ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ: ಪೆದ್ದಪ್ಪಯ್ಯ
ಕ.ಪ್ರ.ವಾರ್ತೆ ತುಮಕೂರು ಜೂ.27
ಹಸಿರೇ ಜೀವ ಸಂಕುಲದ ಉಸಿರಾಗಿದೆ. ಆದರೆ, ಆಧುನಿಕ ಜೀವನದ ಭರಾಟೆಯಲ್ಲಿ ಮತ್ತು ಅಭಿವೃದ್ಧಿಯ ನೆಪದಲ್ಲಿ ಪರಿಸರ ಇತ್ತೀಚಿನ ದಿನಗಳಲ್ಲಿ ನಾಶವಾಗುತ್ತಿದೆ. ಅದರ ಪ್ರತಿಫಲವನ್ನು ಪ್ರಕೃತಿ ವಿಕೋಪಗಳ ರೂಪದಲ್ಲಿ ನಾವುಗಳು ಇಂದು ಅನುಭವಿಸುವಂತಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ಅಭಿಪ್ರಾಯಪಟ್ಟರು.
ನಗರದ ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ತುಮಕೂರು ವಿಜ್ಞಾನ ಕೇಂದ್ರ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಗಿಡ-ಮರಗಳು, ಅರಣ್ಯ ಪ್ರದೇಶ ಹೆಚ್ಚಿನ ಪ್ರಮಾಣದಲ್ಲಿ ಇದ್ದಲ್ಲಿ ಸಕಾಲಕ್ಕೆ ಮಳೆ ಬೆಳೆಯಾಗಿ ಮಾನವ ನೆಮ್ಮದಿ ಜೀವನ ನಡೆಸಬಹುದಾಗಿದೆ. ಆದರೆ ಮಿತಿಮೀರುತ್ತಿರುವ ಜನಸಂಖ್ಯೆಗೆ ವಿರುದ್ಧವಾಗಿ ಅರಣ್ಯ ಪ್ರದೇಶ ನಾಶವಾಗುತ್ತಿದೆ. ಜನಸಂಖ್ಯೆ ಹೆಚ್ಚಿದಂತೆ ಹಸಿರು ಪರಿಸರವೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಬೇಕು. ಈ ನಿಟ್ಟಿನಲ್ಲಿ ಯುವ ಜನಾಂಗ ಹೆಚ್ಚು ಜಾಗೃತವಾಗಬೇಕು ಎಂದರು.
ಜನಸಂಖ್ಯಾ ಸ್ಫೋಟದಿಂದ ಜನರ ಅಗತ್ಯಗಳು ಜಾಸ್ತಿಯಾದವು. ಇದರ ಪರಿಣಾಮವಾಗಿ ಆರಂಭವಾದ ಪರಿಸರ ವಿನಾಶ ಮನುಕುಲವನ್ನು ಇಂದು ಅಪಾಯಕ್ಕೆ ತಳ್ಳಿದೆ. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿಯೂ ಸಸಿ ನೆಟ್ಟು ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಹಿರಿಯ ಪರಿಸರ ಅಧಿಕಾರಿ ಸಿ.ಎಂ. ಸತೀಶ್ ಮಾತನಾಡಿ, ಪರಿಸರದ ಪರ್ಯಾವರಣ ನಾಶವಾಗುತ್ತಿರುವುದು ಎಲ್ಲಾ ದೇಶಗಳಿಗೂ ಮನವರಿಕೆಯಾಗಿದೆ. ಪರಿಸರ ಸಂರಕ್ಷಿಸಲು ಅನೇಕ ಕಾರ್ಯಕ್ರಮಗಳು ಜಾಗತಿಕವಾಗಿ ರೂಪಿಸುತ್ತಿವೆ.
ಆದರೆ, ಜನರ ಜೀವನ ಶೈಲಿ ಪ್ರಕೃತಿಯೊಂದಿಗೆ ಹೊಂದಿಕೊಳ್ಳುವಂತೆ ಬದಲಾಗದಹೊರತು ಅಪಾಯ ತಪ್ಪಿಸಲು ಸಾಧ್ಯವಿಲ್ಲ ಎಂದರು.
ಕೇವಲ ಕಳವಳದಿಂದ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ನಾವು ಭೂಮಿಯಲ್ಲಿ ಜೀವಿಸಲು ಬಯಸಿದ್ದರೇ, ಭೂಮಿಯಂತೆ ವರ್ತಿಸುವ ಮನೋಭಾವ ಬೆಳಸಿಕೊಳ್ಳಲೇಬೇಕು. ಭೂಮಿ ಸುರಕ್ಷಿತವಿಲ್ಲದ್ದರೆ ನಮ್ಮ ಜೀವವೂ ಸುರಕ್ಷಿತವಾಗಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ನಮ್ಮ ಜೀವನ ಭಯದ ವಾತಾವರಣದಲ್ಲಿ ನಡೆಯುತ್ತಿದೆ. ಮಾನವ ನಿರ್ಮಿತ ವಸ್ತುಗಳ ನಿಯಂತ್ರಣದಲ್ಲಿ ಜೀವನ ಸಾಗಿಸುತ್ತಿರುವ ನಾವು ಜ್ಞಾನ, ಶಾಂತಿ, ಸ್ವಾತಂತ್ರ್ಯ ಕಳೆದುಕೊಳ್ಳುವಂತಾಗಿದೆ. ಅಗತ್ಯ ವಸ್ತಗಳನ್ನು ನಮ್ಮ ಅಗತ್ಯಕ್ಕಿಂತ ಹೆಚ್ಚು ಸಂಗ್ರಹಣ ಮಾಡುತ್ತಿರುವುದರಿಂದ ಪರಿಸರ ನಾಶವಾಗುತ್ತಿದೆ ಎಂದರು.
ವಾತಾವರಣದಲ್ಲಿ ಜಾಸ್ತಿಯಾಗುತ್ತಿರುವ ಇಂಗಾ ಲದ ಡೈ ಆಕ್ಸೈಡ್ ನಿಯಂತ್ರಿಸಲು ಅರಣ್ಯದಿಂದ ಮಾತ್ರ ಸಾಧ್ಯ. ಆದ್ದರಿಂದ ಎಲ್ಲರೂ ತಮಗೆ ಸಾಧ್ಯವಿರುವಷ್ಟು ಮರಗಳನ್ನು ಬೆಳಸಿ ಪರಿಸರ ಸಮತೋಲನ ಕಾಪಾಡಬೇಕು ಎಂದರು.
ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಪಠ್ಯಕ್ರಮ ಅಳವಡಿಸಿಬೇಕು. ಆ ಮೂಲಕ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುತ್ತಿರುವ ಅಪಾಯವನ್ನು ತಡೆಯಬಹುದು ಎಂದು ಜಿ.ಪಂ. ಸಿಇಒ ಗೋವಿಂದರಾಜು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಜ್ಞಾನ ಕೇಂದ್ರದ ಸಿ.ಯತಿರಾಜು, ಪ್ರಾಚಾರ್ಯ ಬಿ.ಮರುಳಯ್ಯ, ಪರಿಸರ ಅಧಿಕಾರಿ ಬಿ.ಎಸ್. ಮುರುಳಿಧರ್, ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ವಿಶ್ವನಾಥ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

