ನಾನೊಬ್ನೇನಾ, ಎಲ್ರೂ ತಗೊಂಡಿದ್ದಾರೆ, ತಪ್ಪೇನು?
ಕ.ಪ್ರ.ವಾರ್ತೆ ತುರುವೇಕೆರೆ ಜು.27
ಹೌದು, ನಾನು ಸಮಾಜ ಕಲ್ಯಾಣ ಇಲಾಖೆಯಲ್ಲಿ ಪಂಪ್ಸೆಟ್ ತೆಗೆದುಕೊಂಡಿದ್ದೀನಿ, ಪಶು ಸಂಗೋಪನಾ ಇಲಾಖೆಯಿಂದ ಸಾಲ ಸೌಲಭ್ಯ ಪಡೆದು ಮರು ಪಾವತಿ ಮಾಡಿದ್ದೀನಿ, ಅದರಿಂದ ಬಂದ ಸಹಾಯ ಧನವನ್ನು ಪಡೆದುಕೊಂಡಿದ್ದೀನಿ. ಅಂಬೇಡ್ಕರ್ ಅಭಿವೃಧ್ಧಿ ನಿಗಮದಿಂದ ಕೊಳವೆ ಬಾವಿಗಳನ್ನು ತೆಗೆದುಕೊಂಡಿದ್ದೀನಿ, ಮನೆನೂ ಪಡೆದುಕೊಂಡಿದ್ದೀನಿ. ಹೈನುಗಾರಿಕೆಗೆ ಅಂತ ನಿಗಮದವರು ಕೊಡೋ ಸೌಕರ್ಯವನ್ನೂ ಪಡೆದುಕೊಂಡಿದ್ದೀನಿ. ಹೀಗೆ ಪಡೆದ ಪಟ್ಟಿ ಬೆಳೆಸುತ್ತಾ, ಎಲ್ಲವೂ ನಿಜ. ಆದರೆ ನಾನೇನು ಮೋಸ ಮಾಡಿ ಯಾವುದನ್ನೂ ಪಡೆದುಕೊಂಡಿಲ್ಲವಲ್ಲ. ಎಲ್ಲವನ್ನೂ ಕಾನೂನು ರೀತ್ಯವೇ ಪಡೆದುಕೊಂಡಿದ್ದೀನಿ. ಇದರಲ್ಲಿ ತಪ್ಪೇನು..?
ಹೀಗೆಂದು ಪ್ರಶ್ನೆ ಮಾಡಿದವರು ತಾಲೂಕಿನ ದಲಿತ ಮುಖಂಡ ಬೀಚನಹಳ್ಳಿ ರಾಮಣ್ಣ. ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪರಿಶಿಷ್ಟ ಜಾತಿಯವರಿಗೆಂದು ಸರ್ಕಾರ ನೀಡಿರೋ ಸೌಲಭ್ಯವನ್ನು ನಾನು ಕಾನೂನು ರೀತ್ಯವೇ ಪಡೆದಿದ್ದೇನೆ. ಈ ರೀತಿ ಪಡೆದಿರೋನು ನಾನೊಬ್ಬನೇನು ಅಲ್ಲವಲ್ಲ. ಸಾಕಷ್ಟು ಜನ ಈ ರೀತಿ ಪಡೆದುಕೊಂಡಿದ್ದಾರೆ ಎಂದು ತಾವು ಪಡೆದ ವಿವಿಧ ಸರ್ಕಾರಿ ಸವಲತ್ತುಗಳ ಬಗ್ಗೆ ಸಮರ್ಥಿಸಿಕೊಂಡರು.
ಅಧಿಕಾರಿಗಳದ್ದೇ ತಪ್ಪು!: ನೋಡಿ ನಾನು ಲಂಬಾಣಿ ಎಂದು ಜಾತಿಯನ್ನು ತಪ್ಪು ನೀಡಿ ಸೌಲಭ್ಯ ಪಡೆದಿದ್ದೇನೆ ಎಂದು ಆಪಾದಿಸಲಾಗಿದೆ. ಆದರೆ ಅಧಿಕಾರಿಗಳು ಮಾಡಿರುವ ಕೈ ತಪ್ಪಿನ ಕಾರಣದಿಂದಾಗಿ ಈ ಪ್ರಮಾದವಾಗಿದೆ. ಅಲ್ಲಿ ಎ.ಕೆ. ಎಂದು ನಮೂದಿಸಬೇಕಿತ್ತು. ತಪ್ಪಾಗಿ ಲಂಬಾಣಿ ಎಂದು ಬರೆಯಲಾಗಿದೆ. ಇನ್ನು ಗಂಗಾ ಕಲ್ಯಾಣ ಯೋಜನೆಯಡಿ ದಬ್ಬೇಘಟ್ಟ ಹೋಬಳಿಯ ವಿಳಾಸ ನೀಡಿ ಸವಲತ್ತು ಪಡೆಯಲಾಗಿದೆ ಎಂದು ಹೇಳಲಾಗಿದೆ. ಅದನ್ನೂ ಅಧಿಕಾರಿಗಳು ತಪ್ಪಾಗಿ ವಿಳಾಸ ಬರೆದುಕೊಂಡಿದ್ದಾರೆ. ಅದರಲ್ಲೂ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ನಮ್ಮ ಮನೆಯಲ್ಲಿ 3 ಬಿಪಿಎಲ್ ಕಾರ್ಡ್ ಇದೆ ಎಂದು ಆಪಾದಿಸಿ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಇದರಲ್ಲಿ ನನ್ನದು ಮಾತ್ರ ಇದೆ. ಬೇರೆಯವು ಕ್ಯಾನ್ಸಲ್ ಆಗಿವೆ ಎಂದು ರಾಮಣ್ಣ ಹೇಳಿದರು.
ಮಾಹಿತಿಯೇ ಸರಿಯಿಲ್ಲ: ಚರ್ಮಗಾರಿಕೆಯಲ್ಲಿ 1.50 ಲಕ್ಷ ಹಣ ಪಡೆಯಲಾಗಿದೆ ಎಂದು ಹೇಳಲಾಗಿದೆ. ಅದು ಸುಳ್ಳು. ಸುಮಾರು 66 ಸಾವಿರ ರೂಗಳನ್ನು ಪ್ರಥಮ ಕಂತಾಗಿ ನೀಡಲಾಗಿದೆ. ಅದನ್ನೂ ನನಗೆ ನೀಡಿಲ್ಲ. ತುಮಕೂರಿನ ಅಂಗಡಿಯವರ ಹೆಸರಿಗೆ ನೀಡಲಾಗಿದೆ. ಅದರಲ್ಲಿ ಒಂದು ಕಾಸೂ ನನಗೆ ಬಂದಿಲ್ಲ. ಕೆಲವು ಅಧಿಕಾರಿಗಳು ಮಾಹಿತಿ ಹಕ್ಕಿನಡಿ ಕಿರಣ್ ಕುಮಾರ್ಗೆ ನೀಡಿರುವ ಮಾಹಿತಿಯಲ್ಲೇ ತಪ್ಪಿದೆ. ಅದನ್ನು ಸರಿಪಡಿಸಿ ಎಂದು ತಾವು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಹೇಳಿದರು. ಸರ್ಕಾರ ನೀಡಿರೋ ವಿವಿಧ ಸೌಲಭ್ಯಗಳನ್ನು ಹಂತ ಹಂತವಾಗಿ ಪಡೆದಿದ್ದೇನೆ. ಬಡ ಜನರಿಗೂ ಸರ್ಕಾರದ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಆದರೆ ತಮಗೆ ಆಗದವರು ಇಂತಹ ಕುಚೇಷ್ಟೆ ಮಾಡಿದ್ದಾರೆ ಅಷ್ಟೇ ಎಂದು ಪುನಃ ಸಮರ್ಥಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

