ಹೊಳೆನರಸೀಪುರ ಪುರಸಭೆ: ಶೇ. 74.53 ಹಕ್ಕು ಚಲಾವಣೆ
ಕಪ್ರ ವಾರ್ತೆ ಹೊಳೆನರಸೀಪುರ ಮಾ.7
ಇಲ್ಲಿನ ಪುರಸಭೆಯ 23 ವಾರ್ಡ್ಗಳ ಪೈಕಿ 2 ವಾರ್ಡ್ಗಳಲ್ಲಿ ಅವಿರೋಧ ಆಯ್ಕೆ ನಡೆದಿದ್ದ ಹಿನ್ನೆಲೆಯಲ್ಲಿ 21ವಾರ್ಡ್ಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ 20,225 ಮತಗಳಲ್ಲಿ 15,074 ಮತಗಳು ಚಲಾವಣೆಗೊಂಡು ಶೇ.74.53ರಷ್ಟು ಮತದಾನವಾಗಿದೆ.
ಕೆಲವೊಂದು ವಾರ್ಡ್ಗಳಲ್ಲಿ ಸಣ ಪುಟ್ಟ ವಾಗ್ವಾದ ಹಾಗೂ ಗಲಾಟೆ ಹೊರತುಪಡಿಸಿದಂತೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯಿತು. ಇಲ್ಲಿನ 14ನೇ ವಾರ್ಡಿನಲ್ಲಿನ ಮತಯಂತ್ರ ಕೈಕೊಟ್ಟ ಪರಿಣಾಮ ಹತ್ತು ನಿಮಿಷಗಳ ಮತದಾನ ವಿಳಂಬವಾದದ್ದು ಬಿಟ್ಟರೆ ಇನ್ನುಳಿದಂತೆ ಮತದಾನದಲ್ಲಿ ಯಾವುದೇ ಗೊಂದಲಗಳು ಕಂಡುಬರಲಿಲ್ಲ. ನಿಧಾನಗತಿಯಲ್ಲಿ ಆರಂಭಗೊಂಡ ಮತದಾನವು ಕೆಲವೊಂದು ವಾರ್ಡ್ಗಳಲ್ಲಿ ಮಧ್ಯಾಹ್ನದ ವೇಳೆಗೆ ಶೇ.70ರಷ್ಟು ಮತದಾನವಾದರೆ, ಇನ್ನುಳಿದಂತೆ ವಿವಿಧ ವಾಡರುಗಳಲ್ಲಿ ಮಧ್ಯಾಹ್ನದ ವೇಳೆಗೂ ಶೇ.50ರಷ್ಟು ಮತದಾನವಾಗಿತ್ತು. ಮಧ್ಯಾಹ್ನದ ನಂತರ ಚುರುಕುಗೊಂಡ ಮತದಾನ ನಂತರ ಮತದಾನದ ವೇಳೆ ಅಂತ್ಯಗೊಳ್ಳುವ ಸಮಯದಲ್ಲಿ ಬಿರುಸು ಕಂಡಿತು. ಮತದಾನದ ವೇಳೆಯಲ್ಲಿ 18 ಮತ್ತು 19ನೇ ವಾರ್ಡ್ಗಳಲ್ಲಿ ವಯೋವೃದ್ಧ ಮಹಿಳೆಯರು ಕುಟುಂಬದವರ ಸಹಾಯದೊಂದಿಗೆ ಮತಚಲಾಯಿಸಲು ಮತಗಟ್ಟೆಗೆ ಉತ್ಸಾಹದಿಂದಲೇ ಬಂದು ಮತಚಲಾಯಿಸಿದ್ದು ಕಂಡು ಬಂತು.
ಮತಯಂತ್ರಗಳನ್ನು ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿಗೆ ತರಲಾಯಿತಾದರೂ, ಸಂಜೆ 7ಗಂಟೆಯಾದರೂ ಮತಯಂತ್ರಗಳನ್ನು ಇರಿಸುವ ಕೊಠಡಿಗಳನ್ನು ಭದ್ರಪಡಿಸುವ ಕಾರ್ಯ ನಡೆಯದಿದ್ದುದನ್ನು ಕಂಡ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಹಸೀಲ್ದಾರ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಇದೇ ಸಂದರ್ಭದಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ಗೋಪಾಲ ನಾಯಕ್ ಅವರು ಕೆಲ ಕಾಂಗ್ರೇಸ್ ಮುಖಂಡರನ್ನು ಮತಯಂತ್ರಗಳನ್ನು ಇರಿಸಿರುವ ನರ್ಸಿಂಗ್ ಕಾಲೇಜಿನ ಒಳ ಆವರಣದಿಂದ ಹೊರಹೋಗುವಂತೆ ಹೇಳಿದ್ದು ಸ್ಥಳದಲ್ಲಿದ್ದ ನೂರಾರು ಕಾಂಗ್ರೆಸಿಗರನ್ನು ಕೆರಳಿಸಿ, ಪೊಲೀಸರ ವಿರುದ್ಧ, ಆರಕ್ಷಕ ನಿರೀಕ್ಷಕರ ವಿರುದ್ಧ ನೂರಾರು ಕಾಂಗ್ರೆಸ್ಸಿಗರು ಘೋಷಣೆ ಕೂಗಿದರು.
ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕಿ ಅನುಪಮ, ಕೆ.ಶ್ರೀನಿವಾಸ್, ಕೆ.ರಾಜೇಗೌಡ ಮೊದಲಾದವರು ಮತಯಂತ್ರಗಳ ಸುರಕ್ಷತೆಯ ಕುರಿತಂತೆ ತಹಸೀಲ್ದಾರ್ ಈಶ್ವರಪ್ಪ, ಡಿವೈಎಸ್ಪಿ ಪ್ರದೀಪ್ಕುಮಾರ್ ಅವರೊಂದಿಗೆ ವಾಗ್ವಾದ ನಡೆಸಿದ ಘಟನೆ ಕೂಡ ನಡೆಯಿತು. ಒಟ್ಟಾರೆಯಾಗಿ ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಿದ್ದರೂ ನಂತರದಲ್ಲಿ ಮತಯಂತ್ರಗಳನ್ನು ಇರಿಸಿದ್ದ ಸರ್ಕಾರಿ ನರ್ಸಿಂಗ್ಕಾಲೇಜಿನ ಬಳಿಯಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು.
ಪುರಸಭೆಯ 21ವಾರ್ಡ್ಗಳಿಗೆ ನಡೆದ ಮತದಾನದಲ್ಲಿ 21ನೇ ವಾರ್ಡ್ನಲ್ಲಿ ಅತಿ ಹೆಚ್ಚಿನ ಶೇ.86.17ರಷ್ಟು ಮತದಾನ ನಡೆದರೆ, 17ನೇ ವಾರ್ಡ್ಗೆ ಸೇರಿದ 19ನೇ ಮತಗಟ್ಟೆಯಲ್ಲಿ ಅತಿ ಕಡಿಮೆ ಶೇ.61.51ರಷ್ಟು ಮತದಾನ ನಡೆದಿದ್ದು, 7590 ಪುರುಷರು ಮತ್ತು 7484ಮಹಿಳೆಯರೂ ಸೇರಿದಂತೆ ಒಟ್ಟಾರೆಯಾಗಿ ಶೇ.74.53ರಷ್ಟು ಅಂದರೆ 15.074ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

