'ಕಂಪ್ಯೂಟರ್ ಪೂರೈಕೆಯಲ್ಲಿ 250 ಕೋಟಿ ಅವ್ಯವಹಾರ'
ಕ.ಪ್ರ.ವಾರ್ತೆ ತುಮಕೂರು ಜೂ.27
ತುಮಕೂರು ತಾಲೂಕಿಗೆ ಸಂಬಂಧಿಸಿದಂತೆ ತಾವು ಗುರುವಾರ ಪ್ರವಾಸ ಕೈಗೊಂಡಿದ್ದು, ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕ, ಸಮವಸ್ತ್ರ, ಶಿಕ್ಷಕರ ಕೊರತೆಯಂತಹ ಸಮಸ್ಯೆಗಳು ಕಣ್ಣಿಗೆ ರಾಚುತ್ತಿವೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ತುಮಕೂರಿನಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ತಾಲೂಕಿನ ಸುಮಾರು 20 ರಿಂದ 25 ಶಾಲೆಗಳಿಗೆ ತಾವು ದಿಢೀರ್ ಭೇಟಿ ನೀಡಿದ ವೇಳೆ ಈ ಮೇಲಿನ ಅಂಶಗಳು ತಮ್ಮ ಗಮನಕ್ಕೆ ಬಂದವು ಎಂದು ತಿಳಿಸಿದರು.
ವಿದ್ಯಾರ್ಥಿಗಳ ಬಟ್ಟೆಯ ಅಳತೆ ಇರುವುದು ಒಂದಾದರೆ ವಿತರಿಸಿರುವುದು ಇನ್ನೊಂದು ಅಳತೆಯದ್ದು. ತಾವು ಹೋದ ಕಡೆಯಲ್ಲೆಲ್ಲಾ ಅಳತೆಗೆಟ್ಟ ಸಮವಸ್ತ್ರ ವಿತರಿಸಿರುವುದು ಕಂಡು ಬಂತು. ಕೋಟ್ಯಂತರ ರು. ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದು ವೈ.ಎ. ನಾರಾಯಣಸ್ವಾಮಿ ಆರೋಪಿಸಿದರು.
ಶಾಲೆ ಶುರುವಾಗಿ 1 ತಿಂಗಳು ಕಳೆಯುತ್ತಾ ಬಂದರೂ ಇನ್ನೂ ಪಠ್ಯ ಪುಸ್ತಕಗಳ ಸರಬರಾಜು ಸರಿಯಾಗಿ ಆಗಿಲ್ಲ. 9 ನೇ ತರಗತಿಯ ಪುಸ್ತಕಗಳು ಸಂಪೂರ್ಣವಾಗಿ ವಿತರಣೆಯಾಗಿಲ್ಲ. 10ನೇ ತರಗತಿಯ ಮುಖ್ಯವಾದ ಪಠ್ಯ ಪುಸ್ತಕಗಳೇ ಇನ್ನೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಕಳೆದ ಡಿಸೆಂಬರ್ನಿಂದಲೂ ಖಾಲಿ ಹುದ್ದೆಗಳು ಹಾಗೆ ಇವೆ. ಕೂಡಲೇ ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಬೇಕು. ಕೂಡಲೇ 10,500 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಅರೆಕಾಲಿಕ ಉಪನ್ಯಾಸಕರಿಗೆ ಕನಿಷ್ಠ 10,500 ವೇತನ ನಿಗದಿ ಮಾಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಿನಗೂಲಿ ಕನಿಷ್ಠ 175 ಇದೆ. ಇನ್ನು ಶಿಕ್ಷಕರಿಗೆ ಕನಿಷ್ಠ 10000 ಗಳಾದರೂ ಬೇಡವೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಕಂಪ್ಯೂಟರ್ ಬಂದಿಲ್ಲ, 250 ಕೋಟಿ ಅವ್ಯವಹಾರ: ಹಲವಾರು ಶಾಲೆಗಳಿಗೆ ಕಂಪ್ಯೂಟರ್ ಟೇಬಲ್ ಬಂದಿದೆ. ಯುಪಿಎಸ್ ಬಂದಿದೆ. ಆದರೆ, ಕಂಪ್ಯೂಟರ್ ಬಂದಿಲ್ಲ ಎಂದ ನಾರಾಯಣಸ್ವಾಮಿ, ಇದೊಂದು ಹಾಸ್ಯಾಸ್ಪದ, ನಾಚಿಕೆಗೇಡಿನ ಸಂಗತಿ. ಈ ಕಂಪ್ಯೂಟರ್ ಸರಬರಾಜು ವ್ಯವಹಾರವೇ ಅಂದಾಜು 250 ಕೋಟಿ ರು. ಗಳದ್ದು. ಜಪಾನಿನ ಕಂಪನಿಯೊಂದು ಈ ಕಂಪ್ಯೂಟರ್ ಸರಬರಾಜು ಗುತ್ತಿಗೆ ಹಿಡಿದಿದೆ. ಕಂಪ್ಯೂಟರ್ ಸರಬರಾಜಿಗೆ ಸಂಬಂಧಿಸಿದಂತೆ ಇದು ರಾಜ್ಯಾದ್ಯಂತ ನಡೆದಿರುವ ಅದ್ವಾನ. ಅವ್ಯವಹಾರ. ಕೂಡಲೇ ಸರ್ಕಾರ ಎಚ್ಚೆತ್ತು ಸರಿಪಡಿಸುವಂತೆ ಒತ್ತಾಯಿಸಿದರು. ಪ್ರತಿ ಶಾಲೆಗೆ ಕಡ್ಡಾಯವಾಗಿ ಕಂಪ್ಯೂಟರ್ ಶಿಕ್ಷಕರನ್ನು ನೇಮಕ ಮಾಡುವಂತೆ ಕೂಡ ವೈಎಎನ್ ಆಗ್ರಹಿಸಿದರು.
ಪ್ರಮೋಷನ್ ನೀಡಬೇಕು: ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯೋಪಾಧ್ಯಾಯರಿಗೆ ಹಾಗೂ ಅರ್ಹತೆಯಿರುವ ಶಿಕ್ಷಕರಿಗೆ ಪದವಿಪೂರ್ವ ಕಾಲೇಜಿಗೆ ಕೂಡಲೇ ಪ್ರಮೋಷನ್ ನೀಡಬೇಕು. ಸರ್ಕಾರ ಅನುದಾನಿತ, ಅನುದಾನರಹಿತ, ಸರ್ಕಾರಿ ಶಾಲೆಗಳ ಮಧ್ಯೆ ಯಾವುದೇ ತಾರತಮ್ಯ ಮಾಡಬಾರದು. ಅಗತ್ಯವಿರುವ ಕಡೆ ಶಾಲೆ-ಕಾಲೇಜುಗಳನ್ನು ಸ್ಥಾಪನೆ ಮಾಡಬೇಕು. ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ವೈಎಎನ್ ಸರ್ಕಾರವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಬ್ಯಾಟರಂಗೇಗೌಡ ಉಪಸ್ಥಿತರಿದ್ದರು.
ಬಿಸಿಯೂಟದ ಪ್ರತಿ 50 ಕೆಜಿ ಅಕ್ಕಿ ಚೀಲದಲ್ಲಿ 5 ಕೆಜಿ ಕಡಿಮೆ
ತುಮಕೂರು: ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ನೀಡಲಾಗುತ್ತಿರುವ ಅಕ್ಕಿ ಚೀಲದಲ್ಲಿ 5 ಕೆಜಿ ಕಡಿಮೆ ಇರುವುದು ಕಂಡುಬಂದಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಆರೋಪಿಸಿದರು. ತಾವು ಭೇಟಿ ನೀಡಿದ ಬಹುತೇಕ ಶಾಲೆಗಳಲ್ಲಿ ಪ್ರತಿ 50 ಕೆಜಿ ಅಕ್ಕಿ ಚೀಲದಲ್ಲಿ 5 ಕೆಜಿ ಕಳವು ನಡೆದಿರುವುದು ಗಮನಕ್ಕೆ ಬಂತು. ಕೂಡಲೇ ಸರ್ಕಾರ ಇತ್ತ ಚಿತ್ತ ಹರಿಸಿ ಸರಿಪಡಿಸುವಂತೆ ಒತ್ತಾಯಿಸಿದರು. ಅನುದಾನಿತ ಖಾಸಗಿ ಶಾಲೆಗಳಲ್ಲಿ 2009 ರಿಂದ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಸುಮಾರು 3000 ಹುದ್ದೆಗಳು ಖಾಲಿಯಿವೆ. ಇದಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಹಿಂದಿನ ಸರ್ಕಾರದ್ದು ತಪ್ಪಿದೆ, ಈಗಿನದು ನಿದ್ರಾವಸ್ಥೆಯಲ್ಲಿದೆ
ತುಮಕೂರು: ಶಿಕ್ಷಣ ಇಲಾಖೆಯ ಅವ್ಯವಸ್ಥೆ ಮುಂದುವರಿದಿದೆ. ಪಠ್ಯ ಪುಸ್ತಕ, ಸಮವಸ್ತ್ರ, ಕಂಪ್ಯೂಟರ್, ಬಿಸಿಯೂಟದ ಅಕ್ಕಿ ಸೇರಿದಂತೆ ಇತರೆ ಸಮಸ್ಯೆ ಪರಿಹರಿಸುವಲ್ಲಿ ಹಿಂದಿನ ಸರ್ಕಾರ ಎಡವಿದೆ. ಆದರೆ, ಹಾಲಿ ಸರ್ಕಾರ ಕೂಡ ಇನ್ನೂ ನಿದ್ರಾವಸ್ಥೆಯಲ್ಲೇ ಇದೆ. ಅಧಿಕಾರಕ್ಕೆ ಬಂದು ಎರಡು ತಿಂಗಳಾಗುತ್ತಾ ಬಂದರೂ ಇನ್ನೂ ತಲೆಕೆಡಿಸಿಕೊಂಡಿಲ್ಲ. ಯಾವುದೇ ಸರ್ಕಾರ ಬದಲಾದರೂ, ಅಧಿಕಾರಿಗಳೂ ಮಾತ್ರ ಅವರೇ. ಸರ್ಕಾರ ಅಸ್ತಿತ್ವದಲ್ಲಿರಲಿ, ಬಿಡಲಿ ಚಟುವಟಿಕೆ ನಿರಂತರವಾಗಿರಬೇಕು. ಆದರೆ ಇದಾಗಿಲ್ಲ. ಅವ್ಯವಸ್ಥೆಗೆ ಅಧಿಕಾರಿಗಳೇ ನೇರ ಹೊಣೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ವೈ.ಎ. ನಾರಾಯಣಸ್ವಾಮಿ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

