ತುಮಕೂರು

ವಾಟರ್ಗ್ರಿಡ್ ಯೋಜನೆ: ಖಾದರ್ ಬದ್ಧ, ಟಿಬಿಸಿ ವಿರುದ್ಧ

Published On :

 ಅದಲಗೆರೆ ನಾಗೇಂದ್ರಕುಮಾರ್
ಕ.ಪ್ರ. ವಾರ್ತೆ   ತುಮಕೂರು   ಜೂ.18
ಪರಮಶಿವಯ್ಯ ವರದಿಯಾಧಾರಿತ ಕುಡಿಯುವ ನೀರಿನ ವಾಟರ್ಗ್ರಿಡ್ ಕೆನಾಲ್ ಯೋಜನೆ ದಿನೇ-ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದೆ.
 ಈ ಯೋಜನೆ ಜಾರಿ ಹಿನ್ನೆಲೆಯಲ್ಲಿ ಈಗಾಗಲೇ ಹಿಂದಿನ ಸರ್ಕಾರ ಬಜೆಟ್ನಲ್ಲಿ ಹಣ ಮೀಸಲಿರಿಸಿ, ಯೋಜನೆ ಜಾರಿಗೆ ಬದ್ಧವಾಗಿರುವುದಾಗಿ ಘೋಷಿಸುವ  ಮೂಲಕ ಬಯಲು ಸೀಮೆಯ 9 ಜಿಲ್ಲೆಗಳ 43 ತಾಲೂಕುಗಳ ಜನತೆಗೆ ಭರವಸೆ ನೀಡಿತ್ತು.
ನಂತರ ಈಗ ಬಂದಿರುವ ಕಾಂಗ್ರೆಸ್ ಸರ್ಕಾರದ ಇಬ್ಬರು ಮಂತ್ರಿಗಳು ಯೋಜನೆ ಕುರಿತಂತೆ ತದ್ವಿರುದ್ಧ ಹೇಳಿಕೆಗಳನ್ನು ನೀಡುವುದರ ಮೂಲಕ, ಜನತೆಯನ್ನು ಗೊಂದಲದಲ್ಲಿ ಸಿಲುಕಿಸಿದ್ದಾರೆ. ಯೋಜನೆ ಪರ-ವಿರೋಧದ ಹೇಳಿಕೆಗಳನ್ನು ನೀಡುವುದರ ಮೂಲಕ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ವಾಟರ್ಗ್ರಿಡ್  ಕೆನಾಲ್ ಯೋಜನೆ ಜಾರಿ ಕುರಿತಂತೆ ಒಂದೇ ಸರ್ಕಾರದ ಇಬ್ಬರು ಮಂತ್ರಿಗಳು ವಿಭಿನ್ನ ಹೇಳಿಕೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಯೋಜನೆ ಜಾರಿಗೆ ವಿರುದ್ಧ ಎಂದಿದ್ದರೆ, ಯು.ಟಿ. ಖಾದರ್ ಯೋಜನೆ ಜಾರಿಗೆ ಬದ್ಧ ಎಂದು ತಿಳಿಸಿದ್ದಾರೆ.
ಇದೇ ತಿಂಗಳ 9 ರಂದು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಪರಮಶಿವಯ್ಯ ವರದಿಯಾಧಾರಿತ ವಾಟರ್ಗ್ರಿಡ್ ಕೆನಾಲ್ ಯೋಜನೆ ಬಜೆಟ್ನಲ್ಲಿ ಸೇರಿಲ್ಲ. ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ 78 ನೀರಾವರಿ ಯೋಜನೆಗಳಲ್ಲಿ ಇದೂ ಒಂದು. ಈ ಯೋಜನೆ ಇನ್ನೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಯೋಜನೆ ಜಾರಿ ಸಾಧಕ, ಭಾದಕ ಕುರಿತು ತಜ್ಞರ ವರದಿಯಾಧರಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಷರ ಬರೆಯುವದರ ಮೂಲಕ ತಾವು ಪರಮಶಿವಯ್ಯ ವರದಿಯಾಧಾರಿತ ವಾಟರ್ಗ್ರಿಡ್ ಕೆನಾಲ್ ಯೋಜನೆ ಪರ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದರು.
ಆದರೆ ಪರಮಶಿವಯ್ಯ ವರದಿ ಫಲಾನುಭವಿ ಜಿಲ್ಲೆ ಪಟ್ಟಿಯಲ್ಲಿರುವ ಕೋಲಾರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಕಾಂಗ್ರೆಸ್ ಪ್ರಣಾಳಿಕೆ ಘೋಷಣೆಯಂತೆ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತವಾಗಿ ಕುಡಿಯುವ ನೀರೊದಗಿಸುವ ಪರಮಶಿವಯ್ಯ ವರದಿಯಾಧಾರಿತ ವಾಟರ್ಗ್ರಿಡ್ ಕೆನಾಲ್ ಯೋಜನೆಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಕರಾವಳಿ ಹಾಗೂ ಬಯಲು ಸೀಮೆ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಶಾಶ್ವತ ಕುಡಿಯುವ, ನೀರಾವರಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಜೂ.17 ರಂದು ಕೋಲಾರದಲ್ಲಿ ತಿಳಿಸಿದ್ದಾರೆ.
ಸಿಎಂ ಸಿದ್ದು ಹೇಳಿಕೆ ಅನಿವಾರ್ಯ: ಶಾಶ್ವತ ಕುಡಿಯುವ ನೀರಿನ ಯೋಜನೆಯ ಕುರಿತಂತೆ ಒಂದೇ ಸರ್ಕಾರದ ಇಬ್ಬರು  ಮಂತ್ರಿಗಳ ಹೇಳಿಕೆ ವಿಭಿನ್ನವಾಗಿರುವುದು ಬಯಲು ಸೀಮೆಯ ಜನತೆ ಆತಂಕಪಡುವಂತಾಗಿದೆ. ಹೀಗಾಗಿ ಸರ್ಕಾರದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಯಲು ಸೀಮೆಯ 10 ಸಾವಿರ ಕೆರೆಗಳಿಗೆ ನೀರುಣಿಸುವ ಪರಮಶಿವಯ್ಯ ವರದಿ ಜಾರಿಗೆ ಕಾಂಗ್ರೆಸ್ ಸರ್ಕಾರ ಬದ್ಧವೋ, ಇಲ್ಲವೋ ಎಂಬುದನ್ನು ಅಧಿಕೃತವಾಗಿ ಘೋಷಿಸುವುದರ ಮೂಲಕ ಜನತೆಗೆ ಉತ್ತರ ಹೇಳಬೇಕಿದೆ.
ವಸ್ತುಸ್ಥಿತಿ ನೀಡಿರುವ ಜಿಎಸ್ಬಿ : ಈ ಮಧ್ಯೆ ತುಮಕೂರು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ಯೋಜನೆ ಜಾರಿಗಾಗಿ ನಿರಂತರ ಯತ್ನ ನಡೆಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಯೋಜನೆ ಜಾರಿ ಕುರಿತಂತೆ ತೆಗೆದುಕೊಂಡ ನಿಲುವು, ಯೋಜನೆ ಕೈಬಿಟ್ಟು, ಹೋರಾಟದ ನಂತರ ಪೂರಕ ಬಜೆಟ್ನಲ್ಲಿ ಸೇರಿಸಿ, ಹಣ ಮೀಸಲಿರಿಸಿದ್ದು, ಇದಕ್ಕೂ ಮುನ್ನ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯೋಜನೆ ಪರ ನಿಂತು ಹಣ ಮೀಸಲಿರಿಸಿದ್ದು, ಕಾಂಗ್ರೆಸ್ನ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಹಾಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಪರಮಶಿವಯ್ಯ ಯೋಜನೆ ಪರ ಇರುವುದು  ಒಟ್ಟಾರೆ  ಕಾಂಗ್ರೆಸ್ ಹಾಗೂ ಬಿಜೆಪಿಯ 5 ಜನ ಮಾಜಿ ಮುಖ್ಯಮಂತ್ರಿಗಳು ಯೋಜನೆಯ ಪರ ಇದ್ದುದು, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಪಕ್ಷದ ನಾಯಕರಾಗಿದ್ದಾಗ ಯೋಜನೆ ಜಾರಿಗಾಗಿ ಒತ್ತಾಯಿಸಿದ್ದು ಸೇರಿದಂತೆ ಯೋಜನೆಗೆ ಸಂಬಂಧಿಸಿದಂತೆ ವಿವಿಧ ಘಟನಾವಳಿಗಳನ್ನು ಜನತೆಯ ಮುಂದಿಡುವುದರ ಮೂಲಕ ವಸ್ತುಸ್ಥಿತಿಯನ್ನು ಕಟ್ಟಿಕೊಟ್ಟಿದ್ದಾರೆ. ಪರಮಶಿವಯ್ಯ ವರದಿ ಜಾರಿಯಾಗದಿದ್ದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಜೂ. 10 ರಂದು ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ವಿಭಿನ್ನ ಹೇಳಿಕೆ: ಇದೀಗ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಇಬ್ಬರು ಮಂತ್ರಿಗಳು ಯೋಜನೆ ಜಾರಿ ಕುರಿತಂತೆ ವಿಭಿನ್ನ ಹೇಳಿಕೆಗಳನ್ನು ನೀಡಿರುವುದರಿಂದ ಜನತೆ ಗೊಂದಲದಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರ ಯೋಜನೆ ಪರವೋ, ವಿರುದ್ಧವೋ ಎಂಬುದನ್ನು ಕೂಡಲೇ ಘೋಷಿಸಬೇಕಿದೆ. ಜನತೆಯ ಗೊಂದಲ ನಿವಾರಿಸಬೇಕಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.