ತುಮಕೂರು

ಮದಲೂರು ಕೆರೆ ಯೋಜನೆಗೆ ರೈತರ ಸಹಕಾರ ಅಗತ್ಯ

Published On :

ಕ.ಪ್ರ. ವಾರ್ತೆ ಶಿರಾ ಜೂ.30
ಮದಲೂರು ಕೆರೆ ಯೋಜನೆಗೆ ರೈತರು ಭೂಮಿ ನೀಡುವ ವಿಚಾರದಲ್ಲಿ ಸಹಕಾರ ನೀಡಬೇಕು. ಇದರಿಂದ ಇಡೀ ತಾಲೂಕಿನ ಜನತೆ ಅನುಕೂಲ ಪಡೆದಂತಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ಖಾತೆಗಳ ಸಚಿವರಾದ ಟಿ.ಬಿ.ಜಯಚಂದ್ರ ಮದಲೂರು ಕೆರೆ ನಾಲಾ ಭಾಗದ ರೈತರಲ್ಲಿ ಮನವಿ ಮಾಡಿಕೊಂಡರು.
ಅವರು ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಚಳ್ಳಕೆರೆಯ ಶ್ರೀ ಆಂಜನೇಯ ಸ್ವಾಮಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಕೀಲು ಮತ್ತು ಮೂಳೆ ರೋಗ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಾನವರಲ್ಲಿ ಬರುವ ಮೂಳೆ ರೋಗಗಳಿಗೆ ಪ್ಲೋರೈಡ್‌ಯುಕ್ತ ನೀರು ಕಾರಣವಾಗಿದ್ದು ರಾಜ್ಯದಲ್ಲೇ ಶಿರಾ ತಾಲೂಕು ಹೆಚ್ಚು ಪ್ಲೋರೈಡ್‌ಯುಕ್ತ ನೀರು ಹೊಂದಿದೆ. ಇದರಿಂದ ತಾಲೂಕಿನಲ್ಲಿ ಹೆಚ್ಚು ಸಂಖ್ಯೆಯ ಮೂಳೆ ರೋಗಿಗಳಿದ್ದಾರೆ. ಮದಲೂರು ಕೆರೆಗೆ ಹೇಮಾವತಿ ನೀರು ಹರಿಯುವುದರಿಂದ ಈ ಸಮಸ್ಯೆಯಿಂದ ಜನತೆ ಪಾರಾಗುತ್ತಾರೆ. ಇದಕ್ಕೆ ಈ ಭಾಗದ ರೈತರ ಔದಾರ್ಯವೆ ಮುಖ್ಯ ಎಂದರು.
ಮದಲೂರು ಕೆರೆಗೆ ನೀರು ಹರಿಸುವ ಕಾಮಗಾರಿ ಮುಗಿಸಿ ನೀರು ಬರಲು ಅವಕಾಶ ಮಾಡಿಕೊಡಿ. ಈಗಾಗಲೇ ರೈತರ ಜಮೀನುಗಳಿಗೆ ಪರಿಹಾರವಾಗಿ ಮಾರುಕಟ್ಟೆ ಬೆಲೆಯ 4 ರಷ್ಟು ಹಣ ನೀಡಲು ಸರ್ಕಾರ ನಿರ್ಧರಿಸಿದೆ. ಈಗ ಮಳೆಗಾಲ ಶುರುವಾಗಿದ್ದು ಹೇಮಾವತಿ ಜಲಾಶಯ ತುಂಬಿ ನೀರು ಬಂದರೆ ಈ ವರ್ಷವಾದರೂ ತಾಲೂಕಿನ ಅಂರ್ತಜಲ ಹೆಚ್ಚುತ್ತದೆ ಎಂದರು.
ನೀರಾವರಿ ಯೋಜನೆ: ಕೇಂದ್ರ ಸರ್ಕಾರ ನೀರಾವರಿ ಯೋಜನೆಗಳಿಗೆ 1400 ಕೋಟಿ ರು. ಹಣ ಬಿಡುಗಡೆ ಮಾಡಿದ್ದು ಅದರಲ್ಲಿ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗುವುದು. ಶಿರಾ ತಾಲೂಕಿನಾದ್ಯಂತ 22 ಕೋಟಿ ವೆಚ್ಚದಲ್ಲಿ 210 ಹಳ್ಳಿಗಳಲ್ಲಿ ನೀರಾವರಿ ಯೋಜನೆ ಕಾಮಗಾರಿ ಕೈಗೊಳ್ಳಲಾಗಿದ್ದು ಅದರಲ್ಲಿ 110 ಹಳ್ಳಿಗಳಲ್ಲಿ ಕಾಮಗಾರಿ ಮುಗಿದಿದೆ. ಉಳಿದ ಹಳ್ಳಿಗಳ ಕಾಮಗಾರಿಯು ಇನ್ನೆರಡು ತಿಂಗಳಲ್ಲಿ ಮುಗಿಯಲಿದೆ ಎಂದರು.  ಶಿರಾ, ಮಧುಗಿರಿ, ಪಾವಗಡ, ಚಿತ್ರದುರ್ಗ, ಕೋಲಾರ ಇಲ್ಲಿ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದ್ದು ಅದರಲ್ಲೂ ಶಿರಾ ಅತಿ ಹೆಚ್ಚು ಪ್ಲೋರೈಡ್ ಅಂಶ ಹೊಂದಿದೆ. ಕೀಲು ಮೂಳೆ ಕಾಯಿಲೆಗಳು ಇಂತಹ ಈ ನೀರು ಕುಡಿಯುವುದರಿಂದಲೇ ಬರುವುದು. ಇನ್ನು ಮುಂದಾದರು ಶುದ್ಧ ನೀರನ್ನು ಕುಡಿದು ಇಂತಹ ಕಾಯಿಲೆಗಳಿಂದ ಮುಕ್ತರಾಗೋಣ ಎಂದರು.
ಮುಂದುವರಿಕೆ: ಶಿಬಿರದ ಪ್ರಾಯೋಜಕರಾದ ಎ.ರಾಮಪ್ಪ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸುಮಾರು 4 ತಾಲೂಕುಗಳಲ್ಲಿ ಇಂತಹ ಕೀಲು ಮೂಳೆ ಶಿಬಿರಗಳನ್ನು ಉತ್ತಮ ತಜ್ಞವೈದ್ಯರ ತಂಡದಿಂದ ನಡೆಸಿಕೊಂಡು ಬಂದಿದ್ದೇನೆ. ಇನ್ನೂ ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.
ಸಮಾರಂಭದಲ್ಲಿ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶಫಿ ಅಹಮದ್, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸೇತುರಾಂ, ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾ.ಟಿ.ಮಂಜುನಾಥ್, ಮಾಜಿ ಜಿ.ಪಂ.ಸದಸ್ಯ ಪರ್ವತಪ್ಪ, ಅಲ್ಲಾಭಕ್ಷ್ ಪ್ಯಾರು, ಚಂಗಾವರ ಮಾರಣ್ಣ, ಎಸ್.ಎನ್. ಕೃಷ್ಣಯ್ಯ, ನಗರಸಭಾ ಸದಸ್ಯ ಬಸವರಾಜು, ಡಿ.ಸಿ.ಅಶೋಕ್, ರಾಜಣ್ಣ ಮತ್ತಿತರರು ಹಾಜರಿದ್ದರು.
ಮಾರಣ್ಣ ಸ್ವಾಗತಿಸಿ, ಉದಯಶಂಕರ್ ವಂದಿಸಿ, ಡಿ.ಸಿ.ಅಶೋಕ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.