ತೆಂಗು ಬೆಳೆಗಾರರ ಸಾಲ ಸಂಪೂರ್ಣ ಮನ್ನಾ ಮಾಡಿ
ಗುಬ್ಬಿ: ತೆಂಗು ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದು ಹಾಗೂ ಪ್ರಸಕ್ತ ಸಾಲಿನಿಂದ ವಿಶೇಷ ಆದ್ಯತೆಯ ಮೇರೆಗೆ ಬಡ್ಡಿ ರಹಿತ ಸಾಲ ನೀಡಬೇಕು ಎಂದು ರಾಜ್ಯ ತೆಂಗು ಬೆಳೆಗಾರರ ಸಂಘದ ಸಂಚಾಲಕ ಎಂ.ಬಿ. ಸಿದ್ದಬಸಪ್ಪ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ಕೃಷಿ ಉತ್ವನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆದ ತಾಲೂಕು ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಂತರ್ಜಲ ಕಡಿಮೆ ಇರುವ ಪ್ರದೇಶಗಳಲ್ಲಿ ತೆಂಗಿಗೆ ಪರ್ಯಾಯವಾಗಿ ಗೋಡಂಬಿ, ಮಾವು, ಸಪೋಟ, ಹಲಸು ಮತ್ತು ಹುಣಸೆ ಬೆಳೆಯಲು ರೈತರಿಗೆ ಅಗತ್ಯವಿರುವ ವೆಚ್ಚವನ್ನು ಸರ್ಕಾರ ಭರಿಸುವಂತೆ ಒತ್ತಾಯಿಸಿದರು. ವಿಶ್ವ ತೆಂಗು ದಿನಾಚಾರಣೆಯನ್ನು ಸೆ.2 ರಂದು ಜಿಲ್ಲೆಯಲ್ಲಿ ನಡೆಸಲಾಗುತ್ತಿದ್ದು ಜಿಲ್ಲೆಯ ಎಲ್ಲಾ ತೆಂಗು ಬೆಳೆಗಾರರು ಭಾಗವಹಿಬೇಕು ಎಂದರು. ಜಿಲ್ಲಾ ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಉಪಾಧ್ಯಕ್ಷ ಎಂ.ವಿ. ಬಸವರಾಜು ಮಾತನಾಡಿದರು.
3 ರಿಂದ ನೂತನ ಗೋಪುರ ಕಲಶಸ್ಥಾಪನೆ
ತುಮಕೂರು: ಜು. 3 ರಿಂದ 5 ರವರೆಗೆ ತುಮಕೂರು ಮರಳೂರು ದಿಣ್ಣೆಯ ಜನತಾ ಕಾಲೋನಿ 6 ನೇ ಕ್ರಾಸ್ನಲ್ಲಿ ಗಣೇಶ, ನವಗ್ರಹ, ಚಾಮುಂಡೇಶ್ವರಿ ಸ್ಥಿರಬಿಂಬ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ನೂತನ ಗೋಪುರ ಕಲಶಸ್ಥಾಪನೆ ಮಹೋತ್ಸವ ಏರ್ಪಾಟಾಗಿದೆ. 5 ರಂದು ಏರ್ಪಾಟಾಗಿರುವ ಕಾರ್ಯಕ್ರಮದಲ್ಲಿ ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಆರ್. ನಮಃ ಶಿವಾಯಸ್ವಾಮಿಗಳು ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಶಾಸಕ ಡಾ. ರಫೀಕ್ ಅಹಮದ್ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವ ಸೊಗಡು ಶಿವಣ್ಣ, ಅಬಕಾರಿ ಆಯುಕ್ತ ಡಾ. ಸಿ. ಸೋಮಶೇಖರ್, ನಗರಸಭಾ ಸದಸ್ಯ ವೆಂಕಟೇಶ್, ಯುವ ಮುಖಂಡ ಕೆಜೆಪಿಯ ಜ್ಯೋತಿಗಣೇಶ್, ನರಸೇಗೌಡ, ವಿ. ಪ್ರತಾಪ್, ಸೈಯದ್ ಅಲ್ತಾಫ್, ರವೀಗೌಡ ಇತರರು ಪಾಲ್ಗೊಳ್ಳಲ್ಲಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ತಿಪಟೂರು: ತಾಲೂಕಿನ ಶ್ರೀ ಭೋವಿ (ವಡ್ಡರ) ಸಿದ್ಧರಾಮೇಶ್ವರ ಬಂಡೆಕಲ್ಲು ಕುಟ್ಟುವವರ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಸಂಘದ ಜಿಲ್ಲಾಧ್ಯಕ್ಷರಾದ ಶಂಕರಪ್ಪನವರು ಆಯ್ಕೆ ಮಾಡಿದರು. ಗೌರವಾಧ್ಯಕ್ಷರಾಗಿ ರಾಮಚಂದ್ರಯ್ಯ, ಅಧ್ಯಕ್ಷರಾಗಿ ಆರ್.ಶಶಿಧರ್,ಉಪಾಧ್ಯಕ್ಷರುಗಳಾಗಿ ಗುರುರಾಜ್,ನಾಗರಾಜು, ಡಿ. ವೆಂಕಟೇಶ್, ರಮೇಶ್, ಪ್ರ.ಕಾರ್ಯದರ್ಶಿ ಡಿ.ಉಮೇಶ್, ಜಂಟಿ ಕಾರ್ಯದರ್ಶಿ ದಯಾನಂದ್,ನಗರ ಕಾರ್ಯದರ್ಶಿ ವಿ.ಟಿ. ಬಸವರಾಜ್, ಪದಾಧಿಕಾರಿಗಳನ್ನಾಗಿ ವಿರೂಪಾಕ್ಷ, ತಿಮ್ಮಣ್ಣ, ವೆಂಕಟೇಶ್,ಪಾಪಣ್ಣ, ಆರ್.ಟಿ.ಉಮೇಶ್, ಬಿ.ಕೆ.ಗಂಗಾಧರ್, ಕುಮಾರ್, ಪ್ರಭುಸ್ವಾಮಿ, ಆನಂದ್ ಕುಮಾರ್, ಬಿ.ಸ್ವಾಮಿ, ಹೊನ್ನಪ್ಪ, ರಾಜಣ್ಣ, ಶಂಕರಪ್ಪ, ಕುಮಾರ್, ಪರಮೇಶ್ ಅವರನ್ನು ಆಯ್ಕೆ ಮಾಡಲಾಯಿತು.
3 ರಂದು ನಾಟಕೋತ್ಸವ
ತುಮಕೂರು: ಜು. 3 ರಂದು ಸಂಜೆ 6 -30 ಕ್ಕೆ ತುಮಕೂರಿನ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಾಟಕೋತ್ಸವ ಕಾರ್ಯಕ್ರಮ ಏರ್ಪಾಟಾಗಿದೆ. ಮುದುಕನ ಮದುವೆ, ಸುರಪುರದ ವೀರ ವನಿತೆ ನಾಟಕಗಳು ಏರ್ಪಾಟಾಗಿವೆ. ಸಮಾರಂಭವನ್ನು ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಸ್. ನಾಗಣ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷೆ ಮಾಲತಿ ಸುಧೀರ್, ಶಿರಾ ತಹಸೀಲ್ದಾರ್ ಎಸ್.ಬಿ. ಕುಲಕರ್ಣಿ, ಕುಣಿಗಲ್ ಡಿವೈಎಸ್ಪಿ ಪಿ. ಉಮಾರಾಣಿ, ಲಕ್ಷ್ಮಣದಾಸ್, ರಂಗಯ್ಯ, ಎಚ್.ಡಿ. ಮಹಲಿಂಗಯ್ಯ, ಗುಬ್ಬಿ ತಹಸೀಲ್ದಾರ್ ಸಿದ್ದಪ್ಪ ಪಾಲ್ಗೊಳ್ಳಲ್ಲಿದ್ದಾರೆ.
ನಾಳೆ ವಿಶೇಷ ಸತ್ಸಂಗ
ಗುಬ್ಬಿ: ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್, ಕರ್ನಾಟಕ, ಶ್ರೀರಾಮಕೃಷ್ಣ ಭಾವಪ್ರಚಾರ ಪರಿಷತ್, ಕರ್ನಾಟಕ, ರಾಮಕೃಷ್ಣ ವಿವೇಕಾನಂದ ಆಶ್ರಮ ತುಮಕೂರು ಇವರು ಮಾರ್ಗದರ್ಶನದಲ್ಲಿ ಗುಬ್ಬಿ ಪಟ್ಟಣಕ್ಕೆ ಆಗಮಿಸುತ್ತಿರುವ ವಿಮೇಕಾನಂದರ 150 ನೇ ವರ್ಷಾಚರಣೆಯ ರಥಯಾತ್ರೆ ಮತ್ತು ವಿಶೇಷ ಸತ್ಸಂಗ ಕಾರ್ಯಕ್ರಮ ಜುಲೈ 2 ರಂದು ನಡೆಯಲಿದೆ. ರಥಯಾತ್ರೆಯನ್ನು ವೈಭವಯುತವಾಗಿ ನಡೆಸಲು ಸಮಿತಿ ಅಗತ್ಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ರಥಯಾತ್ರಾ ಸಮಿತಿ ಗೌರವಾಧ್ಯಕ್ಷ ಕೆ.ಎಲ್.ಗೋಪಾಲಕೃಷ್ಣ ಶೆಟ್ಟಿ ತಿಳಿಸಿದರು. ಗುಬ್ಬಿ ಪಟ್ಟಣದ ವಾಸವಿ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾಡಾನೆ ಹಾವಳಿ: ಪ್ರತಿಭಟನೆ
ಸಕಲೇಶಪುರ: ಕಾಡಾನೆಗಳ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿ ನಡಹಳ್ಳಿ ಗ್ರಾಮಸ್ಥರು ಪಟ್ಟಣದ ಅರಣ್ಯ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಿದರು. ನಡಹಳ್ಳಿ, ದೇಕಲ ,ಕುಂಬರಡಿ, ಮಲ್ಲೇಗದ್ದೆ, ಗುರ್ಜನಹಳ್ಳಿ ಗ್ರಾಮದ ಸುತ್ತಮುತ್ತ ದಶಕದಿಂದ ನಿರಂತರ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಾಫಿ ತೋಟಗಳಿಗೆ ಕಾಲಿಡದಂತಾಗಿದೆ ಭತ್ತದ ಗದ್ದೆ ಸಂರಕ್ಷಣೆಗಾಗಿ ಗದ್ದೆಗಳ ಸಮೀಪ ಗುಡಿಸಲು ನಿರ್ಮಿಸಿ ರಾತ್ರಿ ವೇಳೆ ಕಾವಲು ಕಾಯಬೇಕಿದೆ. ಬಾಳೆ, ಅಡಿಕೆ, ಹಸಿರು ಮೆಣಸಿನಕಾಯಿ ಬೆಳೆ ಬೆಳೆಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಯಾವುದೆ ಪ್ರಯೋಜನವಾಗಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು ಪ್ರತಿಭಟನೆ ನಡೆಸುವ ವಿಚಾರ ತಿಳಿಸಿದ್ದರೂ ಎಸಿಎಫ್ ಹಾಗೂ ಆರ್ಎಫ್ಒ ಕಚೇರಿಯಲ್ಲಿ ಇರುವುದಿಲ್ಲ ಎಂದು ದೂರಿದ ಪ್ರತಿಭಟನಾಕಾರರು ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಕಚೇರಿಗೆ ಆಗಮಿಸಿದ ಎಸಿಎಫ್ ಚೌಧರಿಯವರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ತಮ್ಮ ಅಳಲನ್ನು ತೊಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

