ಮೋಹದ ಮಮಕಾರದಿಂದ ಹೊರಬನ್ನಿ
ಕ.ಪ್ರ.ವಾರ್ತೆ ಚಿಕ್ಕನಾಯಕನಹಳ್ಳಿ ಜೂ. 12
ಹೆಣ್ಣು, ಹೊನ್ನು, ಮಣ್ಣೆಂಬ ಮೂರು ಐಹಿಕ ಮೋಹದ ವಸ್ತುಗಳ ಮಮಕಾರದಿಂದ ಹೊರಬರುವುದರಿಂದ ಮಾತ್ರ ಮುಕ್ತಿ ಸಾಧ್ಯ ಎಂದು ಹಣ್ಣೇಮಠದ ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅವರು ಮಾದೀಹಳ್ಳಿ ಹಿರೇಮಠದ ಲಿಂಗೈಕ್ಯ ಹಿರಿಯ ಶ್ರೀಗಳಾದ ಮಹದೇವ ಶಿವಾಚಾರ್ಯ ಸ್ವಾಮೀಜಿಯವರ 12ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ಚಂಡಿಕಾಯಾಗದ ಪೂರ್ಣಾಹುತಿ ಮತ್ತು ಶಾಸಕ ಸುರೇಶ್ಬಾಬು ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ಮಾನವ ತಾನು ಮಾಡುವ ಸಮಾಜ ಸೇವೆಯಲ್ಲಿ ಸ್ವಹಿತ ಚಿಂತನೆಗೆ ಅವಕಾಶ ನೀಡಬಾರದು. ಇಂದು ಸಮಾಜ ಸೇವೆಯೆಂಬುದು ಬರೀ ಅಲಂಕಾರಿಕವಾಗಿದೆ. ತಾನು ಮಾಡುವ ಸಮಾಜ ಸೇವೆಯಿಂದ ತನಗೇನು ಲಾಭ ಎಂದು ಲಾಭ ನಷ್ಟದ ಲೆಕ್ಕಾಚಾರ ಹಾಕಿ ಸಮಾಜ ಸೇವೆ ಮಾಡುವ ಮಂದಿಯೇ ಹೆಚ್ಚಾಗಿ ಸಮಾಜ ಸೇವೆಗೆ ಅರ್ಥವಿಲ್ಲದಂತಾಗಿದೆ. ಇಂದು ನಾವು ಪ್ರಕೃತಿಯ ಬಗ್ಗೆ ಚಿಂತಿಸುವುದನ್ನೇ ಬಿಟ್ಟಿದ್ದೇವೆ.
ಇದರಿಂದಾಗಿ ಪ್ರಕೃತಿಯ ಅಸಮತೋಲನ ಹೆಚ್ಚಾಗಿ ಈಗಾಗಲೇ ನಾವು ಅದರ ಫಲವನ್ನು ಉಣ್ಣುತ್ತಿದ್ದೇವೆ.ಪರಿಸರದ ಮೇಲಾಗಿರುವ ಹಾನಿಯಿಂದ ಸಕಾಲದಲ್ಲಿ ಮಳೆ ಬಾರದೆ ರೈತ ಕಂಗಾಲಾಗಿದ್ದಾನೆ. ಕನ್ನಡ ನಾಡಿನಲ್ಲಿ ಹುಟ್ಟುವ ಕಾವೇರಿ ವಿವಾದದ ವಿಚಾರದಲ್ಲಿ ನಮ್ಮ ರಾಜ್ಯದ ಸಂಸದರು ನಮ್ಮ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಯಾರು ಸಹ ಕಾವೇರಿ ವಿಚಾರವಾಗಿ ಲೋಕಸಭೆಯಲ್ಲಿ ದನಿ ಎತ್ತಿ ಕೇಳುವ ಸಾಹಸ ಮಾಡುತ್ತಿಲ್ಲ. ಆದರೆ ವಾಸ್ತು ಮೌಢ್ಯದಿಂದ ಐತಿಹಾಸಿಕ ಕಟ್ಟವಾದ ವಿಧಾನಸೌಧವನ್ನು ಒಡೆದು ವಿರೂಪಗೊಳಿಸುತ್ತಿದ್ದಾರೆ. ಇದು ನಮ್ಮನ್ನಾಳಲು ನಾವು ಆಯ್ಕೆ ಮಾಡಿ ಕಳುಹಿಸುವ ಪ್ರಜ್ಞಾವಂತ ಜನಪ್ರತಿನಿಧಿಗಳ ಘನಕಾರ್ಯ. ಜನಪ್ರತಿನಿಧಿಗಳು ತಮ್ಮ ರಾಜ್ಯದ ಮತ್ತು ಕ್ಷೇತ್ರದ ಪ್ರಾಕೃತಿಕ ಸಂಪತ್ತು, ನಾಡಿನ ಕಲೆ, ಸಾಹಿತ್ಯ, ಮೂಲಭೂತ ಅಗತ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಇದನ್ನು ಕೇಳುವ ಹಕ್ಕು ಪ್ರಜೆಗಳಿಗಿದೆ. ಜನರ ನಿರೀಕ್ಷೆಗಳನ್ನು ಪೂರೈಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ ಎಂದರು.
ಹುಸಿಗೊಳಿಸೊಲ್ಲ: ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ಬಾಬು ನನ್ನನ್ನು ಆಯ್ಕೆಮಾಡಿದ ಜನರ ನಂಬಿಕೆಗಳನ್ನು ಹುಸಿಗೊಳಿಸದೆ ಕರ್ತವ್ಯ ನಿರ್ವಹಿಸುತ್ತೇನೆ. ನನ್ನ ಮೇಲೆ ನಂಬಿಕೆಯಿಟ್ಟು ನನ್ನನ್ನು ಕ್ಷೇತ್ರದ ಜನ ಮೂರನೇ ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ದೀನ ದಲಿತರ, ಬಡಜನರ ಕಷ್ಟಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಪ್ರಕೃತಿ ಮಾತೆಗೆ ದ್ರೋಹ ಬಗೆಯದೆ, ಕಾಪಾಡುವ ಜವಾಬ್ದಾರಿ ನನ್ನ ಮೇಲಿದೆ. ತಾಲೂಕು ಕೇಂದ್ರದಲ್ಲಿ ರಾಜ್ಯಸಾರಿಗೆ ಸಂಸ್ಥೆಯ ಬಸ್ ಡಿಪೋ ಮಂಜೂರಾಗಿದ್ದು, ಶೀಘ್ರವಾಗಿ ಹಳ್ಳಿಗಾಡಿನ ಜನರಿಗೆ 50 ಬಸ್ಸುಗಳನ್ನು ಹಾಕಿಸಿ ಸಾರಿಗೆ ಕಲ್ಪಿಸಲು ಪ್ರಯತ್ನಿಸುತ್ತೇನೆ ಎಂದರು.
ಶಂಕುಸ್ಥಾಪನೆ: ಈ ಸಂದರ್ಭದಲ್ಲಿ ನೂತನ ಮಠದ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೇರವಿರಿಸಿದರು. ಸಮಾರಂಭದಲ್ಲಿ ತಿಪಟೂರಿನ ಷಡಕ್ಷರಿ ಮಠದ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮಾದೀಹಳ್ಳಿ ಹಿರೇಮಠದ ಶ್ರೀಚನ್ನಮಲ್ಲಿಕಾರ್ಜುನ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹುಲಿಕೆರೆ ದೊಡ್ಡಮಠದ ಶ್ರೀವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶ್ರೀಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಕೆ.ಬಿದರೆಯ ದೊಡ್ಡಮಠಧ ಶ್ರೀಪ್ರಭುಶಾಂತವೀರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ತಾಪಂ ಅಧ್ಯಕ್ಷ ಕೆ.ಟಿ.ಗೋವಿಂದಪ್ಪ, ಪುರಸಭಾ ಮಾಜಿ ಅಧ್ಯಕ್ಷರುಗಳಾದ ಸಿ.ಟಿ.ವರದರಾಜು, ಸಿ.ಕೆ.ಕೃಷ್ಣಮೂರ್ತಿ, ಪುರಸಭಾ ಸದಸ್ಯರಾದ ಸಿ.ಆರ್.ತಿಮ್ಮಪ್ಪ, ಕಿರುತೆರೆ ಕಲಾವಿದ ಜೀವನ್, ಅನ್ನಪೂರ್ಣಜಯಣ್ಣ, ಕೆ.ಹೆಚ್.ನಾರಾಯಣ ರೆಡ್ಡಿ ಇದ್ದರು. ಕುಮಾರಿ ಪ್ರಿಯಾಂಕ ಹಾಗೂ ಕುಮಾರಿ ಶ್ರೇಯಾಂಕ ಭರತನಾಟ್ಯ ಪ್ರದರ್ಶಿಸಿದರು. ಶಿವಶಂಕರಶಾಸ್ತ್ರಿ ಸಂಗಡಿಗರಿಂದ ಸುಗಮಸಂಗೀತ ಕಾರ್ಯಕ್ರಮವ್ನನು ನಡೆಸಿಕೊಡಲಾಯಿತು. ಮಂಜುಶ್ರೀ ಸ್ವಾಗತಿಸಿ, ಮಮತ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

