ಕುಣಿಗಲ್ ಜೆಡಿಎಸ್ ಈಗ ಗೊಂದಲದ ಗೂಡು
ಕ.ಪ್ರ.ವಾರ್ತೆ ಕುಣಿಗಲ್ ಮಾ 24
ತಾಲೂಕು ಜೆಡಿಎಸ್ನಲ್ಲಿ ವಿಧಾನಸಭಾ ಟಿಕೆಟ್ ಬಗ್ಗೆ ಉಂಟಾಗಿದ್ದ ಗೊಂದಲ ಶನಿವಾರ ರಾತ್ರಿ ಬಿರುಸುಗೊಂಡಿದ್ದು, ಮಾಜಿ ಸಚಿವ ಡಿ.ನಾಗರಾಜಯ್ಯನವರಿಗೆ ಟಿಕೆಟ್ ಸಿಕ್ಕಿದೆ ಎಂದು ಶನಿವಾರ ರಾತ್ರಿ ಅವರ ಬೆಂಬಲಿಗರು, ವಿವಿಧೆಡೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಎಸ್.ಪಿ.ಮುದ್ದಹನುಮೇಗೌಡರ ಬೆಂಬಲಿಗರು ಇದನ್ನು ನಿರಾಕರಿಸಿ, ವಿಭಿನ್ನ ಚರ್ಚೆಯಲ್ಲಿ ತೊಡಗಿರುವುದರಿಂದ ತಾಲೂಕು ಜೆಡಿಎಸ್ ಗೊಂದಲದ ಗೂಡಾಗಿದೆ.
2008ರ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಜೆಡಿಎಸ್ ಸೇರ್ಪಡೆಗೊಂಡಿದ್ದ ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ, ತಮ್ಮದೇ ಆದ ವರ್ಚಸ್ಸಿನಿಂದ ಜೆಡಿಎಸ್ ಹೈಕಮಾಂಡ್ನಲ್ಲಿ ಛಾಪು ಮೂಡಿಸಿದ್ದರು. ಪಕ್ಷ ಸೇರ್ಪಡೆಗೊಂಡ ಹೊಸದರಲ್ಲಿ ಮಾಜಿ ಸಚಿವ, ಮಾಜಿ ಶಾಸಕ ಹಲವು ವೇದಿಕೆಗಳನ್ನು ಹಂಚಿಕೊಂಡು, ಕಾಲ ಕಳೆದಂತೆ ದೂರ ಸರಿಯುತ್ತಾ, ತಾಲೂಕು ಜೆಡಿಎಸ್ನಲ್ಲಿ ತಮ್ಮದೇ ಆದ ಬಣಗಳನ್ನು ರಚಿಸಿಕೊಂಡರು. ಗುಪ್ತಗಾಮಿನಿಯಾಗಿದ್ದ ಎರಡೂ ಬಣಗಳ ಚಟುವಟಿಕೆ, ಪುರಸಭಾ ಚುನಾವಣೆ ಘೋಷಣೆಯಾದಾಗ ಬಹಿರಂಗವಾಗಿ ಸ್ಫೋಟಗೊಂಡು, ಎರಡು ಬಣಗಳ ಮುಖಂಡರು ಸಕ್ರಿಯಗೊಂಡು ಲಾಬಿ ಜೋರಾಗಿ ಹೈಕಮಾಂಡ್ ಮೇಲೆ ಪ್ರಭಾವ ಸಾರುವ ಮಟ್ಟಕ್ಕೆ ಬೆಳೆದಿದೆ.
ತಾತ್ಕಾಲಿಕ ಮೇಲುಗೈ: ಪುರಸಭೆ ಚುನಾವಣೆಯಲ್ಲಿ ಪಕ್ಷದ ಬಿ ಫಾರಂ ವಿತರಣೆ ಜವಾಬ್ದಾರಿ ಪಡೆದ ಮಾಜಿ ಶಾಸಕರ ಬಣದ ಕೈ ತಾತ್ಕಾಲಿಕವಾಗಿ ಮೇಲಾಯಿತಲ್ಲದೆ, ಪುರಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಈಗ ಬಿ ಫಾರಂ ವಿತರಿಸಿದವರ ನೇತೃತ್ವದಲ್ಲೆ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಹೇಳುವ ಮೂಲಕ ವಿಧಾನಸಭೆಗೆ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಎಸ್ಪಿಎಂ ಎಂದು ಪರೋಕ್ಷವಾಗಿ ಹೇಳಿದ್ದರು.
ತಾಲೂಕು ಜೆಡಿಎಸ್ ಕಳೆದ ಮೂರು ದಶಕಗಳಿಂದ ಹಲವು ಏರಿಳಿತಗಳ ನಡುವೆ ಸದೃಢವಾಗಿ ಕಟ್ಟಿದ್ದ ಮಾಜಿ ಸಚಿವರ ಬಣಕ್ಕೆ ತೀವ್ರ ಅಸಮಾಧಾನ ಉಂಟಾಗಿ, ಪುರಸಭೆ ಚುನಾವಣೆಯಲ್ಲಿ ನಾಗರಾಜಯ್ಯ ಬೆಂಬಲಿಗರು ಬಂಡಾಯವಾಗಿ ನಿಂತು, ಅಧಿಕೃತ ಜೆಡಿಎಸ್ಗೆ ಸರಿಸಮಾನಾದ ಬಲಾಬಲ ಸಾಧಿಸಿ, ಪಕ್ಷದ ವರಿಷ್ಠರ ಗಮನ ಸೆಳೆದರು.
ಹಲವು ತಂತ್ರ: ವಿಧಾನಸಭೆ ಚುನಾವಣೆಗೆ ಬಂಡಾಯವಾಗಿ ತಮ್ಮ ನಾಯಕನನ್ನು ನಿಲ್ಲಿಸುವ ಸಂದೇಶ ಸಹ ರವಾನಿಸಿ ತಾಲೂಕು ಜೆಡಿಎಸ್ ಮೇಲೆ ಹಿಡಿತ ಸಾಧಿಸಲು ಮಾಜಿ ಸಚಿವರ ಬೆಂಬಲಿಗರು ಹಲವು ತಂತ್ರ ಹೂಡಿದರು. ಈ ಮಧ್ಯೆ ಶನಿವಾರ ಮಾಜಿ ಸಚಿವರ ಬೆಂಬಲಿಗರು, ತಾಪಂ ಸದಸ್ಯರು, ಪುರಸಭಾ ಸದಸ್ಯರು, ಜಿಪಂ ಸದಸ್ಯರು, ವಿವಿಧ ಗ್ರಾಪಂ ಅಧ್ಯಕ್ಷರು, ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ತಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರಿದ್ದು, ಮುಖಂಡ ಜಮೀರ್ ಅಹಮದ್ ಮಾಜಿ ಸಚಿವರಿಗೆ ಬೆಂಬಲ ವ್ಯಕ್ತಪಡಿಸಿದರು. ವರಿಷ್ಠರು ನಾಗರಾಜಯ್ಯ ಅವರಿಗೆ ಟಿಕೆಟ್ ಕೊಡುವುದಾಗಿ ಹೇಳಿದರೆಂದು ಶನಿವಾರ ರಾತ್ರಿ ಅವರ ಬೆಂಬಲಿಗರು, ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಪಟಾಕಿ ಸಿಡಿಸಿ ಸಂಭ್ರರಮಿಸಿದರು. ಚುನಾವಣೆ ಪ್ರಚಾರಕ್ಕೆ ಸಿದ್ಧತೆ ಪ್ರಾರಂಬಿಸಿದರು.
ಇದೆಲ್ಲ ಸುಳ್ಳು: ಇದಕ್ಕೆ ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ ಬೆಂಬಲಿಗರು, ಪಕ್ಷದ ವರಿಷ್ಠರು ನಾಗರಾಜಯ್ಯ ಅವರಿಗೆ ಅಂತಹ ಯಾವುದೇ ಭರವಸೆ ನೀಡಿಲ್ಲ. ಇದೆಲ್ಲಾ ಸುಳ್ಳು ಎಂದು ಪ್ರತಿಪಾದಿಸಿ, ವಿನಾಕಾರಣ ಗೊಂದಲ ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹೈಕಮಾಂಡ್ ಧೋರಣೆಯನ್ನು ಕಟುವಾಗಿ ಖಂಡಿಸಿ, ಪಕ್ಷದ ತಾಲೂಕು ನಾಯಕತ್ವಲ್ಲಿ ಗೊಂದಲ ಸೃಷ್ಟಿಯಿಂದ ಮುಂದಿನ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

