ತುಮಕೂರು

ಹತ್ತಾರು ಜನರ ಸೌಲಭ್ಯ ಒಬ್ಬನೇ ಪಡೆದ ಬಕಾಸುರ

Published On :

ಕ.ಪ್ರ. ವಾರ್ತೆ ತುರುವೇಕೆರೆ ಜು. 26
ತಾಲೂಕಿನ ದಲಿತ ಮುಖಂಡ ಬೀಚನಹಳ್ಳಿ ರಾಮಣ್ಣ ಎಂಬುವರು ಬಡಜನರ ಹತ್ತಾರು ಸೌಲಭ್ಯಗಳನ್ನು ತನ್ನ, ಕುಟುಂಬಕ್ಕೆ ಒದಗಿಸಿಕೊಂಡಿದ್ದಾರೆ ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್ ಗೌತಮ್‌ರಿಗೆ ದೂರು ಸಲ್ಲಿಸಿದ ಪ್ರಸಂಗ ಶುಕ್ರವಾರ ನಡೆಯಿತು.
ಸಾರ್ ಈತ ದಲಿತ ಮುಖಂಡ. ಬಡ ಜನರಿಗಾಗಿ ಸರ್ಕಾರ ನೀಡಿರೋ ಸವಲತ್ತುಗಳನ್ನು ತನ್ನ ಕುಟುಂಬಕ್ಕೇ ಮೀಸಲಿರಿಸಿಕೊಂಡು ಸರ್ಕಾರಕ್ಕೆ ಹಾಗೂ ಬಡ ಜನರಿಗೆ ಮೋಸ ಮಾಡಿದ್ದಾನೆ. 1996-97 ನೇ ಸಾಲಿನಲ್ಲಿ ತನ್ನ ತಂದೆಯವರ ಹೆಸರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ಉಚಿತವಾಗಿ ಪಂಪ್‌ಸೆಟ್, 1999-2000 ರಲ್ಲಿ ತನ್ನ ಹೆಸರಿನಲ್ಲೇ ಪಶುಸಂಗೋಪನಾ ಇಲಾಖಾ ವತಿಯಿಂದ ಕೋಳಿ ಸಾಕಣಾ ಘಟಕ ಮಾಡುವುದಾಗಿ 80 ಸಾವಿರ ರು. ಪಡೆಯಲಾಗಿದೆ. 05-06 ನೇ ಸಾಲಿನಲ್ಲಿ ತಂದೆ ಯವರ ಹೆಸರಿನಲ್ಲಿ ಅಂಬೇಡ್ಕರ್ ಅಭಿವೃಧ್ಧಿ ನಿಗಮದದಲ್ಲಿ ಉಚಿತ ಕೊಳವೆ ಬಾವಿ, 08-09 ನೇ ಸಾಲಿನಲ್ಲಿ ತಾಯಿಯ ಹೆಸರಿನಲ್ಲಿ ಹುಲ್ಲೇಕೆರೆ ಗ್ರಾಮ ಪಂಚಾಯ್ತಿಯಿಂದ ಉಚಿತ ಮನೆ, 09-10 ಮತ್ತು 10-11 ನೇ ಸಾಲಿನಲ್ಲಿ ತಂದೆಯ ಹೆಸರಿನಲ್ಲಿ ತೋಟಗಾರಿಕಾ ಇಲಾಖಾ ವತಿಯಿಂದ ಹನಿ ನೀರಾವರಿಗೆಂದು ಸುಮಾರು 15 ಸಾವಿರ ರು., 10-11 ನೇ ಸಾಲಿನಲ್ಲಿ ತಾಯಿಯ ಹೆಸರಿನಲ್ಲಿ ಅಂಬೇಡ್ಕರ್ ಅಭಿವೃಧ್ಧಿ ನಿಗಮದಿಂದ ಹಸು ಸಾಕಣೆಗೆಂದು 17.500 ರು., 10-11 ನೇ ಸಾಲಿನಲ್ಲೇ ತಾಯಿ ಹಾಗೂ ಹೆಂಡತಿಯ ಹೆಸರಿನಲ್ಲಿ ಮೈಕ್ರೋ ಕ್ರೆಡಿಟ್ ಕಿರುಸಾಲ ಯೋಜನೆಯಡಿ ಸುಮಾರು 10 ಸಾವಿರ ರು., 10-11 ನೇ ಸಾಲಿನಲ್ಲೇ ತಂದೆಯ ಹೆಸರಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆಯಲ್ಲಿ ಉಚಿತ ಕೊಳವೆ ಬಾವಿ ಪಡೆದಿದ್ದಾರೆ.
ಸುಮಾರು ಮೂರುವರೆ ಲಕ್ಷ ರು.ಗಳ ಮೌಲ್ಯ: ತಾನೇ ಸವಲತ್ತು ಪಡೆದಿದ್ದರೂ ಬೇರೆ ಹೋಬಳಿಯಲ್ಲಿನ ವಿಳಾಸ ನೀಡಿ ಸೌಲಭ್ಯ ಪಡೆದುಕೊಳ್ಳಲಾಗಿದೆ. 11-12 ನೇ ಸಾಲಿನಲ್ಲಿ ತನ್ನ ಹೆಸರಿನಲ್ಲೇ ಅಂಬೇಡ್ಕರ್ ಅಭಿವೃಧ್ಧಿ ನಿಗಮದ ವತಿಯಿಂದ ಚರ್ಮಗಾರಿಕೆ ಯೋಜನೆಯಡಿ ಒಂದುವರೆ ಲಕ್ಷ ರು. ಹಣ, 12 -13 ನೇ ಸಾಲಿನಲ್ಲಿ ತಂದೆಯ ಹೆಸರಿನಲ್ಲಿ ತೋಟಗಾರಿಕಾ ಇಲಾಖೆಯಿಂದ ಹನಿ ನೀರಾವರಿಗೆಂದು 14 ಸಾವಿರ ರು. ಸಹಾಯ ಧನ. ತನ್ನ ತಂದೆ, ಹೆಂಡತಿ ಹಾಗೂ ತನ್ನ ಹೆಸರಿನಲ್ಲೇ 3 ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ ತಾನು ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದರೂ ಲಂಬಾಣಿ ಎಂದು ಸುಳ್ಳು ದಾಖಲಾತಿ ನೀಡಿ ಸಹಾಯ ಧನ ಪಡೆದಿದ್ದಾನೆ.
ಹೀಗೆ ಬೀಚನಹಳ್ಳಿ ರಾಮಣ್ಣ ಎಂಬುವರ ವಿರುದ್ಧ ಮಾಹಿತಿ ಹಕ್ಕಿನ ಅಡಿ ಬೀಚನಹಳ್ಳಿ ಗ್ರಾಮದ ಕಿರಣ್ ಕುಮಾರ್ ಲೋಕಾಯುಕ್ತ ಇನ್ಸ್ ಪೆಕ್ಟರ್ ಗೌತಮ್‌ರಿಗೆ ದಾಖಲಾತಿ ಸಹಿತ ವಿವರಿಸುತ್ತಿದ್ದಂತೆ ಸ್ವತಃ ಗೌತಮ್ ಬೆಚ್ಚಿ ಬಿದ್ದರು. ಇಷ್ಟೊಂದು ಸರ್ಕಾರಿ ಸವಲತ್ತುಗಳು ಏಕ ವ್ಯಕ್ತಿಯ ಪಾಲಾಗಿದ್ದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದರು.
ಬೆಂಬಲಿಗರೊಂದಿಗೆ ಹಲ್ಲೆ: ಇಷ್ಟೆಲ್ಲಾ ಹಗರಣಗಳು ನಡೆಯಲು ಅಧಿಕಾರಿಗಳೂ ಸಹ ಕಾರಣ ಸಾರ್ ಎಂದು ಕಿರಣ್ ಕುಮಾರ್ ಲೋಕಾಯುಕ್ತರ ಮುಂದೆ ಕಿಡಿಕಾರಿದರು. ದಲಿತ ಮುಖಂಡನೆಂದು ಹೇಳಿಕೊಳ್ಳುವ ರಾಮಣ್ಣ ಮಾಡಿರುವ ಭ್ರಷ್ಟಾಚಾರದ ಬಗ್ಗೆ ತಾವು ದಲಿತ ವರ್ಗಗಳ ಕುಂದು ಕೊರತೆ ಸಭೆ ವೇಳೆ ಕೇಳುತ್ತಿದ್ದಾಗ ತನ್ನ ಬೆಂಬಲಿಗರೊಂದಿಗೆ ರಾಮಣ್ಣ ಹಲ್ಲೆ ಮಾಡಿದ ಎಂದೂ ಕಿರಣ್ ಕುಮಾರ್ ಲೋಕಾಯುಕ್ತರಿಗೆ ದೂರಿದರು. ಸೂಕ್ತ ತನಿಖೆ ನಡೆಸಿ ರಾಮಣ್ಣ ವಿರುಧ್ಧ ಕ್ರಮ ಕೈಗೊಳ್ಳಲೇಬೇಕು ಹಾಗೂ ಅಧಿಕಾರಿಗಳ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಿರಣ್ ಕುಮಾರ್ ಆಗ್ರಹಿಸಿದರು. ಪಟ್ಟಣ ಪಂಚಾಯ್ತಿಯಿಂದ ನಿರ್ಮಾಣವಾಗುತ್ತಿರುವ ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಾಣದಲ್ಲಿ ಗುತ್ತಿಗೆದಾರನಿಂದ ಬ್ಯಾಕ್ ಗ್ಯಾರಂಟಿ ಸಹಿತ ದುರುಪಯೋಗವಾಗಿದೆ. ಅಧಿಕಾರಿಗಳು ಶಾಮೀಲಾಗಿದ್ದರಿಂದ ಕೋಟ್ಯಾಂತರ ರೂಗಳನ್ನು ಅವಧಿಗೆ ಮುಂಚೆಯೇ ನೀಡಿ ವಂಚಿಸಲಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಹರೀಶ್ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು. ತಮ್ಮನ್ನು ಪ್ರಕರಣದಿಂದ ದೂರ ಇರಲು ಒತ್ತಡ, ಬೆದರಿಕೆ ಹಾಗೂ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಇದರಿಂದ ತನಗೆ ರಕ್ಷಣೆ ನೀಡಿ ಎಂದು ಲೋಕಾಯುಕ್ತ ಇನ್ಸ್ ಪೆಕ್ಟರ್ ಗೌತಮ್‌ರಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ ಸಾಲಿನಲ್ಲಿ ಬಾಕಿ ಉಳಿದಿದ್ದ 11 ದೂರುಗಳನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದು ಗೌತಮ್ ತಿಳಿಸಿದರು.

ಮಾಹಿತಿ ಹಕ್ಕು, ಲೋಕಾಯುಕ್ತ ದುರುಪಯೋಗ ಸಲ್ಲ
ತಾಲೂಕಿನಲ್ಲಿ ಮಾಹಿತಿ ಹಕ್ಕಿನ ಅಡಿ ಕೆಲವು ಮಂದಿ ಮಾಹಿತಿ ಬೇಕು ಎಂದು ಕೇಳಿ ಅದನ್ನು ಹಣ ಮಾಡಲು ಮುಂದಾಗಿರುವ ಪ್ರಕರಣಗಳು ಬೆಳೆಕಿಗೆ ಬರುತ್ತಿವೆ. ಲೋಕಾಯುಕ್ತರ ಹೆಸರಿನಲ್ಲೇ ಅಧಿಕಾರಿಗಳನ್ನು ಹೆದರಿಸಿ ಹಣ ಮಾಡುವ ಕಾಯಕ ಕೆಲವರಿಂದ ವ್ಯವಸ್ಥಿತವಾಗಿ ಆಗುತ್ತಿದೆ. ಇದನ್ನು ನಿಯಂತ್ರಿಸುವುದಾದರೂ ಹೇಗೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಲೋಕಾಯುಕ್ತ ಇನ್ಸ್ ಪೆಕ್ಟರ್ ಗೌತಮ್ ದುರುದ್ದೇಶಪೂರ್ವಕವಾಗಿ ಮಾಹಿತಿ ಹಕ್ಕನ್ನು ಬಳಸಿಕೊಳ್ಳುತ್ತಿರುವವರ ಹಾಗೂ ಲೋಕಾಯುಕ್ತರ ಹೆಸರಿನಲ್ಲಿ ಹಣ ಮಾಡುವ ದಂದೆಗೆ ಇಳಿದಿರುವವರ ಬಗ್ಗೆ ಮಾಹಿತಿಯನ್ನು ತಮಗೆ ಕೂಡಲೇ ನೀಡಬೇಕು. ನೇರವಾಗಿ ಅವರುಗಳ ಬಗ್ಗೆ ಮಾಹಿತಿ ನೀಡಿದರೂ ಉತ್ತಮ ಅಥವಾ ಗೌಪ್ಯವಾಗಿಯಾದರೂ ಅವರುಗಳ ಹೆಸರನ್ನು ತಮಗೆ ತಿಳಿಸಿದರೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ತಮ್ಮ ಕಚೇರಿಯ ದೂರವಾಣಿ ಸಂಖ್ಯೆ 0816-2278540 ಗೆ ಕರೆ ಮಾಡಲು ಸೂಚಿಸಿದರು. ತಾಲೂಕಿನ ಅಧಿಕಾರಿಗಳೂ ಇಂತಹ ಗೊಡ್ಡು ಬೆದರಿಕೆಗೆ ಜಗ್ಗದೇ ದೂರು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.  ತಹಸೀಲ್ದಾರ್ ಜಿ.ಪಿ.ಮಂಜೇಗೌಡ ಉಪಸ್ಥಿತರಿದ್ದರು. ತಾಲೂಕಿನ ಬಹುತೇಕ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.