ಪಿಎಸ್ಐ ರಾಮಕೃಷ್ಣಯ್ಯ ಅಮಾನತು: ಪ್ರತಿಭಟನೆ
ಕ.ಪ್ರ.ವಾರ್ತೆ, ಪಾವಗಡ, ಜೂ.28
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿ ಗಡಿ ಭಾಗದಲ್ಲಿ ದಕ್ಷ ಅಧಿಕಾರಿ ಎಂದು ಖ್ಯಾತಿ ಪಡೆದ ಪಿಎಸ್ಐ ರಾಮಕೃಷ್ಣಯ್ಯ ಅವರ ಅಮಾನತು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಇಲ್ಲಿನ ಪ್ರಗತಿ ಪರ ಸಂಘಟನೆಗಳು ಸೇರಿದಂತೆ ಅನೇಕ ಮಹಿಳಾ ಸಂಘಟನೆಗಳು ಖಂಡಿಸಿವೆ.
ಶುಕ್ರವಾರ ಪಟ್ಟಣದಲ್ಲಿ ರಸ್ತೆ ತಡೆ ನಡೆಸುವ ಮೂಲಕ ಕೂಡಲೇ ಅವರ ಅಮಾನತು ಆದೇಶ ವಾಪಸು ಪಡೆಯುವಂತೆ ಒತ್ತಾಯಿಸಿವೆ.
ದುರುದ್ದೇಶದ ಆರೋಪ ಹಿನ್ನೆಲೆ ಜಿಲ್ಲಾ ಎಸ್ಪಿ ಅಮಾನುತು ಆದೇಶ ಜಾರಿ ಮಾಡಿ ಪಾವಗಡ ಠಾಣಾ ಪಿಎಸ್ಐ ರಾಮಕೃಷ್ಣಯ್ಯ ಅವರನ್ನು ಅಮಾನತುಪಡಿಸಿದ್ದರು. ಪಿಎಸ್ಐ ರಾಮಕೃಷ್ಣಯ್ಯ ಅವರ ಅಮಾನತು ಪಡಿಸಿದ ಸುದ್ದಿ ಹರಡುತ್ತಿದ್ದಂತೆ ರೊಚ್ಚಿಗೆದ್ದ ದಲಿತ ವಿಮೋಚನೆ, ರಾಷ್ಟ್ರೀಯ ಕಿಸಾನ್ ಸಂಘ, ತಾ, ಹಮಾಲಿಗಳ ಸಂಘ, ಭದ್ರಾ ಮೇಲ್ದಂಡೆ ಹೋರಾಟ ಸಮಿತಿ, ಶ್ರೇಯಸ್ ಸಂಸ್ಥೆ, ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಹಾಗೂ ಮಹಿಳಾ ಸಂಘಟನೆಗಳು ಸೇರಿದಂತೆ ಇಲ್ಲಿನ ಅನೇಕ ಪ್ರಗತಿ ಪರ ಸಂಘಟನೆಗಳವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಮಕೃಷ್ಣಯ್ಯ ಅವರ ಅಮಾನತು ವಿರೋಧಿ ಪಟ್ಟಣದ ಶನೈಶ್ಚರ ಸರ್ಕಲ್ನಲ್ಲಿ ಸೇರಿದ ವಿವಿಧ ಸಂಘಟನೆಗಳ ನೂರಾರು ಮಂದಿ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ತೆರಳಿ ಪೊಲೀಸ್ ಠಾಣೆಯ ಪಕ್ಕ ಚಳ್ಳಕೆರೆ ರಸ್ತೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು.
ನಂತರ ರಾಮಕೃಷ್ಣಯ್ಯ ಅವರ ಅಮಾನತು ರಾಜಕೀಯದಿಂದ ಕೂಡಿದೆ. ಕುತಂತ್ರಿಗಳ ಮಾತಿಗೆ ಬೆಲೆ ಕೊಡದೇ ಕೂಡಲೇ ಅವರ ಅಮಾನತು ಆದೇಶ ವಾಪಸ್ ಪಡೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ ಪ್ರತಿಭಟನಾಕಾರರು, ತಹಸೀಲ್ದಾರ್ ಕಚೇರಿ ಬಳಿ ತೆರಳಿ ಉಗ್ರ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭ ರಾಜ್ಯ ರೈತ ಸಂಘದ ಅಧ್ಯಕ್ಷ ನಾಗಭೂಷಣ್ ರೆಡ್ಡಿ, ಮುಖಂಡ ಪಿ.ಅಮೀರ್ ಮಾತನಾಡಿ, ಪಿಎಸ್ಐ ರಾಮಕೃಷ್ಣಯ್ಯ ಅವರು ಇಲ್ಲಿನ ಪೊಲೀಸ್ ಠಾಣೆಗೆ ಬಂದ ಕೆಲವೇ ದಿನಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಟ್ಟುನಿಟ್ಟಿನ ಕ್ರಮ ಜರಿಗಿಸುವ ಮೂಲಕ ಉತ್ತಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಬಹುತೇಕ ಹಿಂದುಳಿದ ವರ್ಗದವರು ನೆಲೆಸಿರುವ ಈ ವ್ಯಾಪ್ತಿಯಲ್ಲಿ ಇವರು ಜನಪ್ರಿಯರಾಗಿದ್ದಾರೆ. ಇಂತಹ ದಕ್ಷ ವ್ಯಕ್ತಿಯನ್ನು ಕ್ಷುಲಕ ಕಾರಣಕ್ಕಾಗಿ ಅಮಾನತುಪಡಿಸಲಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ. ಇದು ಅನ್ಯಾಯದ ಪರಮಾವಧಿ ಎಂದು ಆರೋಪಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ಮಾತನಾಡಿ, ದುರದೇಶದಿಂದ ಪಿಎಸ್ಐ ಅವರನ್ನು ಅಮಾನತುಪಡಿಸಲಾಗಿದೆ. ಇವರ ಸ್ಥಳಕ್ಕೆ ಮತ್ತೊಬ್ಬರನ್ನು ನಿಯೋಜಿಸುವ ತಂತ್ರ ಹಾಗೂ ಪಿತೂರಿಯಿಂದ ಈ ಕಾರ್ಯನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸಿ.ರಾಮಕೃಷ್ಣ ಹಾಗೂ ಪೊಲೀಸ್ ಕಾನ್ಸ್ಟೆಬಲ್ ಮಹಂತೇಶ್ ಅವರ ಅಮಾನತು ಆದೇಶ ಕೂಡಲೇ ವಾಪಸ್ ಪಡೆಯಬೇಕು ಎಂದು ಎಸ್ಪಿಯವರಲ್ಲಿ ಒತ್ತಾಯಿಸಿದರು.
ಕರ್ನಾಟಕ ಶುದ್ಧೀಕರಣ ಹೋರಾಟ ವೇದಿಕೆ, ಯಾದವ ಯುವಕ ಸಂಘ, ರಾಹುಲ್ ಗಾಂಧಿ ಯುವಕ ಸಂಘ, ಜೈ ಭುವನೇಶ್ವರಿ ತಾಲೂಕು ಬಲಿಜ ಸಂಘ, ಮದಕರಿ ಸೇನಾ ಸಂಘ, ನ್ಯೂ ಅಂಜನ್ ಕ್ರಿಕೆಟ್ ಕ್ಲಬ್, ಕಮ್ಮ ಒಕ್ಕಲಿಗ ಸಂಘ, ರೋಟರಿ ಸಂಘ, ತಾಲೂಕು ತಮಟೆ ಸಂಘ, ಎಡಿಯೂರು ಸಿದ್ದಲಿಂಗೇಶ್ವರ ಮಹಿಳಾ ಸಂಘ ಸೇರಿದಂತೆ ನೂರಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ತಹಸೀಲ್ದಾರ್ ಮಹಮ್ಮದ್ ಆಲ್ತಪ್ ಪಾಷ ಅವರಿಗೆ ಮನವಿ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

