.
ಆರ್.ಪರಶಿವಮೂರ್ತಿಯವರು ಮೂರು ವರ್ಷಗಳಿಂದ ಶಿಕ್ಷಕರ ಸಂಘ ಮತ್ತು ನೌಕರರ ಸಂಘದ ಅಧ್ಯಕ್ಷರಾಗಿದ್ದುಕೊಂಡು ಸದಾ ರಾಜಕೀಯ ಚಟುವಟಿಕೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಇವರಿಗೆ ಕರ್ತವ್ಯಕ್ಕೆ ಹಾಜರಾಗಲು ಸಮಯದ ಅಭಾವ, ಹಾಗಾಗಿ ವಾರಕ್ಕೊಮ್ಮೆ, ಎರಡು ವಾರಕ್ಕೊಮ್ಮೆ ಶಾಲೆಗೆ ಬಂದು ಗೈರುಹಾಜರಿಯ ದಿನಗಳಿಗೆ ಸಹಿ ಮಾಡಿ ವೇತನ ಪಡೆಯುತ್ತಾರೆ. ರಾಜಕೀಯವಾಗಿ ಪ್ರಭಾವ ಹೊಂದಿರುವ ಇವರನ್ನು ಇತರೆ ಶಿಕ್ಷಕರು ಪ್ರಶ್ನಿಸುವುದಿಲ್ಲ. ಈ ಬಗ್ಗೆ ಗ್ರಾಮಸ್ಥರು ಶಾಲೆಗೆ ಬೀಗಹಾಕಿ ಉಗ್ರ ಪ್ರತಿಭಟನೆಯನ್ನು ಸಹ ಮಾಡಿದ್ದರು. ಆದರು ಇವರ ರಾಜಕೀಯ ಪ್ರಭಾವದ ಮುಂದೆ ಕ್ಷೇತ್ರಶಿಕ್ಷಣಾಧಿಕಾರಿ ಅಧಿಕಾರ ಕ್ರಮಕೈಗೊಳ್ಳಲು ವಿಫಲವಾಗಿದೆ. ಆದ್ದರಿಂದ ಕೊನೆಯ ಪ್ರಯತ್ನವಾಗಿ ಲೋಕಾಯುಕ್ತರಿಗೆ ದೂರು ನೀಡುತ್ತಿದ್ದೇವೆ ಎಂದು ಗ್ರಾಮಸ್ಥರು ದೂರಿದರು.
15 ದಿನದ ಗಡುವು: ದೂರು ಸ್ವೀಕರಿಸಿದ ಲೋಕಾಯುಕ್ತ ನಿರೀಕ್ಷಕರಾದ ಗೌತಮ್ರವರು, ಹಿಂದುಳಿದ ಪ್ರದೇಶವಾಗಲಿ,ಮುಂದುವರಿದ ಪ್ರದೇಶವಾಗಲಿ, ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು. ಆದ್ದರಿಂದ ಸದರಿ ಶಿಕ್ಷಕ ಪ್ರತಿನಿತ್ಯ ಶಾಲೆಗೆ ಹಾಜರಾಗುವಂತೆ ನೋಟೀಸ್ ನೀಡಿ ಸಮಸ್ಯೆಯನ್ನು 15 ದಿವಸಗಳಲ್ಲಿ ಪರಿಹರಿಸಬೇಕೆಂದು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಜೆ.ಸಿ.ಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಜಾಗದಲ್ಲಿ ಗೋಡೇಕೆರೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ತರಬೇನಹಳ್ಳಿಗೆ ಕುಡಿಯುವ ನೀರಿನ ಸರಬರಾಜಿಗಾಗಿ ಕೊಳವೆ ಬಾವಿ ಕೊರೆದಿದ್ದಾರೆ. ಆದರೆ ಕೊಳವೆ ಬಾವಿ ನಮ್ಮ ಜಮೀನಿನಲ್ಲಿದೆ. ಆದ್ದರಿಂದ ನಮ್ಮ ಜಮೀನಿನಲ್ಲಿರುವ ಕೊಳವೆ ಬಾವಿಗೆ ಪಂಪುಮೋಟರು ಅಳವಡಿಸದಂತೆ ತಡೆಹಿಡಿಯ ಬೇಕೆಂದು ಗೋವಿಂದರಾಜು ಅಹವಾಲು ಸಲ್ಲಿಸಿದರು. ಈ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಚರ್ಚಿಸಿದ ನಂತರ, ಕುಡಿಯುವ ನೀರಿನ ಉದ್ದೇಶಕ್ಕಾಗಿ ಖಾಸಗಿ ಒಡೆತನದಲ್ಲಿರುವ ಕೊಳವೆ ಬಾವಿಗಳನ್ನು ವಶಪಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಜಾಗದ ಗಡಿ ಬಗ್ಗೆ ನಿಖರ ಮಾಹಿತಿಯಿಲ್ಲದೆ ಕೊಳವೆ ಬಾವಿ ಕೊರೆಯಲಾಗಿದೆ ಎಂದರು ಜಿಪಂ ಎಇಇರವರು. ಕೊನೆಯಲ್ಲಿ ಲೋಕಾಯುಕ್ತರು, ಪರಿಹಾರ ನೀಡಿ ಕೊಳವೆ ಬಾವಿ ಮಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದ್ದಲ್ಲಿ ಕಾನೂನು ಪ್ರಕಾರ ಕ್ರಮಕೈಗೊಳ್ಳಿ ಎಂದು ಸೂಚಿಸಿದರು. ಶೆಟ್ಟೀಕೆರೆ ಗ್ರಾಮಂಚಾಯ್ತಿಯವರು ಕ್ರಯಪತ್ರದ ಪ್ರಕಾರ ನಿವೇಶನದ ಖಾತೆ ಮಾಡಿಕೊಟ್ಟಿಲ್ಲ ಎಂದು ಮಾಕುವಳ್ಳಿಯ ಲಿಂಗರಾಜುರವರು ನೀಡಿದ ದೂರಿಗೆ ಸದರಿ ಗ್ರಾಮಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿ, ಕ್ರಯಪತ್ರಕ್ಕೂ ಹಾಲಿನಿವೇಶನದ ಅಳತೆಗು ಸಾಮ್ಯವಿಲ್ಲದಿರುವುದರಿಂದ ಖಾತೆಯನ್ನು ಪೆಂಡಿಂಗ್ ಇಡಲಾಗಿದೆ. ಇವರು ಹೇಳುವ ಪ್ರಕಾರ ಸ್ಥಳದಲ್ಲಿ ಅಳತೆಯಿಲ್ಲದಿರುವುದರಿಂದ ಖಾತೆಮಾಡಲು ಸಾಧ್ಯವಿಲ್ಲ ಎಂದು ಅಭಿವೃದ್ಧಿ ಅಧಿಕಾರಿ ತಿಳಿಸಿದರು.
ಉಪ ತಹಸೀಲ್ದಾರ್ ವಿರುದ್ಧ ದೂರು: ತಿಮ್ಮನಹಳ್ಳಿಯ ರಂಗಲಕ್ಷ್ಮಮ್ಮ, ತನ್ನ ತಂದೆ ಜಮೀನು ನೀಡುತ್ತಿದ್ದಾರೆ. ಆದರೆ ನೋಂದಣಿಗೆ ಅಗತ್ಯ ದಾಖಲೆಯಾದ ಕೃಷಿ ಕುಟುಂಬ ದೃಢೀಕರಣ ನೀಡಲು ಕಂದಿಕೆರೆ ಉಪತಹಶೀಲ್ದಾರ್ ಸುಮತಿಯವರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರುನೀಡಿದರು. ಸಭೆಯಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಚಿಕ್ಕದಾಸಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್, ಜಲಾನಯನ ಅಧಿಕಾರಿ ಪುರುಷೋತ್ತಮ್, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ, ಆಹಾರ ಶಿರಸ್ತೇದಾರ್ ಮಂಜುನಾಥ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

