ತೆಂಗಿನ ಉತ್ಪನ್ನಗಳ ಹೆಚ್ಚು ಬಳಸಿ: ಸಚಿವ ಜಯಚಂದ್ರ
ಕ.ಪ್ರ.ವಾರ್ತೆ ತುಮಕೂರು ಜು.27
ಸತತ ಬರಗಾಲ, ಅಂತರ್ಜಲ ಕುಸಿತ, ಶಾಶ್ವತ ಯೋಜನೆ ಕೊರತೆ, ನುಸಿಪೀಡೆ ರೋಗ, ಕಪ್ಪುತಲೆ ಹುಳ, ಕಾಂಡದಲ್ಲಿ ನೀರು ಸುರಿಯುವಿಕೆ ಮುಂತಾದ ಕಾರಣಗಳಿಂದ ತೆಂಗು ಬೆಳೆ ಹಾಳಾಗಿ, ರೈತ ತೀವ್ರ ಸಂಕಷ್ಟದಲ್ಲಿರುವ ಇಂದಿನ ಪರಿಸ್ಥಿತಿಯಲ್ಲಿ ತೆಂಗು ನಾರಿನ ಉದ್ಯಮ ಒಂದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ತಿಳಿಸಿದರು.
ಅವರು ಶನಿವಾರ ಕಾಯರ್ ಬೋರ್ಡ್ ಆಶ್ರಯದಲ್ಲಿ ತುಮಕೂರಿನ ಎಸ್.ಐ.ಟಿ. ಕಾಲೇಜು ಆವರಣದ ಎಂ.ಬಿ.ಎ. ಕಾಲೇಜಿನ ಸಭಾಂಗಣದಲ್ಲಿ ತೆಂಗು ನಾರಿನ ಉದ್ಯಮದ ಹೊಸ ತಂತ್ರಜ್ಞಾನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ತೆಂಗು ನಾರಿನ ಉದ್ಯಮಕ್ಕೆ 24 ಗಂಟೆ ವಿದ್ಯುತ್ ಪೂರೈಸಲು ತಾವು ಕ್ರಮವಹಿಸುವುದಾಗಿ ತಿಳಿಸಿದ ಸಚಿವರು, ಅಂತೆಯೇ ಪ್ರತ್ಯೇಕ ಫೀಡರ್ ಒದಗಿಸಲೂ ತಾವು ಮುಂದಾಗುವುದಾಗಿ ಭರವಸೆ ನೀಡಿದರು.
ಇಂದು ಜಿಲ್ಲೆಯ ಮೂರುವರೆಯಿಂದ ನಾಲ್ಕು ಲಕ್ಷ ಎಕರೆಯಲ್ಲಿ ತೆಂಗು ಬೆಳೆಯಲಾಗುತ್ತಿದೆ. ತೆಂಗಿನ ಒಂದೊಂದು ಭಾಗವೂ ಮನುಷ್ಯನಿಗೆ ಅತ್ಯಂತ ಉಪಕಾರಿ. ತೆಂಗಿನ ಉತ್ಪನ್ನಗಳ ಉಪಕಸುಬುಗಳನ್ನು ನಮ್ಮ ರೈತರು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಚೇತರಿಸಿಕೊಳ್ಳಬಹುದು ಎಂದು ತಿಳಿಸಿದರು.
ಪ್ರೋಟೀನ್, ಕಾರ್ಬೋಹೈಡ್ರೆಟ್ ಸೇರಿದಂತೆ ಬಹು ಪೌಷ್ಟಿಕಾಂಶಗಳನ್ನು ಒಳಗೊಂಡಂತಹ ಎಳನೀರಿನ ಸೇವನೆ ಆರೋಗ್ಯಕ್ಕೆ ಬಹಳ ಉತ್ತಮ. ಎಳನೀರನ್ನು ಪ್ರಚಾರಕ್ಕೆ ತರಬೇಕು. ಕೇರಳ, ಅಂಡಮಾನ್ ಮುಂತಾದ ಪ್ರದೇಶದಲ್ಲಿ ಕಾಫಿ, ಟೀ ಬದಲಿಗೆ ಎಳನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲಾಗುತ್ತಿದೆ. ನಮ್ಮಲ್ಲೂ ಪ್ರತಿಯೊಂದು ಸಭೆ ಸಮಾರಂಭಗಳಲ್ಲಿ ಎಳನೀರನ್ನು ವಿತರಿಸುವ ಕಾರ್ಯಕ್ರಮವಾಗಬೇಕು ಎಂದರು. ತೆಂಗಿನ ನೀರನ್ನು ರಾಷ್ಟ್ರೀಯ ಪಾನೀಯ ಮತ್ತು ತೆಂಗಿನ ಕಾಯಿಯನ್ನು ರಾಷ್ಟ್ರೀಯ ಕಾಯಿ ಎಂದು ಘೋಷಿಸಿದಲ್ಲಿ ತೆಂಗಿಗೆ ಉತ್ತಮ ಬೆಲೆ ಬರುತ್ತದೆ. ಈ ನಿಟ್ಟಿನಲ್ಲಿ ತಾವು ಪ್ರಯತ್ನಿಸುವುದಾಗಿ ತಿಳಿಸಿದ ಸಚಿವರು, ಎಳನೀರು ಸಂಜೀವಿನಿ ಇದ್ದಹಾಗೆ. ಎಳನೀರಿನ, ತೆಂಗಿನ ಎಣ್ಣೆಯ ಹೆಚ್ಚಿನ ಬಳಕೆಯಾಗಬೇಕು ಎಂದರು.
ಕಡಲೆಕಾಯಿ ಎಣ್ಣೆ ಬಳಸಿ: ನಮ್ಮ ರೈತರು ಬೆಳೆದಂತಹ ಕಡಲೆಕಾಯಿ ಎಣ್ಣೆಯನ್ನು ಹೆಚ್ಚಿನ ಕೊಬ್ಬಿನಾಂಶ ಹಿನ್ನೆಲೆಯಲ್ಲಿ ನಾವು ಸೇವಿಸುತ್ತಿಲ್ಲ. ಅದು ಬಿಟ್ಟು ವಿದೇಶದ ಪಾಮ್ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಾವು ಬಳಸುತ್ತೇವೆ. ಇದು ತಪ್ಪಬೇಕು. ಕಡಲೆಕಾಯಿ ಎಣ್ಣೆಯಲ್ಲಿ ಪಾಮ್ ಎಣ್ಣೆಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಕೊಬ್ಬಿನಂಶವಿದೆ. ಕಡಲೆಕಾಯಿ ಎಣ್ಣೆಯಲ್ಲಿ ಇರುವಂತಹ ಕೊಬ್ಬಿನಂಶ ಆರೋಗ್ಯಕ್ಕೆ ಪೂರಕವಾದುದು ಎಂದರು.
ನೀರಾದಿಂದ ಆರೋಗ್ಯ ವೃದ್ಧಿ: ನೀರಾ ಸೇವಿಸಿದಲ್ಲಿ ಆರೋಗ್ಯ ವೃದ್ಧಿಸುತ್ತದೆ. ತೆಂಗು ಮಂಡಳಿ, ಸಹಕಾರಿ ಸಂಘಗಳು ಮತ್ತು ಸರ್ಕಾರ ಒಡಂಬಡಿಕೆ ಮಾಡಿಕೊಂಡು ಸರ್ಕಾರಿ ನಿಯಂತ್ರಣದಲ್ಲಿ ನೀರಾ ಉತ್ಪಾದನೆ ಮಾಡಿದಲ್ಲಿ ರೈತರು ಬದುಕುಳಿಯಬಹುದು ಎಂದ ಸಚಿವರು, ತೆಂಗಿನ ಹಾಲು ಮತ್ತು ಸಕ್ಕರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇದ್ದು, ಈ ಉಪ ಉತ್ಪನ್ನಗಳ ಉತ್ಪಾದನೆಗೆ ರೈತರು ಮುಂದಾದಲ್ಲಿ ಉದ್ಯಮ ಆರಂಭಿಸಲು ಶೇ.25ರಷ್ಟು ಸಹಾಯಧನವನ್ನು ಸರ್ಕಾರ ಒದಗಿಸಲಿದೆ ಎಂದರು.
ತೆಂಗು ಬೆಳೆಗಾರರಿಗೆ ಆರ್ಥಿಕ ಚೈತನ್ಯ ಒದಗಿಸುವ ಪ್ಯಾಕೇಜ್ ನೀಡುವ ಪ್ರಯತ್ನ ಸರ್ಕಾರದಲ್ಲಿ ಆಗುತ್ತಿದೆ. ರೈತರು ತೆಂಗಿನ ನಾರಿನಿಂದ ಸಿದ್ದಪಡಿಸಿದಂತಹ ಪೀಠೋಪಕರಣಗಳಿಗೆ ಹೆಚ್ಚು ಪ್ರಚಾರ ದೊರಕಬೇಕು. ತೆಂಗಿನ ನಾರಿನ ಉದ್ಯಮದಿಂದ ಹೆಣ್ಣು ಮಕ್ಕಳ ಸ್ವಾವಲಂಬನೆ ಗಳಿಸಬಹುದು ಎಂದರು.
ತೆಂಗು ನಾರು ಮಂಡಳಿ ಸದಸ್ಯ ಶಾಹೀದ್ ಅವರು ಮಾತನಾಡಿ, ತೆಂಗುನಾರು ಮಂಡಳಿಗೆ ಒಂದು ನಿರ್ದೇನಾಲಯ ಸ್ಥಾಪಿತವಾಗಬೇಕು. ಮುಂದಿನ ಆಯವ್ಯಯದಲ್ಲಿ ಈ ಕುರಿತಂತೆ ಘೋಷಣೆಯಾಗಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿ ಸತ್ಯಮೂರ್ತಿ, ಜಿ.ಪಂ ಅಧ್ಯಕ್ಷೆ ಪ್ರೇಮಾ ಮಹಲಿಂಗಪ್ಪ, ಜಿ.ಪಂ. ಸಿ.ಇ.ಓ. ಗೋವಿಂದರಾಜು, ತೆಂಗುನಾರು ಮಂಡಳಿಯ ಪ್ರಾದೇಶಿಕ ಅಧಿಕಾರಿ ಎಂ.ಕೃಷ್ಣ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

