ಸಿಂಪಲ್ಲಾಗೊಂದ್ ದಿನ ಘಮ್ ಅಂತು ಜಿಲ್ಲಾಸ್ಪತ್ರೆ
ಕ.ಪ್ರ.ವಾರ್ತೆ ಕೋಲಾರ ಜು.29
ಸ್ವಚ್ಛತೆಯಿಲ್ಲದೆ ನರಕಯಾತನೆ ಅನುಭವಿಸುತ್ತಿರುವ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಲೋಕಾಯುಕ್ತ ಡಾ.ವೈ.ಭಾಸ್ಕರ್ ರಾವ್ ಅವರ ಭೇಟಿಯಿಂದ ಕೊಂಚ ಕಾಲ ಸುವಾಸನೆ ಸವಿಯುವ ಅದೃಷ್ಟ ಒಗದಿತ್ತು.
ಕರ್ನಾಟಕ ಲೋಕಾಯುಕ್ತರು ತಮ್ಮ ನಿಗದಿತ ಪ್ರವಾಸ ಕಾರ್ಯಕ್ರಮದನ್ವಯ ಸೋಮವಾರ ಬೆ.8.30ಕ್ಕೆ ಕೋಲಾರಕ್ಕೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ಕೆಲ ನಿಮಿಷ ವಿಶ್ರಾಂತಿ ಬಳಿಕ ಜಿಲ್ಲಾ ಎಸ್.ಎನ್.ಆರ್.ಆಸ್ಪತ್ರೆಗೆ ಭೇಟಿ ನೀಡಿದಾಗ ಅಚ್ಚರಿ ಪಡುವ ರೀತಿಯಲ್ಲಿ ಆಸ್ಪತ್ರೆಯನ್ನು ಸ್ವಚ್ಛವಾಗಿ ಇಡಲಾಗಿತ್ತಲ್ಲದೆ, ಎಲ್ಲ ಕಡೆ ಸುಗಂಧ ಪರಿಮಳ ವಾಸನೆ ಬೀರುವ ದ್ರವ್ಯ ಸಿಂಪಡಿಸಲಾಗಿತ್ತು. ಲೋಕಾಯುಕ್ತರು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೆ ಆಸ್ಪತ್ರೆಯ ವಿವಿಧ ಘಟಕಗಳಿಗೆ ತೆರಳಿ ನಂತರ ಅಲ್ಲಿಂದ ನಿರ್ಗಮಿಸಿದಾಗ ಆಸ್ಪತ್ರೆಯ ಆಡಳಿತ ವರ್ಗ ನಿಟ್ಟುಸಿರು ಬಿಟ್ಟಿತ್ತು.
ಲೋಕಾಯುಕ್ತರು ಆಸ್ಪತ್ರೆಗೆ ತಡವಾಗಿ ಭೇಟಿ ನೀಡಬಹುದೆಂಬ ಕಾರಣದಿಂದ ಸದಾ ಆಸ್ಪತ್ರೆಯ ಪ್ರಾಂಗಣದಲ್ಲಿ ಸುತ್ತಾಡುವ ಮೂಲಕ ಹುಳುಕುಗಳನ್ನು ಗಮನಿಸಿ ಪ್ರತಿಭಟಿಸುತ್ತಾ, ತಮ್ಮ ಸ್ವಂತ ಕೆಲಸಗಳನ್ನು ಲೀಲಾಜಾಲವಾಗಿ ಮಾಡಿಸಿಕೊಳ್ಳುತ್ತಿದ್ದ ಹೋರಾಟಗಾರರು ಲೋಕಾಯುಕ್ತರು ಬಂದಾಗ ಪ್ರತ್ಯಕ್ಷವಾಗದಿದ್ದರಿಂದ ಅಧಿಕಾರಿಗಳು, ವೈದ್ಯರು ಮುಜುಗರದಿಂದ ಪಾರಾದರು.
ನಿತ್ಯ ಹೀಗೇ ಇರಲಿ: ಲೋಕಾಯುಕ್ತರು ಆಸ್ಪತ್ರೆಯಿಂದ ಹೊರ ಬರುತ್ತಿದ್ದತಂತೆ ಕೆಲವರು ಸ್ವಾಮಿ, ನೀವು ಬಂದಿದ್ದೀರಾ ಅಂತ ಇವತ್ತು ಆಸ್ಪತ್ರೆ ಕ್ಲೀನ್ ಆಗಿ ಇಟ್ಟವ್ರೆ, ಸ್ವಚ್ಛತೆ ಇಲ್ಲವೇ ಇಲ್ಲವೆಂದು ದೂರಿದಾಗ, ಲೋಕಾಯುಕ್ತರು ಜಿಲ್ಲಾ ಪ್ರಭಾರ ಸರ್ಜನ್ ಡಾ.ನಾರಾಯಣಸ್ವಾಮಿ ಅವರಿಗೆ ಪ್ರತಿನಿತ್ಯ ಇದೇ ರೀತಿ ಸ್ವಚ್ಛತೆ ಇರಬೇಕು, ಯಾವುದೇ ದೂರು ಇರಬಾರದೆಂದು ಹೇಳಿ ಕಾರು ಹತ್ತಿ ಕುಳಿತರು.
ಆಸ್ಪತ್ರೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ನಚಿಕೇತನ ನಿಲಯಕ್ಕೆ ಹೋದಾಗಲೂ ಅಲ್ಲಿಯೂ ಯಾವುದೇ ಸಮಸ್ಯೆ ಇಲ್ಲದ ರೀತಿಯಲ್ಲಿ ನಿಲಯವನ್ನು ಸಜ್ಜುಗೊಳಿಸಿದ್ದರಿಂದ ಲೋಕಾಯುಕ್ತರು ಯಾವುದೇ ಟೀಕೆ, ಟಿಪ್ಪಣಿ ಆಕ್ಷೇಪಣೆ ಮಾಡದೆ ನಿರ್ಗಮಿಸಿದರು. ಲೋಕಾಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಿದ್ದರಿಂದ ದೂರು ನೀಡುವವರು ಇಲ್ಲದಂತಾಗಿತ್ತು.
ನಚಿಕೇತನದಿಂದ ಸರ್ಕಾರಿ ಬಾಲಕರ ಕಾಲೇಜಿಗೆ ಹೋದಾಗ ಅನೇಕ ಉಪನ್ಯಾಸಕರು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡದೆ ತರಗತಿಗಳಿಗೆ ಹೋಗಿದ್ದು, ಇನ್ನು ಕೆಲವರು ಸಮಯ ಮೀರಿ ಕೆಲಸಕ್ಕೆ ಬಂದಿರುವ ವಿಷಯ ತಿಳಿದು ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು.
ಉಪನ್ಯಾಸಕರಿದ್ದರೂ ವಿದ್ಯಾರ್ಥಿಗಳ ಗೈರು: ಕಾಲೇಜಿನಲ್ಲಿ ಈ ಬಾರಿ 1800 ಮಂದಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೂ ಬಹುತೇಕ ತರಗತಿಗಳಲ್ಲಿ ಕೇವಲ 4 ರಿಂದ 10 ಮಂದಿ ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿಂದ ಪಾಠ ಮಾಡಲು ಉತ್ಸಾಹ ತೋರದೆ ಸಹಾಪಾಠಿಗಳೊಂದಿಗೆ ಕಾಲಹರಣ ಮಾಡುತ್ತಿದ್ದ ಉಪನ್ಯಾಸಕರು ಇಂದು ವಿಧಿ ಇಲ್ಲದೆ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಿದ್ದರೂ ಪಾಠ ಹೇಳಬೇಕಾಯಿತು.
ಇದಕ್ಕೆ ಕಾರಣ ಲೋಕಾಯುಕ್ತರು ಕಾಲೇಜಿಗೆ ಭೇಟಿ ನೀಡಿದ್ದು ಮತ್ತು ಹಾಜರಾತಿ ಪುಸಕ್ತದಲ್ಲಿ ರಿಮಾರ್ಕ್ಸ್ ದಾಖಲಿಸಿದ್ದು. ಲೋಕಾಯುಕ್ತರ ಜೊತೆಗಿದ್ದ ಜಿಲ್ಲಾಧಿಕಾರಿಗಳು ಹಾಜರಾತಿ ಪುಸಕ್ತದಲ್ಲಿ ಕೆಂಪು ಶಾಯಿಯಿಂದ ಯಾರು ಹಾಜರಾತಿ ಪುಸಕ್ತದಲ್ಲಿ ಸಹಿ ಮಾಡಿರಲಿಲ್ಲವೊ ಅಂತಹವರ ಹೆಸರಿನ ಮುಂದೆ ಗೆರೆ ಎಳೆದು ಉಪನ್ಯಾಸಕರಿಗೆ ಶಾಕ್ ನೀಡಿದರು.
ಕಾಲೇಜಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ನೂರಾರು ಮಂದಿ, ತರಗತಿಗಳಿಗೆ ಬರುತ್ತಿರುವುದು ಬೆರಳಣಿಕೆಯಷ್ಟು. ಉಪನ್ಯಾಸಕರು ಏನು ಮಾಡಲು ಸಾಧ್ಯ, ಅನೇಕರು ಹಾಸ್ಟೆಲ್ ಸೌಲಭ್ಯ, ಬಸ್ ಪಾಸ್ ಹಾಗೂ ವಿದ್ಯಾರ್ಥಿ ವೇತನಕ್ಕಾಗಿ ಮಾತ್ರ ಪ್ರವೇಶ ಪಡೆದಿದ್ದಾರೆಂದು ವಿದ್ಯಾರ್ಥಿಯೊಬ್ಬ ಲೋಕಾಯುಕ್ತರ ಮುಂದೆ ಹೇಳಿದಾಗ, ನಿವಾದರೂ ತರಗತಿಗಳಿಗೆ ಸರಿಯಾಗಿ ಹಾಜರಾಗಿ ಉತ್ತಮ ಭವಿಷ್ಯ ಕಂಡುಕೊಳ್ಳಿ ಎಂದು ಕಿವಿಮಾತು ಹೇಳಿದರು. ಜಿ.ಪಂ ಸಿಇಒ ಜುಲ್ಫಿಖಾರ್ ಉಲ್ಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ವೆಂಕಟೇಶಮೂರ್ತಿ, ಕೋಲಾರ ಉಪವಿಭಾಗಾಧಿಕಾರಿ ಆಯುಷಾ ಫರ್ವೀನ್, ಜಿಲ್ಲಾ ಹೆಚ್ಚುವರಿ ಎಸ್ಪಿ ಐ.ಎಂ.ಜಮೀಲ್, ಡಿವೈಎಸ್ಪಿ ಶ್ರೀಹರಿ ಬರಗೂರು, ಕೆಜಿಎಫ್ ಡಿವೈಎಸ್ಪಿ ರಾಜಣ್ಣ, ಕೋಲಾರ ಲೋಕಾಯುಕ್ತ ಎಸ್ಪಿ ಸುಧಾಕರ್, ಡಿವೈಎಸ್ಪಿ ನಾಗರಾಜ್ ಇನ್ನಿತರ ಅಧಿಕಾರಿಗಳು ಈ ಸಂದಂರ್ಭದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

